ಈಗಾಗಲೇ ಪ್ಲೇ-ಆಫ್ ಪ್ರವೇಶಿಸಿರುವ ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು, ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅಗ್ರ-2 ಸ್ಥಾನಕ್ಕಾಗಿ ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದರೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದು, ಸೋತರೆ ಸನ್‌ರೈಸರ್ಸ್ ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ.
ಹೈದರಾಬಾದ್: ಈ ಬಾರಿ ಐಪಿಎಲ್‌ನಲ್ಲಿ ಅಗ್ರ-2 ಸ್ಥಾನ ಪಡೆದು ಕ್ವಾಲಿಫೈಯರ್-1ರಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿರುವ ಹಾಲಿ ಚಾಂಪಿಯನ್ ಆರ್‌ಸಿಬಿ ತಂಡ ಶುಕ್ರವಾರ ಲೀಗ್ ಹಂತದ ತನ್ನ ಕೊನೆ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

ಆರ್‌ಸಿಬಿ ಆಡಿರುವ 13 ಪಂದ್ಯಗಳ ಪೈಕಿ 9ರಲ್ಲಿ ಗೆದ್ದಿದ್ದು, 18 ಅಂಕಗಳೊಂದಿಗೆ ಈಗಾಗಲೇ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಆದರೆ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನದಲ್ಲಿ ಉಳಿದು ಕ್ವಾಲಿಫೈಯರ್-1 ಪ್ರವೇಶಿಸುವುದು ಆರ್‌ಸಿಬಿಯ ಪ್ರಮುಖ ಗುರಿ. ಕ್ವಾಲಿಫೈಯರ್-1ರಲ್ಲಿ ಗೆದ್ದರೆ ನೇರವಾಗಿ ಫೈನಲ್‌ಗೇರಲಿದ್ದು, ಸೋತರೆ ಮತ್ತೊಂದು ಅವಕಾಶ ಸಿಗಲಿದೆ. ಹೀಗಾಗಿಯೇ ತಂಡ ಅಗ್ರ-2 ಸ್ಥಾನದಲ್ಲೇ ಉಳಿಯಲು ಹೋರಾಡಲಿದೆ.
ಇಂದು ಆರ್‌ಸಿಬಿ ತಂಡವು ಗೆದ್ದರೇ?
ಸನ್‌ರೈಸರ್ಸ್ ವಿರುದ್ಧ ಗೆದ್ದರೆ ಆರ್‌ಸಿಬಿ 20 ಅಂಕದೊಂದಿಗೆ ನಂ.1 ಸ್ಥಾನ ಪಡೆದುಕೊಳ್ಳಲಿದೆ. ಒಂದು ವೇಳೆ ಸೋತರೂ ತಂಡದ ನೆಟ್ ರನ್‌ರೇಟ್(+1.065) ಉತ್ತಮವಾಗಿರುವುದರಿಂದ ಅಗ್ರಸ್ಥಾನ ಅಥವಾ 2ನೇ ಸ್ಥಾನದಲ್ಲೇ ಇದ್ದು ಪ್ಲೇ-ಆಫ್ ಪ್ರವೇಶಿಸುವ ಸಾಧ್ಯತೆಯಿದೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್ ಉತ್ತಮ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.
ಮತ್ತೊಂದೆಡೆ ಸನ್‌ರೈಸರ್ಸ್ 13 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, 16 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ತಂಡ ಈಗಾಗಲೇ ಪ್ಲೇ-ಆಫ್ ಪ್ರವೇಶಿಸಿದ್ದರೂ ಅಗ್ರ-2 ಸ್ಥಾನದ ಮೇಲೆ ಕಣ್ಣಿಟ್ಟಿದೆ. ಇದಕ್ಕಾಗಿ ತಂಡ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ತಂಡ 3ನೇ ಸ್ಥಾನಿಯಾಗಿ ಪ್ಲೇ-ಆಫ್ ಪ್ರವೇಶಿಸಿ, ಎಲಿಮಿನೇಟರ್‌ನಲ್ಲಿ ಆಡಬೇಕಾಗುತ್ತದೆ. ಎಲಿಮಿನೇಟರ್‌ನಲ್ಲಿ ಸೋಲುವ ತಂಡ ಟೂರ್ನಿಯಿಂದಲೇ ಹೊರಬೀಳಲಿದೆ.
ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ
ಆರ್‌ಸಿಬಿ: ಜೇಕಬ್ ಬೆಥೆಲ್, ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್(ನಾಯಕ), ವೆಂಕಟೇಶ್ ಅಯ್ಯರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್, ಕೃನಾಲ್ ಪಾಂಡ್ಯ, ರಸಿಕ್ ಸಲಂ ಧರ್, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್.
ಸನ್‌ರೈಸರ್ಸ್ ಹೈದರಾಬಾದ್: ಟ್ರ್ಯಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್(ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಸಲಿಲ್ ಅರೋರ, ಸ್ಮರಣ್ ರವಿಚಂದ್ರನ್, ಪ್ಯಾಟ್ ಕಮಿನ್ಸ್(ನಾಯಕ), ಶಿವಾಂಗ್ ಕುಮಾರ್, ಇಶಾನ್ ಮಾಲಿಂಗ, ಸಕೀಬ್ ಹೊಸೈನ್, ಪ್ರಫುಲ್ ಹಿಂಗೆ.
ಪಂದ್ಯ ಆರಂಭ: ಸಂಜೆ 7.30ರಿಂದ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.
