ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಪಂಜಾಬ್ ಕಿಂಗ್ಸ್‌ ಕಟ್ಟಿಹಾಕುತ್ತಾ ಆರ್‌ಸಿಬಿ?

ಹರಾಜಿನಲ್ಲಿ ಬ್ಯಾಟರ್‌ಗಳನ್ನು ಖರೀದಿಸಲು ತೋರಿದ ಉತ್ಸುಕತೆಯ ಅರ್ಧದಷ್ಟನ್ನು ಬೌಲರ್‌ಗಳ ಖರೀದಿಗೆ ತೋರಿದ್ದರೆ, ತಂಡ ಟೂರ್ನಿಯ ಆರಂಭದಲ್ಲೇ ಒತ್ತಡಕ್ಕೆ ಸಿಲುಕುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ

Royal Challengers Bengaluru take on Punjab Kings Challenges in Bengaluru kvn

ಬೆಂಗಳೂರು(ಮಾ.25): ‘ಹೊಸ ಅಧ್ಯಾಯ’ವನ್ನು ಹಳೆಯ ರೀತಿಯಲ್ಲೇ ಆರಂಭಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, 17ನೇ ಐಪಿಎಲ್‌ನಲ್ಲಿ ಮೊದಲ ಜಯಕ್ಕಾಗಿ ತುಡಿಯುತ್ತಿದ್ದು, ಸೋಮವಾರ ತನ್ನ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ಸವಾಲನ್ನು ಎದುರಿಸಲಿದೆ. ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಅನುಭವಿಸಿದ ಸೋಲಿನಿಂದ, ಆರ್‌ಸಿಬಿಗೆ ತನ್ನ ತಂಡದ ವಾಸ್ತವ ಸ್ಥಿತಿಯನ್ನು ಅರಿತಿದ್ದರೆ, ಈ ಪಂದ್ಯದಲ್ಲಿ ಅಗತ್ಯ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ.

ಹರಾಜಿನಲ್ಲಿ ಬ್ಯಾಟರ್‌ಗಳನ್ನು ಖರೀದಿಸಲು ತೋರಿದ ಉತ್ಸುಕತೆಯ ಅರ್ಧದಷ್ಟನ್ನು ಬೌಲರ್‌ಗಳ ಖರೀದಿಗೆ ತೋರಿದ್ದರೆ, ತಂಡ ಟೂರ್ನಿಯ ಆರಂಭದಲ್ಲೇ ಒತ್ತಡಕ್ಕೆ ಸಿಲುಕುವ ಪರಿಸ್ಥಿತಿ ಬರುತ್ತಿರಲಿಲ್ಲವೇನೋ.

ಈ ಸಲವೂ ಕೇವಲ ಬ್ಯಾಟರ್‌ಗಳ ಮೇಲೆಯೇ ಹೆಚ್ಚು ಅವಲಂಬಿತಗೊಂಡಿರುವ ಆರ್‌ಸಿಬಿ, ಬ್ಯಾಟರ್‌ಗಳ ಸ್ವರ್ಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲ್ಲಲು ರನ್‌ ಹೊಳೆಯನ್ನೇ ಹರಿಸಬೇಕಾಗಬಹುದು. ಮೊದಲು ಬ್ಯಾಟ್‌ ಮಾಡಿದರೆ ಕನಿಷ್ಠ 200-220 ರನ್‌ ಕಲೆಹಾಕಬೇಕಾದ ಅನಿವಾರ್ಯತೆ ಎದುರಾಗಬಹುದು. ಇನ್ನು ಮೊದಲು ಫೀಲ್ಡ್‌ ಮಾಡಿದರೆ 200+ ರನ್‌ ಗುರಿ ಬೆನ್ನತ್ತಲು ಪಂದ್ಯ ಆರಂಭಗೊಳ್ಳುವ ಮೊದಲೇ ಮಾನಸಿಕವಾಗಿ ಸಜ್ಜಾಗಬೇಕಾದ ಅಗತ್ಯತೆ ಸೃಷ್ಟಿಯಾದರೆ ಅಚ್ಚರಿಯಿಲ್ಲ.

IPL 2024 ಗುಜರಾತ್ ಟೈಟಾನ್ಸ್ ಎದುರು ಮುಂಬೈ ಇಂಡಿಯನ್ಸ್‌ಗೆ ಮೊದಲ ಸೋಲಿನ ಶಾಕ್‌!

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸಿಕ್ಕ ಸಕಾರಾತ್ಮಕ ಫಲಿತಾಂಶವೆಂದರೆ ಆರಂಭಿಕ ಆಘಾತದ ಬಳಿಕವೂ ತಂಡ ಸ್ಪರ್ಧಾತ್ಮಕ ಮೊತ್ತ ತಲುಪಲು ನೆರವಾದ ಅನುಜ್‌ ರಾವತ್‌ ಹಾಗೂ ದಿನೇಶ್‌ ಕಾರ್ತಿಕ್‌ರ ಇನ್ನಿಂಗ್ಸ್‌. ಈ ಇಬ್ಬರ ಅಬ್ಬರ ಕೇವಲ ಒಂದು ಪಂದ್ಯಕ್ಕೆ ಸೀಮಿತಗೊಳ್ಳುತ್ತಾ ಅಥವಾ ಮುಂದಿನ ಪಂದ್ಯಗಳಲ್ಲೂ ಮುಂದುವರಿಯುತ್ತಾ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

4ನೇ ವಿದೇಶಿ ಆಟಗಾರನ ಗೊಂದಲ: ಫಾಫ್‌ ಡು ಪ್ಲೆಸಿ, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌ ತಂಡದಲ್ಲಿ ಇರಲೇಬೇಕು. 4ನೇ ವಿದೇಶಿ ಆಟಗಾರನಾಗಿ ಯಾರನ್ನು ಆಡಿಸಬೇಕು ಎನ್ನುವ ಬಗ್ಗೆ ಆರ್‌ಸಿಬಿ ಸ್ಪಷ್ಟತೆ ಕಂಡುಕೊಳ್ಳದಿದ್ದರೆ ಗೆಲುವು ಕಷ್ಟವಾಗಬಹುದು. ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್‌ ವಿಲ್‌ ಜ್ಯಾಕ್ಸ್‌ಗೆ ಅವಕಾಶ ನೀಡುವುದು ಸೂಕ್ತ ಎನ್ನುವ ಅಭಿಪ್ರಾಯಗಳು ಈಗಾಗಲೇ ಹಲವರಿಂದ ವ್ಯಕ್ತವಾಗಿದೆ. ಜ್ಯಾಕ್ಸ್‌ ಸೇರ್ಪಡೆ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಬಲ ತುಂಬಲಿದ್ದು, ಅವರು ಬೌಲಿಂಗ್‌ನಲ್ಲೂ ನೆರವಾಗಬಲ್ಲರು.

ಮೈದಾನದಲ್ಲಿ ಅತಿರೇಕದ ವರ್ತನೆ ಮಾಡಿದ ಕೆಕೆಆರ್ ವೇಗಿ ರಾಣಾಗೆ ಬಿತ್ತು ಬರೆ..! ಗಂಭೀರ್ ಹೋದಲ್ಲೆಲ್ಲಾ ಕಿರಿಕ್ ಎಂದ ಫ್ಯಾನ್ಸ್

ಆತ್ಮವಿಶ್ವಾಸದಲ್ಲಿ ಪಂಜಾಬ್‌: ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಪಂಜಾಬ್‌ ಕಿಂಗ್ಸ್‌, ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ತಂಡದಲ್ಲಿ ಸಿಕ್ಸ್‌ ಹಿಟ್ಟರ್‌ಗಳ ದಂಡೇ ಇದ್ದು, ಆರ್‌ಸಿಬಿ ಬೌಲರ್‌ಗಳ ಮುಂದೆ ಭಾರಿ ದೊಡ್ಡ ಸವಾಲಿದೆ. ತಂಡದ ಬೌಲಿಂಗ್‌ ವಿಭಾಗವೂ ವೈವಿಧ್ಯತೆಯಿಂದ ಕೂಡಿದ್ದು, ತವರಿನಲ್ಲಿ ಖಾತೆ ತೆರೆಯಲು ಆರ್‌ಸಿಬಿ ನಿರೀಕ್ಷೆಗೂ ಮೀರಿ ಆಡಬೇಕಾಗಬಹುದು.

ಒಟ್ಟು ಮುಖಾಮುಖಿ: 31

ಆರ್‌ಸಿಬಿ: 14

ಪಂಜಾಬ್‌: 17

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಡು ಪ್ಲೆಸಿ (ನಾಯಕ), ಕೊಹ್ಲಿ, ಪಾಟೀದಾರ್‌, ಮ್ಯಾಕ್ಸ್‌ವೆಲ್‌, ಗ್ರೀನ್‌, ರಾವತ್‌, ಕಾರ್ತಿಕ್‌, ಜ್ಯಾಕ್ಸ್‌/ಜೋಸೆಫ್‌, ಕರ್ಣ್‌, ಸಿರಾಜ್‌, ಮಯಾಂಕ್‌, ದಯಾಳ್‌,

ಪಂಜಾಬ್‌: ಧವನ್‌ (ನಾಯಕ), ಬೇರ್‌ಸ್ಟೋವ್‌, ಪ್ರಭ್‌ಸಿಮ್ರನ್‌, ಕರ್ರನ್‌, ಜಿತೇಶ್‌, ಲಿವಿಂಗ್‌ಸ್ಟೋನ್‌, ಶಶಾಂಕ್‌, ಹರ್ಪ್ರೀತ್‌, ಹರ್ಷಲ್‌, ರಬಾಡ, ಅರ್ಶ್‌ದೀಪ್‌.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಸಿನಿಮಾ

ಪಿಚ್‌ ರಿಪೋರ್ಟ್: ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿ. ಇಲ್ಲಿ ಸಾಮಾನ್ಯವಾಗಿ ಟಾಸ್‌ ಗೆಲ್ಲುವ ತಂಡಗಳು ಮೊದಲು ಫೀಲ್ಡ್‌ ಮಾಡಿದ ಉದಾಹರಣೆಯೇ ಹೆಚ್ಚು. 200+ ಮೊತ್ತವೂ ಇಲ್ಲಿ ಸುರಕ್ಷಿತವಲ್ಲ. ರನ್‌ ಹೊಳೆ ನಿರೀಕ್ಷಿಸಬಹುದು.
 

Latest Videos
Follow Us:
Download App:
  • android
  • ios