Asianet Suvarna News Asianet Suvarna News

IPL 2024 ಗುಜರಾತ್ ಟೈಟಾನ್ಸ್ ಎದುರು ಮುಂಬೈ ಇಂಡಿಯನ್ಸ್‌ಗೆ ಮೊದಲ ಸೋಲಿನ ಶಾಕ್‌!

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಬೂಮ್ರಾ ಮಾರಕ ದಾಳಿ ಹೊರತಾಗಿಯೂ 6 ವಿಕೆಟ್‌ಗೆ 168 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರೂ ಕೊನೆಯಲ್ಲಿ ಸತತ ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿತು. 9 ವಿಕೆಟ್‌ಗೆ 162 ರನ್‌ ಗಳಿಸಿ ಶರಣಾಯಿತು.

IPL 2024 Gujarat Titans thrash Mumbai Indians by 6 runs kvn
Author
First Published Mar 25, 2024, 10:07 AM IST

ಅಹಮದಾಬಾದ್‌(ಮಾ.25): ಸುಲಭದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯದಲ್ಲಿ ಕೊನೆಯಲ್ಲಿ ಒತ್ತಡಕ್ಕೊಳಗಾದ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 17ನೇ ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಸೋಲಿನ ಆರಂಭ ಪಡೆದಿದೆ. ಭಾನುವಾರ ಮುಂಬೈ ವಿರುದ್ಧ ಗುಜರಾತ್ ಟೈಟಾನ್ಸ್‌ 6 ರನ್‌ ರೋಚಕ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಬೂಮ್ರಾ ಮಾರಕ ದಾಳಿ ಹೊರತಾಗಿಯೂ 6 ವಿಕೆಟ್‌ಗೆ 168 ರನ್‌ ಕಲೆಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ಒಂದು ಹಂತದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದರೂ ಕೊನೆಯಲ್ಲಿ ಸತತ ವಿಕೆಟ್‌ ಕಳೆದುಕೊಂಡು ಪಂದ್ಯ ಕೈಚೆಲ್ಲಿತು. 9 ವಿಕೆಟ್‌ಗೆ 162 ರನ್‌ ಗಳಿಸಿ ಶರಣಾಯಿತು.

ಇಶಾನ್‌ ಕಿಶನ್‌ ಶೂನ್ಯಕ್ಕೆ ನಿರ್ಗಮಿಸಿದ ಬಳಿಕ ನಮನ್‌ ಧೀರ್‌ 10 ಎಸೆತಕ್ಕೆ 20 ರನ್‌ ಸಿಡಿಸಿದರು. ನಂತರ ರೋಹಿತ್‌ ಹಾಗೂ ಡೆವಾಲ್ಡ್‌ ಬ್ರೆವಿಸ್‌ ಜೊತೆಗೂಡಿ 3ನೇ ವಿಕೆಟ್‌ಗೆ 77 ರನ್‌ ಸೇರಿಸಿದರು. ಆದರೆ 48 ಎಸೆತದಲ್ಲಿ 62 ರನ್ ಬೇಕಿದ್ದಾಗ ರೋಹಿತ್‌(43) ಔಟಾಗುವುದರೊಂದಿಗೆ ಪಂದ್ಯಕ್ಕೆ ತಿರುವು ಲಭಿಸಿತು. 16ನೇ ಓವರಲ್ಲಿ ಬ್ರೆವಿಸ್‌(46) ನಿರ್ಗಮಿಸಿದ ಬಳಿಕ ಇತರರು ಕೈಕೊಟ್ಟರು. ಕೊನೆ 13 ಎಸೆತದಲ್ಲಿ 5 ವಿಕೆಟ್‌ ಕಳೆದುಕೊಂಡ ತಂಡ ಸೋಲೊಪ್ಪಿಕೊಂಡಿತು.

ರೋಹಿತ್ ಪರ ಘೋಷಣೆ, ಪಾಂಡ್ಯ ವಿರುದ್ಧ ಆಕ್ರೋಶದ ನಡುವೆ ಮುಂಬೈಗೆ 169 ರನ್ ಟಾರ್ಗೆಟ್!

ಬುಮ್ರಾ ಮ್ಯಾಜಿಕ್‌: ತಾನೇಕೆ ವಿಶ್ವಶ್ರೇಷ್ಠ ಬೌಲರ್‌ ಎಂಬುದನ್ನು ಬುಮ್ರಾ ಈ ಪಂದ್ಯದಲ್ಲಿ ಮತ್ತೆ ಸಾಬೀತುಪಡಿಸಿದರು. ಇತರೆಲ್ಲಾ ಬೌಲರ್‌ಗಳನ್ನು ಗುಜರಾತ್‌ ಬ್ಯಾಟರ್‌ಗಳು ದಂಡಿಸಿದರೂ ಬುಮ್ರಾ ಮುಂದೆ ನಿರುತ್ತರರಾದರು. ಸಾಯಿ ಸುದರ್ಶನ್‌(45), ಶುಭ್‌ಮನ್‌ ಗಿಲ್‌(31), ರಾಹುಲ್‌ ತೆವಾಟಿಯಾ(22) ಹೊರತುಪಡಿಸಿ ಇನ್ಯಾರಿಗೂ ದೊಡ್ಡ ಮೊತ್ತ ಗಳಿಸಲಾಗಲಿಲ್ಲ. ಬುಮ್ರಾ 4 ಓವರಲ್ಲಿ 14 ರನ್‌ಗೆ 3 ವಿಕೆಟ್‌ ಕಿತ್ತರು.

ಸ್ಕೋರ್‌: ಗುಜರಾತ್‌ 168/6 (ಸುದರ್ಶನ್ 45, ಗಿಲ್‌ 31, ಬೂಮ್ರಾ 3-14), ಮುಂಬೈ 162/9 (ಬ್ರೆವಿಸ್‌ 46, ರೋಹಿತ್‌ 43, ಅಜ್ಮತುಲ್ಲಾ 2-27)

2012ರ ಬಳಿಕ ಮೊದಲ ಪಂದ್ಯ ಗೆಲ್ಲದ ಮುಂಬೈ!

ಐಪಿಎಲ್‌ನ ಆವೃತ್ತಿಯ ಮೊದಲ ಪಂದ್ಯದಲ್ಲಿ ಮುಂಬೈ ಕೊನೆ ಬಾರಿ ಗೆಲುವು ಕಂಡಿದ್ದು 2012ರಲ್ಲಿ. ಆ ಬಳಿಕ ಪ್ರತಿ ವರ್ಷವೂ ಮುಂಬೈ ಟೂರ್ನಿಯ ಮೊದಲ ಪಂದ್ಯದಲ್ಲಿ ಸೋತಿವೆ.

ಸ್ಯಾಮ್ಸನ್‌ ಅಬ್ಬರಕ್ಕೆ ಮಣಿದ ಜೈಂಟ್ಸ್‌

ಜೈಪುರ: ಚೊಚ್ಚಲ ಆವೃತ್ತಿ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್ ಈ ಬಾರಿ ಐಪಿಎಲ್‌ನಲ್ಲಿ ಗೆಲುವಿನ ಆರಂಭ ಪಡೆದಿದೆ. ಅಬ್ಬರದ ಬ್ಯಾಟಿಂಗ್‌, ಶಿಸ್ತುಬದ್ಧ ಬೌಲಿಂಗ್‌ ನೆರವಿನಿಂದ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನಕ್ಕೆ ಭಾನುವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ 20 ರನ್‌ ಗೆಲುವು ಲಭಿಸಿತು.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ 4 ವಿಕೆಟ್‌ಗೆ 193 ರನ್‌ ಕಲೆಹಾಕಿತು. ಬೃಹತ್‌ ಗುರಿ ಬೆನ್ನತ್ತಿದ ಲಖನೌಗೆ ರಾಜಸ್ಥಾನ ಬೌಲರ್‌ಗಳು ಮಾರಕವಾಗಿ ಪರಿಣಮಿಸಿದರು. ಆರಂಭದಲ್ಲೇ ಸತತ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿದ ತಂಡ 6 ವಿಕೆಟ್‌ಗೆ 173 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಡಿ ಕಾಕ್‌(04), ದೇವದತ್‌ ಪಡಿಕ್ಕಲ್(00), ಆಯುಶ್‌ ಬದೋನಿ(01) ಔಟಾದಾಗ ತಂಡದ ಮೊತ್ತ ಕೇವಲ 11. ದೀಪಕ್‌ ಹೂಡಾ(13 ಎಸೆತದಲ್ಲಿ 26) ಕೆಲ ಹೊತ್ತು ಹೋರಾಡಿದರೂ 26ಕ್ಕೆ ಇನ್ನಿಂಗ್ಸ್‌ ಕೊನೆಗೊಳಿಸಿದರು. 5ನೇ ವಿಕೆಟ್‌ಗೆ ರಾಹುಲ್‌-ಪೂರನ್ 52 ಎಸೆತದಲ್ಲಿ 85 ರನ್‌ ಸೇರಿಸಿದರೂ ತಂಡಕ್ಕೆ ಸಾಕಾಗಲಿಲ್ಲ. ರಾಹುಲ್‌ 58 ರನ್‌ ಗಳಿಸಿ ನಿರ್ಣಾಯಕ ಹಂತದಲ್ಲಿ ಔಟಾದರೆ, ಪೂರನ್‌ 64 ರನ್ ಸಿಡಿಸಿ ಅಜೇಯವಾಗಿ ಉಳಿದರು.

ಸ್ಯಾಮ್ಸನ್‌ ಅಬ್ಬರ: ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರಾಯಲ್ಸ್‌ ಆರಂಭದಲ್ಲೇ ಸ್ಫೋಟಕ ಆಟಕ್ಕೆ ಒತ್ತುಕೊಟ್ಟಿತು. ಆದರೆ ಜೈಸ್ವಾಲ್‌ 24, ಬಟ್ಲರ್‌ 11ಕ್ಕೆ ಔಟಾದರು. ಈ ವೇಳೆ ಸಂಜುಗೆ ಜೊತೆಯಾದ ರಿಯಾನ್‌ ಪರಾಗ್‌ 43 ರನ್‌ ಗಳಿಸಿದರೆ, ಕೊನೆವರೆಗೂ ಲಖನೌ ಬೌಲರ್‌ಗಳನ್ನು ಚೆಂಡಾಡಿದ ಸಂಜು 52 ಎಸೆತದಲ್ಲಿ ಔಟಾಗದೆ 82 ರನ್‌ ಸಿಡಿಸಿದರು. ಧ್ರುವ್‌ ಜುರೆಲ್‌ 20 ರನ್‌ ಕೊಡುಗೆ ನೀಡಿದರು.

ಸ್ಕೋರ್‌: ರಾಜಸ್ಥಾನ 193/4(ಸ್ಯಾಮ್ಸನ್‌ 82, ರಿಯಾನ್‌ 43, ನವೀನ್‌ 2-41), ಲಖನೌ 173/6(ಪೂರನ್‌ 64*, ರಾಹುಲ್‌ 58, ಬೌಲ್ಟ್‌ 2-35)
 

Follow Us:
Download App:
  • android
  • ios