ಕ್ರಿಕೆಟ್ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಭೇಟಿ ಮಾಡಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ
ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತೀಯ ಕ್ರಿಕೆಟ್ ತಂಡ
ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿ ಜುಲೈ 12ರಿಂದ ಆರಂಭ
ಕ್ರಿಕೆಟ್ ಲೆಜೆಂಡ್ ಗ್ಯಾರಿ ಸೋಬರ್ಸ್ ಭೇಟಿ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರು
ಬಾರ್ಬಡೋಸ್(ಜು.05): ಭಾರತ ಕ್ರಿಕೆಟ್ ತಂಡವು ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಈ ವಾರದ ಆರಂಭದಲ್ಲಿ ರೋಹಿತ್ ಶರ್ಮಾ ಪಡೆ ಬಾರ್ಬಡೋಸ್‌ಗೆ ಬಂದಿಳಿದಿದೆ. ಭಾರತ ತಂಡವು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಜುಲೈ 12ರಿಂದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.
ವೆಸ್ಟ್‌ಇಂಡೀಸ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತದ ನಾಯಕ ರೋಹಿತ್ ಶರ್ಮಾ ಭಾನುವಾರ ಬಾರ್ಬಡೊಸ್ ತಲುಪಿದ್ದಾರೆ. ಅವರ ಜೊತೆ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಕೂಡಾ ಪ್ರಯಾಣಿಸಿದರು. ಈಗಾಗಲೇ ಆರ್.ಅಶ್ವಿನ್, ಜಡೇಜಾ, ಶಾರ್ದೂಲ್ ಠಾಕೂರ್ ವಿಂಡೀಸ್‌ಗೆ ತಲುಪಿದ್ದು ಶೀಘ್ರ ಅಭ್ಯಾಸ ಆರಂಭಿಸಿದ್ದಾರೆ. ಇನ್ನು ಭಾರತ ಕ್ರಿಕೆಟ್ ತಂಡವು ಕೆರಿಬಿಯನ್ ನಾಡಿಗೆ ಬಂದಿಳಿದ ಬಳಿಕ ಬೀಚ್ ವಾಲಿಬಾಲ್ ಆಡುತ್ತಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿತ್ತು. ಇದೀಗ ಬುಧವಾರ ಬಿಸಿಸಿಐ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಭಾರತೀಯ ಕ್ರಿಕೆಟಿಗರು ವೆಸ್ಟ್ ಇಂಡೀಸ್ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ವಿಡಿಯೋದಲ್ಲಿ ಟೀಂ ಇಂಡಿಯಾ ಹೆಡ್ ಕೋಚ್ ರಾಹುಲ್ ದ್ರಾವಿಡ್, ಭಾರತೀಯ ಆಟಗಾರರನ್ನು ಸರ್ ಗ್ಯಾರಿಫೀಲ್ಡ್ ಸೋಬರ್ಸ್‌ಗೆ ಪರಿಚಯ ಮಾಡಿಕೊಟ್ಟರು. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ, ಜೀವಂತ ದಂತಕಥೆ ಸರ್ ಗ್ಯಾರಿ ಸೋಬರ್ಸ್ ಜತೆ ನಗುನಗುತ್ತಲೇ ಮಾತುಕತೆ ನಡೆಸಿದರು. ಈ ವಿಡಿಯೋ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಅಜಿಂಕ್ಯ ರಹಾನೆಗೆ ಉಪನಾಯಕತ್ವ ನೀಡಿದ್ದಕ್ಕೆ ಸೌರವ್ ಗಂಗೂಲಿ ವ್ಯಂಗ್ಯ..!
ಕಳೆದ ಜೂನ್ 23ರಂದು ಬಿಸಿಸಿಐ, ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಿದ್ದು, ಟೆಸ್ಟ್ ಸರಣಿಗೆ ಯಶಸ್ವಿ ಜೈಸ್ವಾಲ್ ಮತ್ತು ಋತುರಾಜ್ ಗಾಯಕ್ವಾಡ್ ಅವರಂತಹ ಯುವ ಆಟಗಾರರಿಗೆ ಮೊದಲ ಬಾರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಭಾಗವಾಗಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಜುಲೈ 12ರಿಂದ ಡೊಮಿನಿಕಾದಲ್ಲಿ ಆರಂಭವಾಗಲಿದ್ದು, ಜುಲೈ 20ರಿಂದ 2ನೇ ಟೆಸ್ಟ್ ಪಂದ್ಯ ಟ್ರಿನಿಡಾಡ್ನಲ್ಲಿ ನಡೆಯಲಿದೆ. ಬಳಿಕ ಜುಲೈ 27, 29ರಂದು ಮೊದಲೆರಡು ಏಕದಿನಕ್ಕೆ ಬಾರ್ಬಡಾಸ್, ಆಗಸ್ಟ್ 1ರಂದು 3ನೇ ಏಕದಿನಕ್ಕೆ ಟ್ರಿನಿಡಾಡ್ ಆತಿಥ್ಯ ವಹಿಸಲಿದೆ.
ಇನ್ನು ಆಗಸ್ಟ್ 3ರಿಂದ ಟ್ರಿನಿಡಾಡ್ನಲ್ಲೇ 5 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದ್ದು, 2 ಮತ್ತು 3ನೇ ಪಂದ್ಯ ಕ್ರಮವಾಗಿ ಆಗಸ್ಟ್ 6, 8ಕ್ಕೆ ಗಯಾನದಲ್ಲಿ, 4 ಮತ್ತು 5ನೇ ಪಂದ್ಯ ಆಗಸ್ಟ್ 12 ಮತ್ತು 13ರಂದು ಫ್ಲೋರಿಡಾದಲ್ಲಿ ನಡೆಯಲಿದೆ. ಇನ್ನು ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿಲ್ಲ.
ಟೆಸ್ಟ್ ಸರಣಿಗೆ ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಶುಭ್‌ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ(ಉಪನಾಯಕ), ಕೆ ಎಸ್ ಭರತ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಯದೇವ್ ಉನಾದ್ಕತ್, ನವದೀಪ್ ಸೈನಿ.
ಏಕದಿನ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ(ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯುಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಮುಕೇಶ್ ಕುಮಾರ್.