Asianet Suvarna News Asianet Suvarna News

ಟೀಂ ಇಂಡಿಯಾ ಬಿಗಿ ಹಿಡಿತದಲ್ಲಿ ಧರ್ಮಶಾಲಾ ಟೆಸ್ಟ್..! ರೋಹಿತ್ ಪಡೆಗೆ ಬೃಹತ್ ಮುನ್ನಡೆ

ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 135 ರನ್ ಬಾರಿಸಿದ್ದ ಟೀಂ ಇಂಡಿಯಾ, ಎರಡನೇ ದಿನವೂ ಭರ್ಜರಿ ಆರಂಭವನ್ನೇ ಪಡೆಯಿತು. ಇಂಗ್ಲೆಂಡ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿದರು.

Rohit Sharma Shubman Gill Centuries To Put India In Control vs England On Day 2 in Dharamsala Test kvn
Author
First Published Mar 8, 2024, 5:10 PM IST

ಧರ್ಮಶಾಲಾ(ಮಾ.08): ನಾಯಕ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಬಾರಿಸಿದ ಆಕರ್ಷಕ ಶತಕ ಹಾಗೂ ಸರ್ಫರಾಜ್ ಖಾನ್ ಮತ್ತು ದೇವದತ್ ಪಡಿಕ್ಕಲ್ ಬಾರಿಸಿದ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯದ ವೇಳೆಗೆ 8 ವಿಕೆಟ್ ಕಳೆದುಕೊಂಡು 473 ರನ್‌ ಬಾರಿಸಿದೆ. ಈ ಮೂಲಕ ಟೀಂ ಇಂಡಿಯಾ 255 ರನ್‌ಗಳ ಬೃಹತ್ ಮುನ್ನಡೆ ಪಡೆದಿದೆ. 

ಮೊದಲ ದಿನದಾಟದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 135 ರನ್ ಬಾರಿಸಿದ್ದ ಟೀಂ ಇಂಡಿಯಾ, ಎರಡನೇ ದಿನವೂ ಭರ್ಜರಿ ಆರಂಭವನ್ನೇ ಪಡೆಯಿತು. ಇಂಗ್ಲೆಂಡ್ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಆಕರ್ಷಕ ಶತಕ ಸಿಡಿಸಿದರು. ಎರಡನೇ ವಿಕೆಟ್‌ಗೆ ಗಿಲ್ ಹಾಗೂ ರೋಹಿತ್ ಜೋಡಿ 244 ಎಸೆತಗಳನ್ನು ಎದುರಿಸಿ 171 ರನ್‌ಗಳ ಜತೆಯಾಟವಾಡಿತು. ನಾಯಕ ರೋಹಿತ್ ಶರ್ಮಾ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾರಿಸಿದ 12ನೇ ಶತಕ ಎನಿಸಿಕೊಂಡಿತು. 154 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 162 ಎಸೆತಗಳನ್ನು ಎದುರಿಸಿ 103 ರನ್ ಗಳಿಸಿ ಬೆನ್ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿದ ಶುಭ್‌ಮನ್ ಗಿಲ್ 150 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 110 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.  

ಗುಜರಾತ್ ಟೈಟಾನ್ಸ್‌ಗೆ ಪದೇ ಪದೇ ಶಾಕ್; ಆರಂಭಿಕ ಪಂದ್ಯಗಳಿಂದ ಸ್ಪೋಟಕ ಬ್ಯಾಟರ್ ಔಟ್..!

ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಪಡಿಕ್ಕಲ್: ಇನ್ನು ರಜತ್ ಪಾಟೀದಾರ್ ಬದಲಿಗೆ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡದ ಕನ್ನಡಿಗ ದೇವದತ್ ಪಡಿಕ್ಕಲ್ ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ದಿಟ್ಟ ಬ್ಯಾಟಿಂಗ್ ನಡೆಸಿದ ದೇವದತ್ ಪಡಿಕ್ಕಲ್ 103 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 65 ರನ್ ಬಾರಿಸಿ ಶೋಯೆಬ್ ಬಷೀರ್‌ಗೆ ವಿಕೆಟ್ ಒಪ್ಪಿಸಿದರು.

ಮತ್ತೊಂದು ಫಿಫ್ಟಿ ಸಿಡಿಸಿದ ಸರ್ಫರಾಜ್: ಇನ್ನು ಮುಂಬೈ ಮೂಲದ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಸರ್ಫರಾಜ್ ಹಾಗೂ ಪಡಿಕ್ಕಲ್ ಜೋಡಿ 4ನೇ ವಿಕೆಟ್‌ಗೆ 97 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸರ್ಫರಾಜ್ ಖಾನ್ 60 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 56 ರನ್ ಬಾರಿಸಿ ಬಷೀರ್‌ಗೆ ಮೂರನೇ ಬಲಿಯಾದರು.

Dharamsala Test: ಭರ್ಜರಿ ಶತಕ ಚಚ್ಚಿದ ರೋಹಿತ್ ಶರ್ಮಾ, ಶುಭ್‌ಮನ್ ಗಿಲ್..! ಭಾರತದ ಹಿಡಿತದಲ್ಲಿ ಇಂಗ್ಲೆಂಡ್

ಇನ್ನು ಇದಾದ ಬಳಿಕ ಧೃವ್ ಜುರೆಲ್ ಹಾಗೂ ರವೀಂದ್ರ ಜಡೇಜಾ ತಲಾ 15 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ನೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವಿಚಂದ್ರನ್ ಅಶ್ವಿನ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದರು. ಇದಾದ ಬಳಿಕ 9ನೇ ವಿಕೆಟ್‌ಗೆ ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಮುರಿಯದ 45 ರನ್‌ಗಳ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ಆಸರೆಯಾದರು. ಕುಲ್ದೀಪ್ ಯಾದವ್ 27 ಹಾಗೂ ಜಸ್ಪ್ರೀತ್ ಬುಮ್ರಾ 19 ರನ್ ಗಳಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಇನ್ನು ಇಂಗ್ಲೆಂಡ್ ತಂಡದ ಪರ ಶೋಯೆಬ್ ಬಷೀರ್ 4 ವಿಕೆಟ್ ಕಬಳಿಸಿದರೆ, ಟಾಮ್ ಹಾರ್ಟ್ಲಿ 2 ಹಾಗೂ ಬೆನ್ ಸ್ಟೋಕ್ಸ್ ಮತ್ತು ಜೇಮ್ಸ್ ಆಂಡರ್‌ಸನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
 

Follow Us:
Download App:
  • android
  • ios