ಟಿ20 ವಿಶ್ವಕಪ್ ಆರಂಭದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗದಿದ್ದಾಗ ನಾಯಕ ರೋಹಿತ್ ಶರ್ಮಾ ನೀಡಿದ ಭರವಸೆಯ ಮಾತುಗಳ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆ ಬಳಿಕ ಅವಕಾಶ ಪಡೆದ ಸಂಜು ಪ್ರಮುಖ ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಭಾರತವನ್ನು ಫೈನಲ್‌ಗೆ ತಲುಪಿಸಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಫೈನಲ್‌ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ನಂತರ, ಮಾಜಿ ನಾಯಕ ರೋಹಿತ್ ಶರ್ಮಾ ಅವರು ಟೂರ್ನಿಯ ಆರಂಭದಲ್ಲಿ ಸಂಜು ಸ್ಯಾಮ್ಸನ್‌ಗೆ ನೀಡಿದ್ದ ಸಲಹೆಯ ಹಿಂದಿನ ಕಾರಣವನ್ನು ಇದೀಗ ಬಹಿರಂಗಪಡಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸಂಜು ಭರ್ಜರಿ ಪ್ರದರ್ಶನ ನೀಡಿದ ಬೆನ್ನಲ್ಲೇ ರೋಹಿತ್ ಈ ಬಗ್ಗೆ ಮಾತನಾಡಿದ್ದಾರೆ.

ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಯುಎಸ್‌ಎ ವಿರುದ್ಧದ ಪಂದ್ಯಕ್ಕೂ ಮುನ್ನ, ರೋಹಿತ್ ಅವರು ಸಂಜು ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುತ್ತಿದ್ದ ವಿಡಿಯೋವನ್ನು ಐಸಿಸಿ ಹಂಚಿಕೊಂಡಿತ್ತು. "ಬೇಜಾರ್ ಮಾಡ್ಕೋಬೇಡ ತಮ್ಮಾ, ಇದು ದೊಡ್ಡ ಟೂರ್ನಿ. ಯಾವಾಗ ಬೇಕಿದ್ರೂ ಚಾನ್ಸ್ ಸಿಗಬಹುದು. ನೀನು ರೆಡಿಯಾಗಿರಬೇಕು" ಎಂದು ರೋಹಿತ್, ಸಂಜು ಅವರನ್ನು ಅಪ್ಪಿಕೊಂಡು ಹೇಳಿದ್ದರು.

ಸಂಜು ಸ್ಯಾಮ್ಸನ್‌ಗೆ ರೋಹಿತ್ ಶರ್ಮಾ ಹೀಗಂದಿದ್ದೇಕೆ?

ಈಗ ರೋಹಿತ್, ತಾವೇಕೆ ಸಂಜು ಜೊತೆ ಹಾಗೆ ಮಾತನಾಡಿದೆ ಎಂಬುದನ್ನು ವಿವರಿಸಿದ್ದಾರೆ. "ಒಬ್ಬ ಆಟಗಾರನ ಮನಸ್ಸನ್ನು ಓದುವ ಕಲೆ ನನಗೆ ಗೊತ್ತು. ನಾನೂ ಕೂಡ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದೇನೆ (2011ರ ಏಕದಿನ ವಿಶ್ವಕಪ್ ತಂಡದಲ್ಲಿ ರೋಹಿತ್‌ಗೆ ಸ್ಥಾನ ಸಿಕ್ಕಿರಲಿಲ್ಲ). ಅಂತಹ ಸಮಯದಲ್ಲಿ ನಿರಾಶರಾಗದೆ, ನಮ್ಮ ನಿಯಂತ್ರಣದಲ್ಲಿರುವ ವಿಷಯಗಳ ಮೇಲೆ ಗಮನ ಹರಿಸುವುದು ಬಹಳ ಮುಖ್ಯ" ಎಂದು ರೋಹಿತ್ ಹೇಳಿದ್ದಾರೆ.

View post on Instagram

"ಟಿ20 ವಿಶ್ವಕಪ್‌ಗೂ ಮುನ್ನ ಸಂಜು ಭಾರತ ತಂಡದ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ. ಆದರೆ ಟಿ20 ವಿಶ್ವಕಪ್‌ ಮುನ್ನ ನಡೆದ ಸರಣಿಯಲ್ಲಿ ನೀರಸ ಪ್ರದರ್ಶನ ತೋರಿದ್ದರಿಂದ ಸಂಜುಗೆ ಬೆಂಚ್ ಕಾಯಬೇಕಾದ ಪರಿಸ್ಥಿತಿ ಬಂತು. ಅವನಿಗೆ ಸಮಾಧಾನ ಹೇಳಿ, ಅವಕಾಶ ಖಂಡಿತಾ ಸಿಗುತ್ತೆ ಎಂಬ ಭರವಸೆ ನೀಡಬೇಕೆಂದು ನನಗನಿಸಿತ್ತು" ಎಂದು ರೋಹಿತ್ ತಿಳಿಸಿದ್ದಾರೆ.

ರೋಹಿತ್ ಭವಿಷ್ಯ ನುಡಿದಂತೆ, ಸಂಜುಗೆ ಅವಕಾಶ ಸಿಕ್ಕಿತು. ವೆಸ್ಟ್ ಇಂಡೀಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಅಜೇಯ 97 ರನ್ ಮತ್ತು ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ 89 ರನ್ ಗಳಿಸಿ ಸಂಜು ಭಾರತವನ್ನು ಫೈನಲ್‌ಗೆ ಕೊಂಡೊಯ್ದರು. ಸದ್ಯ 201.73ರ ಸ್ಟ್ರೈಕ್ ರೇಟ್‌ನಲ್ಲಿ ಆಡುತ್ತಿರುವ ಸಂಜು, 'ಟೂರ್ನಿ ಶ್ರೇಷ್ಠ ಆಟಗಾರ' ಪ್ರಶಸ್ತಿಯ ರೇಸ್‌ನಲ್ಲೂ ಇದ್ದಾರೆ.

ಫೈನಲ್‌ನಲ್ಲಿ ಸಂಜು ಸ್ಯಾಮ್ಸನ್ ಮೇಲೆ ಎಲ್ಲರ ಕಣ್ಣು

ಈ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್, ಗ್ರೂಪ್ ಹಂತದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ನಮೀಬಿಯಾ ಎದುರಿನ ಪಂದ್ಯದಲ್ಲಿ ತಂಡದೊಳಗೆ ಅವಕಾಶ ಸಿಕ್ಕಿತ್ತು. ಆಗ 8 ಎಸೆತಗಳಲ್ಲಿ ಸಂಜು 22 ರನ್ ಸಿಡಿಸಿದ್ದರು. ಇದಾದ ಬಳಿಕ ಮತ್ತೆ ಸಂಜು ಬೆಂಚ್ ಕಾಯಿಸಿದ್ದರು. ಇನ್ನು ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಸೋಲು ಅನುಭವಿಸಿತ್ತು. ಹೀಗಾಗಿ ಉಳಿದೆರಡು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು. ಆಗ ಮತ್ತೆ ಸಂಜುಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿತು. ಜಿಂಬಾಬ್ವೆ ಎದುರು 15 ಎಸೆತಗಳಲ್ಲಿ 24 ರನ್ ಸಿಡಿಸಿದ ಸಂಜು, ಆ ಬಳಿಕ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಎದುರು ಅಬ್ಬರಿಸಿ ಸತತ ಎರಡು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಫೈನಲ್‌ನಲ್ಲಿ ಸಂಜು ಮೇಲೆ ಎಲ್ಲರ ಕಣ್ಣಿದೆ.