ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ. ಸಂಜು ಸ್ಯಾಮ್ಸನ್ ಜೊತೆ ಅಭಿಷೇಕ್ ಶರ್ಮಾ ಆಡುತ್ತಾರೆಯೇ ಮತ್ತು ಬೌಲಿಂಗ್ ವಿಭಾಗದಲ್ಲಿ ವರುಣ್ ಚಕ್ರವರ್ತಿ ಬದಲಿಗೆ ಕುಲ್‌ದೀಪ್ ಯಾದವ್‌ಗೆ ಅವಕಾಶ ಸಿಗುವುದೇ ಎಂಬುದು ಕುತೂಹಲ ಮೂಡಿಸಿದೆ.  

ಅಹಮದಾಬಾದ್: ಟಿ20 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡ ಇಂದು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಟೀಂ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಹೇಗಿರುತ್ತೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಈಗಾಗಲೇ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಓಪನರ್ ಆಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ, ಅವರ ಜೊತೆ ಇನ್ನೊಬ್ಬ ಓಪನರ್ ಆಗಿ ಅಭಿಷೇಕ್ ಶರ್ಮಾ ಆಡುತ್ತಾರಾ ಇಲ್ವಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ನ್ಯೂಜಿಲೆಂಡ್ ಎದುರಿನ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವಿಶ್ವಕಪ್‌ನ ಸ್ಟಾರ್ ಆಟಗಾರನಾಗಬಹುದು ಎಂದು ನಿರೀಕ್ಷಿಸಲಾಗಿದ್ದ ಅಭಿಷೇಕ್, ಇದುವರೆಗೆ ಗಳಿಸಿದ್ದು ಕೇವಲ ಒಂದೇ ಒಂದು ಅರ್ಧಶತಕ. ಆದರೂ, ಫೈನಲ್‌ನಂತಹ ನಿರ್ಣಾಯಕ ಪಂದ್ಯದಲ್ಲಿ ಅಭಿಷೇಕ್‌ಗೆ ಇನ್ನೊಂದು ಅವಕಾಶ ಕೊಡಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಫಾರ್ಮ್‌ಗೆ ಬಂದರೆ ಒಬ್ಬರೇ ಮ್ಯಾಚ್ ಗೆಲ್ಲಿಸಬಲ್ಲ ಸಾಮರ್ಥ್ಯ ಅಭಿಷೇಕ್‌ಗಿದೆ. ಹೀಗಾಗಿ ಅವರನ್ನು ಫೈನಲ್‌ನಲ್ಲಿ ಹೊರಗಿಡುವುದು ಅಷ್ಟು ಸರಿ ಕಾಣುವುದಿಲ್ಲ ಎಂಬುದು ಹಲವರ ವಾದ.

ಈ ಹಿನ್ನೆಲೆಯಲ್ಲಿ, ಫೈನಲ್‌ ಪಂದ್ಯದಲ್ಲೂ ಸಂಜು ಜೊತೆ ಅಭಿಷೇಕ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಹೀಗಾದಲ್ಲಿ, ರಿಂಕು ಸಿಂಗ್ ತಂಡಕ್ಕೆ ವಾಪಸ್ ಬರುವ ಸಾಧ್ಯತೆ ಕ್ಷೀಣಿಸಲಿದೆ. ಅಭಿಷೇಕ್ ಹೊರಗುಳಿದರೆ ಮಾತ್ರ ರಿಂಕುಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಚಾನ್ಸ್ ಸಿಗಲಿದೆ. ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಇಶಾನ್ ಕಿಶನ್, ನಾಲ್ಕನೇ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಆಡಲಿದ್ದಾರೆ. ನಂತರ ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮ, ಶಿವಂ ದುಬೆ ಮತ್ತು ಅಕ್ಷರ್ ಪಟೇಲ್ ಕಣಕ್ಕಿಳಿಯಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಒಂದು ಮೇಜರ್ ಚೇಂಜ್

ಬೌಲಿಂಗ್ ವಿಭಾಗದಲ್ಲಿ ತಂಡ ಒಂದು ಬದಲಾವಣೆ ಮಾಡುವ ನಿರೀಕ್ಷೆಯಿದೆ. ಸೂಪರ್ 8 ಹಂತದಿಂದ ಫಾರ್ಮ್ ಕಳೆದುಕೊಂಡಿರುವ ವರುಣ್ ಚಕ್ರವರ್ತಿ ಬದಲು ಕುಲ್‌ದೀಪ್ ಯಾದವ್‌ರನ್ನು ಆಡಿಸಬೇಕು ಎಂಬ ಸಲಹೆ ಟೀಂ ಇಂಡಿಯಾ ಮುಂದಿದೆ. ಆದರೆ, ವಾಂಖೆಡೆಯ ಬ್ಯಾಟಿಂಗ್ ಪಿಚ್‌ನಲ್ಲಿನ ಪ್ರದರ್ಶನವನ್ನೇ ನೋಡಿ ವರುಣ್ ಅವರನ್ನು ಕೈಬಿಡಬಾರದು ಎಂಬ ಅಭಿಪ್ರಾಯವೂ ಇದೆ. ಅಹಮದಾಬಾದ್ ಮೈದಾನ ದೊಡ್ಡದಿರುವುದರಿಂದ ವರುಣ್ ಮತ್ತು ಕುಲ್ದೀಪ್ ಇಬ್ಬರನ್ನೂ ಆಡಿಸಬೇಕೆಂದರೆ, ಫಾರ್ಮ್‌ನಲ್ಲಿರುವ ಶಿವಂ ದುಬೆಯನ್ನು ಕೈಬಿಡಬೇಕಾಗುತ್ತದೆ. ಇಂತಹ ರಿಸ್ಕ್ ತೆಗೆದುಕೊಳ್ಳಲು ಭಾರತ ಸಿದ್ಧವಿಲ್ಲ. ಹೀಗಾಗಿ, ಕುಲ್ದೀಪ್ ಬೇಕಾ ಅಥವಾ ವರುಣ್ ಚಕ್ರವರ್ತಿ ಬೇಕಾ ಎಂಬ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಟಾಸ್‌ಗೂ ಮುನ್ನವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ವಿಶ್ವಕಪ್ ಫೈನಲ್‌ಗೆ ಭಾರತದ ಸಂಭಾವ್ಯ XI:

ಅಭಿಷೇಕ್ ಶರ್ಮಾ/ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ/ಕುಲ್ದೀಪ್ ಯಾದವ್.