ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ಮತ್ತೆ ವಹಿಸಿಕೊಂಡಿದ್ದಾರೆ. ಈ ನಿರ್ಧಾರಕ್ಕೆ ಹಿಂದಿನ ಕಾರಣಗಳನ್ನು ಅವರು ಹಂಚಿಕೊಂಡಿದ್ದಾರೆ.
ಬೆಂಗಳೂರು(ನ.28): ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ ತಂಡ ಮತ್ತೆ ತನ್ನ ಯಶಸ್ವಿ ನಾಯಕ ರೋಹಿತ್ ಶರ್ಮಾ ಅವರತ್ತ ಮುಖ ಮಾಡಿದೆ. 2024ರಲ್ಲಿ ದಿಢೀರ್ ಎನ್ನುವಂತೆ ರೋಹಿತ್ ಶರ್ಮಾ ಅವರನ್ನು ಅವಮಾನಿಸಿ ನಾಯಕತ್ವದಿಂದ ಕೆಳಗಿಳಿಸಿತ್ತು. ಇದೀಗ 2027ರ ಐಪಿಎಲ್ಗಾಗಿ ಮತ್ತೆ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ. ಈ ಜವಾಬ್ದಾರಿಯನ್ನು ಮತ್ತೊಮ್ಮೆ ವಹಿಸಿಕೊಳ್ಳಲು ತಾವು ಹೇಗೆ ನಿರ್ಧರಿಸಿದ್ದು ಎಂಬುದನ್ನು ಸ್ವತಃ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಕಳೆದ ಐಪಿಎಲ್ ಋತುವಿನ ಬಳಿಕ ತಂಡದ ಪ್ರದರ್ಶನದಿಂದ ತೀವ್ರ ನಿರಾಶೆಯಾಗಿತ್ತು. ಆಟಗಾರರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಾಗಿರಲಿಲ್ಲ. ತಂಡದ ಪ್ರತಿಯೊಬ್ಬರೂ ನಿರೀಕ್ಷಿತ ಜವಾಬ್ದಾರಿಯನ್ನು ನಿಭಾಯಿಸಲು ವಿಫಲರಾಗಿದ್ದರು. ಈ ಪರಿಸ್ಥಿತಿಯಲ್ಲಿ ತಂಡವನ್ನು ಮತ್ತೆ ಸರಿಯಾದ ಹಾದಿಗೆ ತರುವ ಬಗ್ಗೆ ಸಾಕಷ್ಟು ಯೋಚಿಸಿದ್ದಾಗಿ ರೋಹಿತ್ ಹೇಳಿದ್ದಾರೆ. ಜತಿನ್ ಸಪ್ರು ಅವರೊಂದಿಗಿನ ಸಂವಾದದಲ್ಲಿ ಮಾತನಾಡಿದ ರೋಹಿತ್, ಮುಂಬೈ ಇಂಡಿಯನ್ಸ್ ನಾಯಕತ್ವವನ್ನು ಮತ್ತೆ ವಹಿಸಿಕೊಳ್ಳುವ ನಿರ್ಧಾರ ಹೇಗೆ ಬಂತು ಎಂಬುದನ್ನು ಎಳೆಎಳೆಯಾಗಿ ವಿವರಿಸಿದ್ದಾರೆ.
ರೋಹಿತ್ ಶರ್ಮಾ ಕ್ಯಾಪ್ಟನ್ ಆಗಲು ಒಪ್ಪಿಕೊಂಡಿದ್ದು ಹೇಗೆ?
“ಹಿಂದಿನ ಐಪಿಎಲ್ ಋತು ಮುಗಿದ ಬಳಿಕ ನಾನು ತುಂಬಾ ನಿರಾಶನಾಗಿದ್ದೆ. ನನ್ನೊಬ್ಬನಿಗಷ್ಟೇ ಅಲ್ಲ, ತಂಡದ ಪ್ರತಿಯೊಬ್ಬ ಆಟಗಾರನಿಗೂ ಬೇಸರವಾಗಿತ್ತು. ಯಾರೂ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ತಂಡದಲ್ಲಿ ಅವರಿಂದ ನಿರೀಕ್ಷಿಸಿದ್ದ ಪಾತ್ರವನ್ನೂ ಸರಿಯಾಗಿ ನಿಭಾಯಿಸಲು ಯಾರಿಗೂ ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ನಾನು ತಂಡದ ಬಗ್ಗೆ ಸಾಕಷ್ಟು ಯೋಚಿಸುತ್ತಿದ್ದೆ. ಆಕಾಶ್ ಅಂಬಾನಿ ಅವರೊಂದಿಗೆ ಮಾತನಾಡುತ್ತಿದ್ದೆ. ದೀರ್ಘಕಾಲದವರೆಗೆ ನಾವು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆವು. ಒಂದು ದಿನ ಆಕಾಶ್ ಅಂಬಾನಿ ಇದ್ದಕ್ಕಿದ್ದಂತೆ, ‘ನೀವು ಮತ್ತೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಲು ಬಯಸುತ್ತೀರಾ? ಮತ್ತೊಮ್ಮೆ ಈ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೀರಾ?’ ಎಂದು ಕೇಳಿದರು.
ಆ ಕ್ಷಣದಲ್ಲಿ ನಾನು ನಾಯಕತ್ವ ವಹಿಸಿಕೊಳ್ಳಲು ಸಿದ್ಧನಿರಲಿಲ್ಲ. ಈ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ಕೊಡುವಂತೆ ಕೇಳಿಕೊಂಡೆ. ನಂತರ ಈ ತಂಡಕ್ಕಾಗಿ ನಾನು 10 ವರ್ಷಗಳನ್ನು ಕಳೆದಿದ್ದೇನೆ, ತಂಡವನ್ನು ಕಟ್ಟಲು ಶ್ರಮಿಸಿದ್ದೇನೆ ಎಂಬುದನ್ನು ನೆನಪಿಸಿಕೊಂಡೆ. ತಂಡವನ್ನು ಮತ್ತೆ ಸರಿಯಾದ ಹಾದಿಗೆ ತರಲು ಮತ್ತೊಮ್ಮೆ ಈ ಜವಾಬ್ದಾರಿ ವಹಿಸಿಕೊಳ್ಳಬಹುದು ಎಂದು ಅನಿಸಿತು. ಹೀಗಾಗಿಯೇ ಮತ್ತೆ ಮುಂಬೈ ಇಂಡಿಯನ್ಸ್ ನಾಯಕನಾಗಲು ನಿರ್ಧರಿಸಿದೆ,” ಎಂದು ರೋಹಿತ್ ಹೇಳಿದ್ದಾರೆ.
ಮುಂಬೈ ಇಂಡಿಯನ್ಸ್ ನಾಯಕನಾಗಿ ರೋಹಿತ್ ಸಾಧನೆ
ರೋಹಿತ್ ಶರ್ಮಾ 2013ರ ಐಪಿಎಲ್ ಋತುವಿನ ಮಧ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡರು. ಆಗ ತಂಡದ ನಾಯಕನಾಗಿದ್ದ ರಿಕಿ ಪಾಂಟಿಂಗ್ ಸ್ಥಾನದಿಂದ ಕೆಳಗಿಳಿದ ಬಳಿಕ ರೋಹಿತ್ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿತ್ತು. ನಾಯಕತ್ವ ಸಿಕ್ಕ ಮೊದಲ ಋತುವಿನಲ್ಲೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ರೋಹಿತ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಅಲ್ಲಿಂದ ಆರಂಭವಾದ ಯಶಸ್ಸಿನ ಪಯಣದಲ್ಲಿ ಮುಂಬೈ ಇಂಡಿಯನ್ಸ್ ತಂಡ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದುಕೊಂಡಿತು. 2013, 2015, 2017, 2019 ಮತ್ತು 2020ರಲ್ಲಿ ರೋಹಿತ್ ನಾಯಕತ್ವದಲ್ಲಿ ಮುಂಬೈ ಚಾಂಪಿಯನ್ ಆಗಿತ್ತು.
ರೋಹಿತ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಫೈನಲ್ ಪ್ರವೇಶಿಸಿದ್ದು, ಎಲ್ಲ ಐದು ಫೈನಲ್ಗಳಲ್ಲೂ ಗೆಲುವು ಸಾಧಿಸಿರುವುದು ವಿಶೇಷ. ಈ ಮೂಲಕ ಐಪಿಎಲ್ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದ ನಾಯಕರ ಪಟ್ಟಿಯಲ್ಲಿ ರೋಹಿತ್, ಎಂಎಸ್ ಧೋನಿ ಅವರೊಂದಿಗೆ ಜಂಟಿ ದಾಖಲೆ ಹೊಂದಿದ್ದಾರೆ. ನಾಯಕನಾಗಿ ರೋಹಿತ್ ಅವರ ಐಪಿಎಲ್ ದಾಖಲೆ ಗಮನಿಸಿದರೆ, ಅವರು 158 ಪಂದ್ಯಗಳಲ್ಲಿ ಮುಂಬೈ ತಂಡವನ್ನು ಮುನ್ನಡೆಸಿದ್ದಾರೆ. ಈ ಪೈಕಿ 87 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, 67 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ನಾಲ್ಕು ಪಂದ್ಯಗಳು ಟೈ ಆಗಿವೆ. ಅವರ ಗೆಲುವಿನ ಪ್ರಮಾಣ ಶೇ.55.06ರಷ್ಟಿದೆ. ನಾಯಕನಾಗಿ 3,986 ರನ್ಗಳನ್ನೂ ಗಳಿಸಿದ್ದಾರೆ.
ನಾಯಕತ್ವ ಬದಲಾದ ಬಳಿಕ ಮುಂಬೈ ಪ್ರದರ್ಶನ ಹೇಗಿತ್ತು?
2023ರ ಐಪಿಎಲ್ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಯಿತು. ತನ್ನ ಯಶಸ್ವಿ ನಾಯಕನನ್ನು ದಿಢೀರ್ ಎನ್ನುವಂತೆ ಬದಿಗೆ ಸರಿಸಿತ್ತು. ಹೀಗಾಗಿ ಹಿಟ್ಮ್ಯಾನ್ ಮುಂಬೈ ತಂಡದಲ್ಲಿ ಒಂದು ರೀತಿ ಅವಮಾನಕಾರಿಯಂತಹ ಪರಿಸ್ಥಿತಿಯನ್ನು ಎದುರಿಸಿದ್ದರು. ಕೆಲವು ಬಾರಿ ರೋಹಿತ್ ಶರ್ಮಾರನ್ನು ಕೇವಲ ಇಂಪ್ಯಾಕ್ಟ್ ಅಟಗಾರನಾಗಿ ಮಾತ್ರ ಬಳಸಿಕೊಳ್ಳಲಾಗಿತ್ತು. 2024ರಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ಕಣಕ್ಕಿಳಿದ ಮುಂಬೈ ತಂಡ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವು ಸಾಧಿಸಿ, 10 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಂದರೆ 10ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 2025ರಲ್ಲಿ ತಂಡದ ಪ್ರದರ್ಶನದಲ್ಲಿ ಸುಧಾರಣೆ ಕಂಡುಬಂತು. ಲೀಗ್ ಹಂತದಲ್ಲಿ 14 ಪಂದ್ಯಗಳಲ್ಲಿ ಎಂಟು ಗೆಲುವು ಮತ್ತು ಆರು ಸೋಲುಗಳೊಂದಿಗೆ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್ ಪ್ರವೇಶಿಸಿತು. ಎಲಿಮಿನೇಟರ್ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿ ಕ್ವಾಲಿಫೈಯರ್-2ಕ್ಕೆ ಮುನ್ನಡೆಯಿತು. ಆದರೆ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಯಿತು. ಕ್ವಾಲಿಫೈಯರ್-2ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿತು.
2026ರ ಋತುವಿನಲ್ಲಿ ಮತ್ತೆ ಮುಂಬೈ ತಂಡದ ಪ್ರದರ್ಶನ ಕುಸಿಯಿತು. 14 ಪಂದ್ಯಗಳಲ್ಲಿ ಕೇವಲ ನಾಲ್ಕು ಗೆಲುವು ದಾಖಲಿಸಿದ ತಂಡ 10 ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿಯಿತು. ಹೀಗಾಗಿ ಕಳೆದ ಮೂರು ಋತುಗಳಲ್ಲಿ ಮುಂಬೈ ಇಂಡಿಯನ್ಸ್ ತಂಡ ಎರಡು ಬಾರಿ ಲೀಗ್ ಹಂತದಲ್ಲೇ ಹೊರಬಿದ್ದರೆ, ಒಂದು ಬಾರಿ ಪ್ಲೇಆಫ್ ಪ್ರವೇಶಿಸಿದರೂ ಫೈನಲ್ ತಲುಪಲು ಸಾಧ್ಯವಾಗಲಿಲ್ಲ. ಈ ಮೂರು ಋತುಗಳಲ್ಲಿ ಮುಂಬೈ ಇಂಡಿಯನ್ಸ್ ಒಟ್ಟು 42 ಪಂದ್ಯಗಳನ್ನಾಡಿದ್ದು, 16 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. 26 ಪಂದ್ಯಗಳಲ್ಲಿ ಸೋಲು ಕಂಡಿದೆ. ತಂಡದ ಪ್ರದರ್ಶನದಲ್ಲಿ ಸ್ಥಿರತೆ ಕಾಣದಿರುವುದು ನಾಯಕತ್ವ ಬದಲಾವಣೆಯ ಚರ್ಚೆಗೆ ಪ್ರಮುಖ ಕಾರಣವಾಗಿದೆ.
ಐದು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟ ನಾಯಕನಿಗೆ ಮತ್ತೆ ಜವಾಬ್ದಾರಿ ನೀಡಿರುವ ಮುಂಬೈ ತಂಡ, ರೋಹಿತ್ ನಾಯಕತ್ವದಲ್ಲಿ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ತಂಡವನ್ನು ಕಟ್ಟಲು 10 ವರ್ಷಗಳ ಕಾಲ ಶ್ರಮಿಸಿದ್ದ ರೋಹಿತ್, ಈಗ ಅದೇ ತಂಡವನ್ನು ಮತ್ತೆ ಗೆಲುವಿನ ಹಾದಿಗೆ ಮರಳಿಸುವ ಸವಾಲನ್ನು ಸ್ವೀಕರಿಸಿದ್ದಾರೆ. ರೋಹಿತ್ ಶರ್ಮಾ ನಾಯಕರಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಅದೃಷ್ಟ ಬದಲಾಗುತ್ತಾ ಅಥವಾ ಇಲ್ಲವೇ ಎನ್ನುವುದನ್ನು ಕಮೆಂಟ್ ಮಾಡಿ.












