ಭಾರತದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಅನುಭವದಿಂದ ಯುವ ಆಟಗಾರರಿಗೆ ಹೇಗೆ ಮಾರ್ಗದರ್ಶನ ನೀಡುತ್ತಿದ್ದರು ಎಂಬುದನ್ನು ಕುಲ್ದೀಪ್ ಯಾದವ್ ಸ್ಮರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಸಿಟ್ಟಾದ ಘಟನೆ ಮತ್ತು ಆ ಎಚ್ಚರಿಕೆ ತಮ್ಮ ಬೌಲಿಂಗ್‌ಗೆ ಹೇಗೆ ನೆರವಾಯಿತು ಎಂಬುದನ್ನು ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರು(ನ.28): ಭಾರತದ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಅಪಾರ ಅನುಭವದಿಂದ ತಂಡದ ಯುವ ಆಟಗಾರರಿಗೆ ಮಾರ್ಗದರ್ಶನ ನೀಡುತ್ತಿದ್ದ ರೀತಿ ಎಷ್ಟೊಂದು ಪರಿಣಾಮಕಾರಿಯಾಗಿತ್ತು ಎಂಬುದಕ್ಕೆ ಕುಲ್ದೀಪ್ ಯಾದವ್ ಹಂಚಿಕೊಂಡಿರುವ ಒಂದು ಘಟನೆ ಸಾಕ್ಷಿಯಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯವೊಂದರಲ್ಲಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ ತಮ್ಮ ಮೇಲೆ ಸಿಟ್ಟಾದ ಕ್ಷಣವನ್ನು ನೆನಪಿಸಿಕೊಂಡಿರುವ ಕುಲ್ದೀಪ್, ಆ ಎಚ್ಚರಿಕೆ ತಮ್ಮ ಬೌಲಿಂಗ್‌ಗೆ ಹೇಗೆ ನೆರವಾಯಿತು ಎಂಬುದನ್ನು ವಿವರಿಸಿದ್ದಾರೆ.

2017ರ ಡಿಸೆಂಬರ್‌ನಲ್ಲಿ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಏಕದಿನ ಪಂದ್ಯ ನಡೆಯುತ್ತಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟರ್ ಕುಸಾಲ್ ಪೆರೆರಾ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಿದ್ದರು. ಅರ್ಧಶತಕದ ಗಡಿ ದಾಟಿದ್ದ ಪೆರೆರಾ, 200ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸುತ್ತಿದ್ದರು. ಪೆರೆರಾ ಅಬ್ಬರವನ್ನು ತಡೆಯಲು ಧೋನಿ ಒಂದು ಯೋಜನೆ ರೂಪಿಸಿದ್ದರು. ಪಾಯಿಂಟ್ ಫೀಲ್ಡರ್‌ನನ್ನು ಒಳಗೆ ಕರೆದು, ಕವರ್ ಫೀಲ್ಡರ್‌ನನ್ನು ಬೌಂಡರಿ ಕಡೆಗೆ ಕಳುಹಿಸುವಂತೆ ಕುಲ್ದೀಪ್‌ಗೆ ಸೂಚಿಸಿದ್ದರು. ಆಫ್ ಸ್ಟಂಪ್‌ನ ಹೊರಗೆ ಚೆಂಡು ಹಾಕಿ, ಬ್ಯಾಟರ್‌ನಿಂದ ಟಾಪ್ ಎಡ್ಜ್ ಪಡೆಯುವುದು ಧೋನಿಯ ಲೆಕ್ಕಾಚಾರವಾಗಿತ್ತು.

ಕುಲ್ದೀಪ್ ಯಾದವ್‌ಗೆ ವಾರ್ನಿಂಗ್ ಕೊಟ್ಟ ಧೋನಿ

ಆದರೆ ಆರಂಭದಲ್ಲಿ ಕುಲ್ದೀಪ್ ಧೋನಿಯ ಸಲಹೆಯನ್ನು ನಿರ್ಲಕ್ಷಿಸಿದರು. ಅದರ ಪರಿಣಾಮವಾಗಿ ಪೆರೆರಾ ಮಿಡ್‌ವಿಕೆಟ್ ದಿಕ್ಕಿನಲ್ಲಿ ಪದೇಪದೇ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸಿದರು. ಇದರಿಂದ ಸಿಟ್ಟಾದ ಧೋನಿ, ಕುಲ್ದೀಪ್ ಬಳಿ ಬಂದು ತಮ್ಮ ಅನುಭವವನ್ನು ನೆನಪಿಸುವಂತೆ ಎಚ್ಚರಿಕೆ ನೀಡಿದರು.

“ಧೋನಿ ನನ್ನ ಬಳಿ ಬಂದು, ‘ನಾನು ಮೂರ್ಖ ಎಂದುಕೊಂಡಿದ್ದೀಯಾ? 300ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಸುಮ್ಮನೆ ಆಡಿದ್ದೇನಾ?’ ಎಂದು ಕೇಳಿದರು. ಆಗ ನನಗೆ ಭಯವಾಯಿತು!” ಎಂದು ಕುಲ್ದೀಪ್ ESPNcricinfoಗೆ ತಿಳಿಸಿದ್ದಾರೆ.

ಧೋನಿಯ ಮಾತಿನ ಬಳಿಕ ಕುಲ್ದೀಪ್ ಅವರ ಸೂಚನೆಗಳನ್ನು ಪಾಲಿಸಲು ನಿರ್ಧರಿಸಿದರು. ಈ ಬಾರಿ ಯೋಜನೆ ಯಶಸ್ವಿಯಾಯಿತು. ಆಫ್ ಸ್ಟಂಪ್‌ನ ಹೊರಗೆ ಹಾಕಿದ ಚೆಂಡನ್ನು ಪೆರೆರಾ ಬಾರಿಸಲು ಮುಂದಾದರು. ಆದರೆ ಬ್ಯಾಟ್‌ಗೆ ಸರಿಯಾಗಿ ತಾಗದೆ ಟಾಪ್ ಎಡ್ಜ್ ಆಯಿತು. ಬೌಂಡರಿ ಬಳಿ ನಿಂತಿದ್ದ ಫೀಲ್ಡರ್ ಸುಲಭವಾಗಿ ಕ್ಯಾಚ್ ಹಿಡಿದರು. ಈ ವಿಕೆಟ್ ಪಂದ್ಯದಲ್ಲಿ ಮಹತ್ವದ ತಿರುವು ನೀಡಿತು. ಬಳಿಕ ಕುಲ್ದೀಪ್, ಥಿಸಾರಾ ಪೆರೆರಾ ಅವರನ್ನೂ ತಪ್ಪಾಗಿ ಹೊಡೆದ ಚೆಂಡಿನ ಮೂಲಕ ಔಟ್ ಮಾಡಿದರು. ಇದರಿಂದ ಭಾರತ ಮತ್ತೆ ಪಂದ್ಯದಲ್ಲಿ ಹಿಡಿತ ಸಾಧಿಸಲು ಸಾಧ್ಯವಾಯಿತು.

ಆರಂಭದಲ್ಲೇ ಧೋನಿ ನೀಡಿದ ಬೆಂಬಲ

ತಮ್ಮ ಕ್ರಿಕೆಟ್ ಪ್ರಯಾಣದ ಆರಂಭದ ದಿನಗಳಲ್ಲಿ ಧೋನಿ ನೀಡಿದ ಬೆಂಬಲವನ್ನು ಕುಲ್ದೀಪ್ ವಿಶೇಷವಾಗಿ ಸ್ಮರಿಸಿದ್ದಾರೆ. ಯುವ ಬೌಲರ್‌ಗೆ ಅಗತ್ಯವಿರುವ ಆತ್ಮವಿಶ್ವಾಸ ಮತ್ತು ಮಾರ್ಗದರ್ಶನವನ್ನು ಧೋನಿ ನೀಡಿದ್ದರು ಎಂದು ಅವರು ಹೇಳಿದ್ದಾರೆ. “ನನ್ನ ಪ್ರಯಾಣ ಆರಂಭವಾದಾಗ, ಆರಂಭಿಕ ಹಂತದಲ್ಲಿ ನನಗೆ ಬೇಕಾಗಿದ್ದ ಬೆಂಬಲವನ್ನು ಧೋನಿ ನೀಡಿದರು. ಹೊಸದಾಗಿ ಬೆಳೆಯುತ್ತಿರುವ ಪ್ರತಿಯೊಬ್ಬ ಬೌಲರ್ ಕೂಡ ಬಯಸುವ ಬೆಂಬಲ ಅದು. ಅವರಿಂದ ನನಗೆ ಎಲ್ಲವೂ ತುಂಬಾ ಸುಲಭವಾಗಿ ಸಾಗಿತು.

“ಧೋನಿ ಒಬ್ಬ ಸ್ಮೂತ್ ಆಪರೇಟರ್. ನಾವು ಚೆನ್ನಾಗಿ ಬೌಲಿಂಗ್ ಮಾಡಿದರೆ ಸಾಕು. ಅವರು ವಿಕೆಟ್ ಹಿಂದೆ ನಿಂತು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಅಕ್ಷರಶಃ ಎಲ್ಲವನ್ನೂ ಅವರೇ ನಿರ್ವಹಿಸುತ್ತಿದ್ದರು. ಎರಡು ಸ್ಪೆಲ್‌ಗಳ ನಡುವೆಯೂ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಿದ್ದರು. ನಾನು ಅವುಗಳನ್ನು ಪಾಲಿಸಿದೆ, ಅವುಗಳಿಂದ ಫಲಿತಾಂಶವೂ ಸಿಕ್ಕಿತು.

“ಆ ಬೆಂಬಲ ಬಹಳ ಮುಖ್ಯವಾಗಿತ್ತು. ಅದರ ಜೊತೆಗೆ ಅವರು ತುಂಬಾ ಶಾಂತವಾಗಿರುತ್ತಿದ್ದರು. ನನಗಿಂತ ಹಿರಿಯ ಆಟಗಾರರಾಗಿದ್ದರೂ, ತುಂಬಾ ನಿರಾಳವಾಗಿದ್ದರು. ಆಗ ಯುಜುವೇಂದ್ರ ಚಹಲ್ ಮತ್ತು ನಾನು ಆಗ ಇನ್ನೂ ಮಕ್ಕಳು. ನಮ್ಮ ಹಿರಿಯ ಸಹೋದರ ಧೋನಿ ಏನು ಹೇಳುತ್ತಿದ್ದರೋ, ಅದನ್ನು ನಾವು ಮಾಡುತ್ತಿದ್ದೆವು,” ಎಂದು ಕುಲ್ದೀಪ್ ಹೇಳಿದ್ದಾರೆ.