ರೋಹಿತ್ ಶರ್ಮಾ ಇದೀಗ ಬ್ಯಾಟ್ ಮೂಲಕ ಅಲ್ಲ ಫೀಲ್ಡಿಂಗ್‌ನಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಮಾರ್ಕ್‌ ವುಡ್ ಅವರು ನೀಡಿದ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಅದ್ಭುತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು.

ಧರ್ಮಶಾಲಾ(ಮಾ.08): ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಮೇಲೆ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 218 ರನ್‌ಗಳಿಗೆ ಕಟ್ಟಿಹಾಕಿರುವ ಭಾರತ ಇದೀಗ ಎರಡನೇ ದಿನದಾಟದಲ್ಲಿ ಬೃಹತ್ ಮೊತ್ತ ದಾಖಲಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಹೀಗಿರುವಾಗಲೇ ಧರ್ಮಶಾಲಾ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ರೋಹಿತ್ ಶರ್ಮಾ, ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಹೌದು, ರೋಹಿತ್ ಶರ್ಮಾ ಇದೀಗ ಬ್ಯಾಟ್ ಮೂಲಕ ಅಲ್ಲ ಫೀಲ್ಡಿಂಗ್‌ನಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಬೌಲಿಂಗ್‌ನಲ್ಲಿ ಮಾರ್ಕ್‌ ವುಡ್ ಅವರು ನೀಡಿದ ಕ್ಯಾಚ್ ಅನ್ನು ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಅದ್ಭುತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ಈ ಮೂಲಕ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ 60+ ಕ್ಯಾಚ್ ಹಿಡಿದ ಔಟ್‌ಫೀಲ್ಡ್ ಕ್ಯಾಪ್ಟನ್ ಎನ್ನುವ ದಾಖಲೆ ನಿರ್ಮಿಸಿದ್ದಾರೆ. ಈಗಾಗಲೇ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ 93 ಹಾಗೂ ಟಿ20 ಕ್ರಿಕೆಟ್‌ನಲ್ಲಿ 60 ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 

Dharamsala Test ಯಶಸ್ವಿ ಜೈಸ್ವಾಲ್ ದಾಖಲೆ ಓಟಕ್ಕಿಲ್ಲ ಬ್ರೇಕ್‌!

ಕುಲ್ದೀಪ್‌ ವೇಗದ 50 ವಿಕೆಟ್ ದಾಖಲೆ

ಕುಲ್ದೀಪ್‌ ಭಾರತದ ಪರ ಟೆಸ್ಟ್‌ನಲ್ಲಿ ಎಸೆತಗಳ ಆಧಾರದಲ್ಲಿ ಅತಿ ವೇಗವಾಗಿ 50 ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಕುಲ್ದೀಪ್‌ 1871ನೇ ಎಸೆತದಲ್ಲಿ 50 ವಿಕೆಟ್‌ ಮೈಲಿಗಲ್ಲು ಸಾಧಿಸಿದರು. ಅಕ್ಷರ್‌ ಪಟೇಲ್‌ 2205, ಬೂಮ್ರಾ 2465 ಎಸೆತಗಳನ್ನು ಬಳಸಿಕೊಂಡಿದ್ದರು. ಒಟ್ಟಾರೆ ಭಾರತದ ಪರ 50 ಟೆಸ್ಟ್‌ ವಿಕೆಟ್‌ ಕಿತ್ತ 43ನೇ ಬೌಲರ್‌.

ಇನ್ನು ಧರ್ಮಶಾಲಾ ಟೆಸ್ಟ್ ಪಂದ್ಯದ ವಿಚಾರಕ್ಕೆ ಬರುವುದಾದರೇ, ಆರಂಭದಲ್ಲಿ ಕುಲ್ದೀಪ್‌ ಯಾದವ್‌, ಕೊನೆಯಲ್ಲಿ ಆರ್‌.ಅಶ್ವಿನ್‌ ಪ್ರದರ್ಶಿಸಿದ ಸ್ಪಿನ್‌ ಜಾದೂ ಹಾಗೂ ಭಾರತದ ಬ್ಯಾಟರ್‌ಗಳ ಸ್ಫೋಟಕ ಆಟದ ಮುಂದೆ ಇಂಗ್ಲೆಂಡ್‌ ಅಕ್ಷರಶಃ ತತ್ತರಿಸಿದೆ. ಗುರುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ಆರಂಭಗೊಂಡ ಇಂಗ್ಲೆಂಡ್‌ ವಿರುದ್ಧದ 5ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಮೊದಲ ದಿನವೇ ಅಧಿಪತ್ಯ ಸಾಧಿಸಿತು.

ಬ್ಯಾಟಿಂಗ್‌ಗೆ ಅನುಕೂಲಕರ ಎನಿಸಿದ್ದ ಪಿಚ್‌ನಲ್ಲೂ ರನ್‌ ಗಳಿಸಲು ತಿಣುಕಾಡಿದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ಕಲೆಹಾಕಿದ್ದು 218 ರನ್‌. ಸ್ಪಿನ್ನರ್‌ಗಳನ್ನು ಬಳಸಿ ಭಾರತವನ್ನೂ ಸುಲಭದಲ್ಲಿ ಕಟ್ಟಿಹಾಕುತ್ತೇವೆಂಬ ಇಂಗ್ಲೆಂಡ್‌ನ ಕನಸಿಗೆ ಟೀಂ ಇಂಡಿಯಾ ಬ್ಯಾಟರ್ಸ್‌ ತಣ್ಣೀರೆರಚಿದ್ದು, ಮೊದಲ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೇ 135 ರನ್ ಕಲೆಹಾಕಿತು. 

ಇನ್ನು ಎರಡನೇ ದಿನವೂ ಟೀಂ ಇಂಡಿಯಾ ಬ್ಯಾಟರ್‌ಗಳು ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ದಿನದಾಟದ 52 ಓವರ್ ಅಂತ್ಯದ ವೇಳೆಗೆ ಟೀಂ ಇಂಡಿಯಾ ಕೇವಲ ಒಂದು ವಿಕೆಟ್ ಕಳೆದುಕೊಂಡು 231 ರನ್ ಬಾರಿಸಿದೆ. ನಾಯಕ ರೋಹಿತ್ ಶರ್ಮಾ(89*) ಹಾಗೂ ಶುಭ್‌ಮನ್ ಗಿಲ್(81*) ಇದೀಗ ಶತಕದ ಹೊಸ್ತಿಲಲ್ಲಿದ್ದಾರೆ.