ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ಇಂದೋರ್‌ನಲ್ಲಿ ನಡೆಯಲಿದ್ದು, ಸರಣಿ 1-1 ಸಮಬಲಗೊಂಡಿದೆ. ತವರಿನಲ್ಲಿ ಸರಣಿ ಸೋಲದ ದಾಖಲೆ ಉಳಿಸಿಕೊಳ್ಳಲು ಭಾರತ ಸೆಣಸಿದರೆ, 1989ರಿಂದ ಭಾರತದಲ್ಲಿ ಏಕದಿನ ಸರಣಿ ಗೆಲ್ಲದ ನ್ಯೂಜಿಲೆಂಡ್ ಇತಿಹಾಸ ಬರೆಯುವ ಗುರಿಯಲ್ಲಿದೆ.
ಇಂದೋರ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ 3ನೇ ಹಾಗೂ ಕೊನೆಯ ಏಕದಿನ ಪಂದ್ಯ ಭಾನುವಾರ ಇಂದೋರ್‌ನಲ್ಲಿ ನಡೆಯಲಿದೆ. ಈ ಪಂದ್ಯ ಎರಡೂ ತಂಡಗಳಿಗೆ ಮಹತ್ವದ್ದಾಗಿದ್ದು, ಸರಣಿ ಗೆಲುವಿಗಾಗಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.
ಆರಂಭಿಕ 2 ಪಂದ್ಯಗಳ ಬಳಿಕ ಸರಣಿ 1-1 ಸಮಬಲಗೊಂಡಿದೆ. ಗೌತಮ್ ಗಂಭೀರ್ ಕೋಚ್ ಆದ ಬಳಿಕ ಹಲವು ಸರಣಿಗಳನ್ನು ಸೋತಿರುವ ಭಾರತ ಮತ್ತೊಂದು ಆಘಾತಕಾರಿ ಸೋಲನ್ನು ತಪ್ಪಿಸಿಕೊಳ್ಳಬೇಕಿದ್ದರೆ ಈ ಪಂದ್ಯದಲ್ಲಿ ಅಸಾಧಾರಣ ಪ್ರದರ್ಶನದ ಅಗತ್ಯವಿದೆ. ಅದರಲ್ಲೂ, ಭಾರತ ತಂಡ 2023ರ ಬಳಿಕ ತವರಿನಲ್ಲಿ ಏಕದಿನ ಸರಣಿ ಸೋತಿಲ್ಲ. ಈ ದಾಖಲೆಯನ್ನು ತಂಡ ಮುಂದುವರಿಸುವ ವಿಶ್ವಾಸದಲ್ಲಿದೆ.
ಆರಂಭಿಕ ಪಂದ್ಯದಲ್ಲಿ ಗೆದ್ದಿದ್ದ ಭಾರತಕ್ಕೆ 2ನೇ ಪಂದ್ಯದಲ್ಲಿ ಕಿವೀಸ್ ಬ್ಯಾಟರ್‌ಗಳು ಪಾಠ ಕಲಿಸಿದ್ದರು. ಬೌಲಿಂಗ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ಭಾರತ, ಹೋರಾಟವಿಲ್ಲದೆ ಪಂದ್ಯ ಕೈಚೆಲ್ಲಿತ್ತು. ಇಂದೋರ್ ಕ್ರೀಡಾಂಗಣ ದೊಡ್ಡ ಮೊತ್ತಗಳಿಗೆ ಹೆಸರುವಾಸಿಯಾಗಿರುವುದರಿಂದ ಭಾರತೀಯ ಬೌಲರ್‌ಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬ ಕುತೂಹಲವಿದೆ. ಇದರ ಜೊತೆಗೆ ಅಭೂತಪೂರ್ವ ಲಯದಲ್ಲಿರುವ ವಿರಾಟ್ ಕೊಹ್ಲಿ ಆಟದ ಮೇಲೆ ಎಲ್ಲರ ಕಣ್ಣಿದ್ದು, ರೋಹಿತ್ ಶರ್ಮಾ, ಶುಭ್‌ಮನ್ ಗಿಲ್ ಕೂಡಾ ಅಬ್ಬರಿಸಬೇಕಿದೆ. ಕೆ.ಎಲ್.ರಾಹುಲ್ ಮತ್ತೊಂದು ಅಮೋಘ ಆಟದ ನಿರೀಕ್ಷೆಯಲ್ಲಿದ್ದಾರೆ.
ಅರ್ಶದೀಪ್ ಸಿಂಗ್‌ಗೆ ಭಾರತ ತಂಡದಲ್ಲಿ ಸ್ಥಾನ?
ಇನ್ನು, ಈ ಪಂದ್ಯದಲ್ಲಿ ಕೆಲ ಬದಲಾವಣೆ ಕಂಡುಬರುವ ಸಾಧ್ಯತೆಯೂ ಇದೆ. ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ತಂಡದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದು, ಅವರನ್ನು ಸೇರಿಸಿದರೆ ಯಾರನ್ನು ಹೊರಗಿಡಲಿದ್ದಾರೆ ಎಂಬ ಕುತೂಹಲವಿದೆ. ಇನ್ನು ವಾಷಿಂಗ್ಟನ್ ಸುಂದರ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ನಿತೀಶ್ ಕುಮಾರ್ ಹಾಗೂ ಆಯುಶ್ ಬದೋನಿ ನಡುವೆ ಪೈಪೋಟಿಯಿದೆ.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ಕಿವೀಸ್‌ಗೆ ಟೆಸ್ಟ್ ಬಳಿಕ ಚೊಚ್ಚಲ ಸರಣಿ ಗೆಲ್ಲುವ ಗುರಿ
ನ್ಯೂಜಿಲೆಂಡ್ ತಂಡ ಈ ಬಾರಿ ಭಾರತದಲ್ಲಿ ಏಕದಿನ ಸರಣಿ ಗೆಲುವಿನ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದೆ. ತಂಡ 1989ರಿಂದಲೂ ಭಾರತ ಪ್ರವಾಸ ಕೈಗೊಳ್ಳುತ್ತಿದೆ. ಆದರೆ ಒಮ್ಮೆಯೂ ಸರಣಿ ಜಯಿಸಿಲ್ಲ. 2024ರಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದಿದ್ದ ನ್ಯೂಜಿಲೆಂಡ್, ಈ ಬಾರಿ ಏಕದಿನ ಸರಣಿಯನ್ನೂ ಕೈವಶಪಡಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.


