ಭಾರತ-ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯಕ್ಕೆ ಗುವಾಹಟಿ ಆತಿಥ್ಯಈಗಾಗಲೇ ಮೊದಲ ಟಿ20 ಪಂದ್ಯವನ್ನು ಗೆದ್ದು ಬೀಗಿರುವ ಟೀಂ ಇಂಡಿಯಾಎರಡನೇ ಟಿ20 ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿ ರೋಹಿತ್ ಶರ್ಮಾ ಪಡೆ

ಗುವಾಹಟಿ(ಅ.02): ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಗಾಯಗೊಂಡಿದ್ದರಿಂದ ಆಘಾತಕ್ಕೊಳಗಾಗಿರುವ ಟೀಂ ಇಂಡಿಯಾ, ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯವನ್ನಾಡಲಿದ್ದು, ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಗೆಲ್ಲುವ ಕಾತರದಲ್ಲಿದೆ. ಪಂದ್ಯಕ್ಕೆ ಗುವಾಹಟಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಟಿ20 ವಿಶ್ವಕಪ್‌ಗೂ ಮುನ್ನ ಬಲಿಷ್ಠ ಬೌಲಿಂಗ್‌ ಪಡೆಯನ್ನು ಸಿದ್ಧಗೊಳಿಸಲು ಹೆಣಗಾಡುತ್ತಿರುವ ಭಾರತಕ್ಕೆ ಬೂಮ್ರಾ ಗೈರು ಮತ್ತಷ್ಟುಕಾಡಲಿದೆ. ಅವರ ಬದಲು ಸರಣಿಗೆ ಆಯ್ಕೆಯಾಗಿರುವ ಮೊಹಮದ್‌ ಸಿರಾಜ್‌ ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ದೀಪಕ್‌ ಚಹರ್‌ ವಿಶ್ವಕಪ್‌ನ ಮೀಸಲು ಆಟಗಾರರ ಪಟ್ಟಿಯಲ್ಲಿದ್ದು, ಮುಖ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದ್ದಾರೆ. ಅಶ್‌ರ್‍ದೀಪ್‌ ಸಿಂಗ್‌, ಹರ್ಷಲ್‌ ಪಟೇಲ್‌ ಮತ್ತೊಮ್ಮೆ ಸಾಮರ್ಥ್ಯ ಸಾಬೀತುಪಡಿಸಬೇಕಿದೆ. ಚಹಲ್‌ ಬದಲು ಅಶ್ವಿನ್‌ಗೆ ಮತ್ತೊಂದು ಅವಕಾಶ ಸಿಗಬಹುದು.

ಬ್ಯಾಟಿಂಗ್‌ನಲ್ಲಿ ಸೂರ್ಯಕುಮಾರ್‌ ಯಾದವ್ ಮಾತ್ರ ಅಬ್ಬರಿಸುತ್ತಿದ್ದು, ನಾಯಕ ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ ಸ್ಥಿರತೆ ಕಂಡುಕೊಳ್ಳಬೇಕಿದೆ. ದಿನೇಶ್‌ ಕಾರ್ತಿಕ್‌ ಜೊತೆ ರಿಷಭ್‌ ಪಂತ್‌ ಕೂಡಾ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ. ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಹಾರ್ದಿಕ್‌ ಪಾಂಡ್ಯ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್‌ ಮತ್ತೊಮ್ಮೆ ಹೊಣೆಯರಿತು ಪ್ರದರ್ಶನ ತೋರಬೇಕಿದೆ. ಆರ್ಶದೀಪ್ ಸಿಂಗ್ ಹಾಗೂ ದೀಪಕ್ ಚಹರ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

'ICC T20 World Cup ಟೂರ್ನಿಯಲ್ಲಿ ರೋಹಿತ್ ಶರ್ಮಾ ಖಂಡಿತವಾಗಿ ಶತಕ ಚಚ್ಚಲಿದ್ದಾರೆ'

ಮತ್ತೊಂದೆಡೆ ಆರಂಭಿಕ ಪಂದ್ಯದಲ್ಲಿ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿದ್ದ ದ.ಆಫ್ರಿಕಾ ಒತ್ತಡದಲ್ಲಿದೆ. ಏಯ್ಡನ್ ಮಾರ್ಕ್ರಮ್‌, ರೈಲಿ ರೋಸೌ, ಡೇವಿಡ್‌ ಮಿಲ್ಲರ್‌ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ರಬಾಡ, ನೋಕಿಯಾ, ಶಮ್ಸಿ, ಮಹಾರಾಜ್‌ ಭಾರತೀಯ ಬ್ಯಾಟರ್‌ಗಳನ್ನು ಕಟ್ಟಿಹಾಕಬೇಕಾದ ಜವಾಬ್ದಾರಿಯಿದೆ.

ಸಂಭವನೀಯರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ ಎಲ್ ರಾಹುಲ್‌, ವಿರಾಟ್ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ರಿಷಭ್‌ ಪಂತ್‌, ದಿನೇಶ್ ಕಾರ್ತಿಕ್‌, ಅಕ್ಷರ್‌ ಪಟೇಲ್, ರವಿಚಂದ್ರನ್ ಅಶ್ವಿನ್‌, ದೀಪಕ್ ಚಹರ್‌, ಅಶ್‌ರ್‍ದೀಪ್‌ ಸಿಂಗ್, ಮೊಹಮ್ಮದ್ ಸಿರಾಜ್‌.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್‌, ತೆಂಬಾ ಬವುಮಾ(ನಾಯಕ), ರೀಲೆ ರೋಸೌ, ಏಯ್ಡನ್ ಮಾರ್ಕ್ರಮ್‌, ಡೇವಿಡ್ ಮಿಲ್ಲರ್‌, ಸ್ಟಬ್ಸ್‌, ವೇಯ್ನ್ ಪಾರ್ನೆಲ್‌, ಕೇಶವ್ ಮಹಾರಾಜ್‌, ಕಗಿಸೋ ರಬಾಡ, ಏನ್ರಿಚ್ ನೋಕಿಯಾ, ತಬ್ರೀಜ್ ಶಮ್ಸಿ.

ಪಂದ್ಯ: ಸಂಜೆ 7ಕ್ಕೆ
ಸ್ಥಳ: ಗುವಾಹಟಿ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್