2023ರ ಐಪಿಎಲ್ ಟೂರ್ನಿಯಿಂದ ರಿಷಭ್ ಪಂತ್ ಬಹುತೇಕ ಔಟ್ಪಂತ್ ಅನುಪಸ್ಥಿತಿಯಲ್ಲಿ ಡೇವಿಡ್ ವಾರ್ನರ್‌ಗೆ ಡೆಲ್ಲಿ ನಾಯಕ ಪಟ್ಟಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆ

ನವದೆಹಲಿ(ಜ.01): ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ರಿಷಭ್‌ ಪಂತ್‌ ಚೇತರಿಸಿಕೊಂಡು ಕ್ರಿಕೆಟ್‌ಗೆ ಮರಳಲು ಕನಿಷ್ಠ 6 ತಿಂಗಳ ಸಮಯ ಬೇಕಿದೆ ಎಂದು ವೈದ್ಯರು ತಿಳಿಸಿದ್ದು, ಅವರ ಅನುಪಸ್ಥಿತಿಯಲ್ಲಿ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಡೇವಿಡ್‌ ವಾರ್ನರ್‌ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. 

ಮುಂಬರುವ ದಿನಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮಾಲಿಕರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಡೇವಿಡ್ ವಾರ್ನರ್‌ ಈ ಹಿಂದೆ ಸನ್‌ರೈಸ​ರ್ಸ್‌ ಹೈದರಾಬಾದ್‌ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. 2016ರಲ್ಲಿ ಅವರ ನಾಯಕತ್ವದಲ್ಲಿ ಸನ್‌ರೈಸ​ರ್ಸ್‌ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್‌ ಆಗಿತ್ತು.

ಮೊದಲ ಐಪಿಎಲ್ ಟ್ರೋಫಿ ಕನವರಿಕೆಯಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌:

ಚೊಚ್ಚಲ ಆವೃತ್ತಿಯಿಂದಲೂ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಿಗೆ ಐಪಿಎಲ್ ಟ್ರೋಫಿ ಮರಿಚಿಕೆಯಾಗಿಯೇ ಉಳಿದಿದೆ. ಕಳೆದ 15 ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಒಮ್ಮೆ ಮಾತ್ರ ಫೈನಲ್‌ ಪ್ರವೇಶಿಸಿದ್ದು ಬಿಟ್ಟರೇ, ಪ್ರಶಸ್ತಿ ಹತ್ತಿರವೂ ಸುಳಿದಿಲ್ಲ. ಒಂದು ವೇಳೆ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿ ನೇಮಕಗೊಂಡರೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

ಪಂತ್‌ಗೆ ಪ್ಲಾಸ್ಟಿಕ್‌ ಸರ್ಜರಿ: ಹಣೆ ಮೇಲಾಗಿರುವ ಗಾಯಗಳಿಗೆ ಚಿಕಿತ್ಸೆ

ಡೆಹರಾಡೂನ್‌: ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಭಾರತ ಕ್ರಿಕೆಟ್‌ ತಂಡದ ಆಟಗಾರ ರಿಷಭ್‌ ಪಂತ್‌ಗೆ ಇಲ್ಲಿನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶುಕ್ರವಾರ ರಾತ್ರಿ ಪಂತ್‌ ಹಣೆ ಮೇಲೆ ಆಗಿದ್ದ ಗಾಯಗಳಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಲಾಗಿದೆ. ಮಂಡಿ, ಕಾಲು, ಕೈಗೂ ಬಲವಾದ ಪೆಟ್ಟು ಬಿದ್ದಿದ್ದು ಮತ್ತೊಂದು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನಲಾಗಿದೆ.

ಅಪಘಾತಕ್ಕೂ ಮೊದಲೇ ಮಂಡಿ ನೋವಿನಿಂದ ಬಳಲುತ್ತಿದ್ದ ಪಂತ್‌ರ ಶಸ್ತ್ರಚಿಕಿತ್ಸೆಯ ಹೊಣೆಯನ್ನು ಬಿಸಿಸಿಐ ವಹಿಸಿಕೊಳ್ಳಲಿದೆ ಎನ್ನಲಾಗಿದ್ದು, ಇದಕ್ಕಾಗಿ ದೆಹಲಿ ಇಲ್ಲವೇ ಮುಂಬೈಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ರಿಷಭ್ ಪಂತ್ ಕಾಪಾಡಿದ ಡ್ರೈವರ್‌ ರಿಯಲ್ ಹೀರೋ ಎಂದು ಬಣ್ಣಿಸಿದ ವಿವಿಎಸ್ ಲಕ್ಷ್ಮಣ್‌..! ಟ್ವೀಟ್ ವೈರಲ್

ಆಸ್ಪತ್ರೆಗೆ ಬಾಲಿವುಡ್‌ ನಟರು

ಶನಿವಾರ ಡೆಹರಾಡೂನ್‌ನ ಆಸ್ಪತ್ರೆಗೆ ಬಾಲಿವುಡ್‌ನ ಹಿರಿಯ ನಟರಾದ ಅನುಪಮ್‌ ಖೇರ್‌ ಹಾಗೂ ಅನಿಲ್‌ ಕಪೂರ್‌ ಭೇಟಿ ನೀಡಿ ಪಂತ್‌ರ ಆರೋಗ್ಯ ವಿಚಾರಿಸಿದರು. ಆಸ್ಪತ್ರೆಯಿಂದ ಹೊರಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕಪೂರ್‌, ‘ಅಭಿಮಾನಿಗಳಾಗಿ ನಾವು ಭೇಟಿ ನೀಡಿದ್ದೆವು. ಪಂತ್‌ ಆರಾಮಾಗಿದ್ದಾರೆ. ಆತಂಕ ಪಡುವ ಸಮಸ್ಯೆಗಳೇನೂ ಇಲ್ಲ. ಅವರು ಚೆನ್ನಾಗಿ ಮಾತನಾಡುತ್ತಿದ್ದು, ನಮ್ಮೊಡನೆ ಸಾಕಷ್ಟು ನಕ್ಕರು. ಕುಟುಂಬಸ್ಥರು ಅವರ ಜೊತೆಗಿದ್ದು ಆದಷ್ಟು ಬೇಗ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ವೈದ್ಯರು ತಿಳಿಸಿದರು’ ಎಂದು ಹೇಳಿದರು.

ಟೀಂ ಇಂಡಿಯಾ ಆಟಗಾರರ ಕಾಳಜಿ

ಪಂತ್‌ ಅಪಘಾತ ಸುದ್ದಿ ಭಾರತ ಕ್ರಿಕೆಟ್‌ ತಂಡದ ಆಟಗಾರರಲ್ಲಿ ಆತಂಕ ಮೂಡಿಸಿದೆ. ನಾಯಕ ರೋಹಿತ್‌ ಶರ್ಮಾ, ಮಾಜಿ ನಾಯಕ ವಿರಾಟ್‌ ಕೊಹ್ಲಿ ಸೇರಿದಂತೆ ಬಹುತೇಕ ಆಟಗಾರರು ಡೆಹರಾಡೂನ್‌ ಆಸ್ಪತ್ರೆಯ ವೈದ್ಯರಿಂದ ಪಂತ್‌ ಆರೋಗ್ಯದ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.