ರಿಷಭ್ ಪಂತ್ ಕಾರು ಅಪಘಾತದಿಂದ ತೀವ್ರವಾಗಿ ಗಾಯಪಂತ್ ಅವರನ್ನು ಅಪಘಾತದ ಬಳಿಕ ರಕ್ಷಿಸಿ ಆಂಬುಲೆನ್ಸ್‌ಗೆ ಕರೆ ಮಾಡಿದ ಬಸ್ ಡ್ರೈವರ್ಬಸ್ ಡ್ರೈವರ್ ಹಾಗೂ ಕಂಡಕ್ಟರ್ ಸೇವೆಯನ್ನು ಶ್ಲಾಘಿಸಿದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್

ಬೆಂಗಳೂರು(ಡಿ.31): ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಶುಕ್ರವಾರ ಮುಂಜಾನೆ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ಡೆಲ್ಲಿಯಿಂದ ಉತ್ತರಖಂಡ್‌ನತ್ತ ಪ್ರಯಾಣ ಬೆಳೆಸಿದ್ದ ರಿಷಭ್ ಪಂತ್, ರೂರ್ಕಿ ಎಂಬಲ್ಲಿ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ. 

ರಿಷಭ್ ಪಂತ್ ಅವರಿದ್ದ ಕಾರು, ರಸ್ತೆ ಡಿವೈಡರ್‌ಗೆ ಡಿಕ್ಕಿಹೊಡೆದ ಪರಿಣಾಮ, ಸ್ಥಳದಲ್ಲಿಯೇ ಕಾರು ಹೊತ್ತಿ ಉರಿದಿದೆ. ಆದರೆ ಸರಿಯಾದ ಸಮಯದಲ್ಲಿ ರಿಷಭ್ ಪಂತ್, ಕಾರಿನ ಗಾಜು ಒಡೆದು ಹೊರಬಂದಿದ್ದರಿಂದ, ಗಂಭೀರ ಗಾಯದಿಂದ ಪಾರಾಗಿದ್ದಾರೆ. ಹೀಗಿದ್ದೂ ಅಪಘಾತದಲ್ಲಿ 25 ವರ್ಷದ ಪಂತ್‌ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ. ಎಂಆರ್‌ಐ ಸ್ಕ್ಯಾನ್‌ ಮೂಲಕ ಅವರ ಮಿದುಳು, ಬೆನ್ನು ಹುರಿ(ಸ್ಪೈನಲ್‌ ಕಾರ್ಡ್‌)ಗೆ ಪೆಟ್ಟು ಬಿದ್ದಿಲ್ಲ ಎಂದು ದೃಢಪಟ್ಟಿದೆ. ಪ್ರಾಣಾಪಾಯದಿಂದ ಪಾರಾಗಿರುವ ಪಂತ್‌ ಸದ್ಯ ಡೆಹರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಿಷಭ್ ಪಂತ್ ಅವರ ಕಾರು ಅಪಘಾತವಾಗಿದ್ದನ್ನು ಎದುರಿನಿಂದ ಬರುತ್ತಿದ್ದ ಬಸ್‌ ಡ್ರೈವರ್ ಸುಶೀಲ್ ಮನ್‌ ನೋಡಿ ತಕ್ಷಣವೇ ಪಂತ್ ರಕ್ಷಣೆಗೆ ಧಾವಿಸಿದ್ದಾರೆ. ಸುಶೀಲ್ ಮನ್ ಅವರೇ ಹೇಳಿದಂತೆ ಮೊದಲಿಗೆ ಅಪಘಾತವಾದ ವ್ಯಕ್ತಿ ಯಾರೆಂಬುದೇ ಅವರಿಗೆ ತಿಳಿದಿರಲಿಲ್ಲವಂತೆ. ತಕ್ಷಣ ಪಂತ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಆಂಬುಲೆನ್ಸ್‌ಗೆ ಕರೆಮಾಡಿ ಮಾನವೀಯತೆ ಮೆರೆದಿದ್ದಾರೆ.

ನೆರವಿಗೆ ಧಾವಿಸಿದ ಬಸ್‌ ಚಾಲಕ

ಕಾರಿನಿಂದ ಹೊರಬಂದು ರಸ್ತೆಯಲ್ಲಿ ಬಿದ್ದಿದ್ದ ರಿಷಭ್‌ರ ಸಹಾಯಕ್ಕೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್‌ ಚಾಲಕ ಧಾವಿಸಿದ್ದಾರೆ. ರಸ್ತೆಯ ಪಕ್ಕದಲ್ಲೇ ರಿಷಭ್‌ರನ್ನು ಮಲಗಿಸಿ ತಮ್ಮ ಹೊದಿಕೆಯನ್ನು ಅವರ ಮೈ ಮೇಲೆ ಹಾಕಿ, ಬಳಿಕ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಮೊದಲು ರೂರ್ಕೀಯ ಸಕ್ಷಮ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿದೆ.

ಆಸ್ಟ್ರೇಲಿಯಾ ಟೆಸ್ಟ್‌ಗೆ ರಿಷಭ್ ಪಂತ್ ಅಲಭ್ಯ? ಆಸ್ಪತ್ರೆಯಲ್ಲಿರುವ ಪಂತ್, ಡೆಲ್ಲಿಗೆ ಏರ್‌ಲಿಫ್ಟ್?

ಇದೀಗ ಈ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್‌, ಬಸ್‌ ಡ್ರೈವರ್ ಹಾಗೂ ಕಂಡಕ್ಟರ್ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. "ಅಪಘಾತದಿಂದಾಗಿ ಬೆಂಕಿಯಿಂದ ಉರಿಯುತ್ತಿದ್ದ ಕಾರಿನಿಂದ ರಿಷಭ್ ಪಂತ್ ಅವರನ್ನು ರಕ್ಷಿಸಿ, ಅವರಿಗೆ ಬೆಡ್‌ಶೀಟ್ ಹೊದಿಸಿ, ಆಂಬುಲೆನ್ಸ್‌ಗೆ ಕರೆ ಮಾಡಿ ತಿಳಿಸಿದ ಹರ್ಯಾಣದ ಬಸ್‌ ಡ್ರೈವರ್‌ಗೆ ಕೃತಜ್ಞತೆಗಳು. ನಾವು ನಿಮ್ಮ ಸ್ವಾರ್ಥ ರಹಿತ ಸೇವೆಗೆ ಎಂದೆಂದೆಗೂ ಚಿರಋಣಿಗಳಾಗಿರುತ್ತೇವೆ. ಸುಶೀಲ್ ಅವರಿಗೆ ನೀವೇ ನಿಜವಾದ ಹೀರೋ ಎಂದು ಟ್ವೀಟ್‌ ಮೂಲಕ ಗೌರವ ಸಲ್ಲಿಸಿದ್ದಾರೆ. 

Scroll to load tweet…
Scroll to load tweet…

ಇನ್ನು ವಿಶೇಷವಾಗಿ ಕಂಡಕ್ಟರ್ ಪರಮ್‌ಜಿತ್ ಅವರ ಸೇವೆಯನ್ನು ಸ್ಮರಿಸಲೇಬೇಕು. ರಿಷಭ್ ಪಂತ್ ರಕ್ಷಿಸುವಲ್ಲಿ ಸುಶೀಲ್ ಜತೆಗೆ ಪರಮ್‌ಜಿತ್ ಕೂಡಾ ಕೈ ಜೋಡಿಸಿದರು. ಹೃದಯವೈಶಾಲ್ಯತೆ ಹಾಗೂ ಸಮಯಪ್ರಜ್ಞೆಯಿಂದ ನಿಸ್ವಾರ್ಥ ಸೇವೆ ಮಾಡಿದ ಇವರಿಬ್ಬರಿಗೂ ಕೃತಜ್ಞತೆಗಳು. ರಿಷಭ್ ಪಂತ್‌ ರಕ್ಷಿಸಲು ನೆರವಾದ ಎಲ್ಲರಿಗೂ ಕೃತಜ್ಞತಾಪೂರ್ವಕ ಧನ್ಯವಾದಗಳು ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.