* ರಿಷಭ್ ಪಂತ್ ಕಾರು ಅಪಘಾತದಲ್ಲಿ ಗಂಭೀರ ಗಾಯ* ಪ್ರಾಥಮಿಕ ಚಿಕಿತ್ಸೆ ಬಳಿಕ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಗೆ ಪಂತ್ ದಾಖಲು* ಇದೀಗ ಪಂತ್ ಅವರ ಎಕ್ಸ್-ರೇ ರಿಪೋರ್ಟ್ ಬಹಿರಂಗ
ನವದೆಹಲಿ(ಡಿ.30): ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಇಂದು ಬೆಳಗ್ಗೆ ರಸ್ತೆ ಅಪಘಾತದಲ್ಲಿ ತೀವ್ರಗಾಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಿಷಭ್ ಪಂತ್ ಅವರನ್ನು ಡೆಲ್ಲಿ ರಸ್ತೆಯಲ್ಲಿದ್ದ ಸಕ್ಷಮ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಡೆಹ್ರಾಡೂನ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ರಿಷಭ್ ಪಂತ್ ಅವರ ಗಾಯದ ತೀವ್ರತೆಯ ಬಗ್ಗೆ ಎಕ್ಸ್-ರೇ ರಿಪೋರ್ಟ್ ಹೊರಬಿದ್ದಿದೆ.
ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದರಿಂದ ಪಂತ್ ಅವರಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಅಪ್ಪಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿಗೆ ಬೆಂಕಿ ತಗುಲುತ್ತಿದ್ದಂತೆಯೇ ಪ್ರಾಣಾಪಾಯದಿಂದ ಪಾರಾಗಲು ರಿಷಭ್ ಪಂತ್, ಕಾರಿನ ಗಾಜು ಒಡೆದು ಹೊರಬಂದಿದ್ದಾರೆ. ಒಂದು ವೇಳೆ ಕಾರಿನಲ್ಲೇ ಪಂತ್ ಉಳಿದಿದ್ದರೇ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿತ್ತು. ಇದರ ಜತೆಗೆ ಮರ್ಸಿಡೀಸ್ ಕಾರು ಸಾಕಷ್ಟು ಉತ್ತಮ ಸುರಕ್ಷತಾ ಸೌಲಭ್ಯಗಳನ್ನು ಹೊಂದಿದ್ದರಿಂದ ಪಂತ್ ಬಚಾವಾಗಿದ್ದಾರೆ
ಕಾರಿನಿಂದ ಹೊರಬೀಳುತ್ತಿದ್ದಂತೆಯೇ ಪಂತ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಇದಾದ ಬಳಿಕ ಗಾಯದ ತೀವ್ರತೆ ತಿಳಿಯಲು ತಕ್ಷಣವೇ ಡೆಹ್ರಾಡೂನ್‌ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಗೆ ರಿಷಭ್ ಪಂತ್ ಅವರನ್ನು ಶಿಫ್ಟ್ ಮಾಡಲಾಗಿದೆ. ಇದೀಗ ವೈದ್ಯರು ಪಂತ್ ಅವರನ್ನು ಎಕ್ಸ್-ರೇ ಮಾಡಲಾಗಿದ್ದು, ಪ್ರಾಥಮಿಕ ಮಾಹಿತಿಯ ಪ್ರಕಾರ, ರಿಷಭ್ ಪಂತ್ ಅವರಿಗೆ ಯಾವುದೇ ಸುಟ್ಟ ಗಾಯಗಳಾಗಿಲ್ಲ ಹಾಗೂ ಯಾವುದೇ ಮೂಳೆಗಳು ಮುರಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಷ್ಟೇ ಅಲ್ಲದೇ ರಿಷಭ್ ಪಂತ್‌ಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎನ್ನುವುದನ್ನು ಖಚಿತಪಡಿಸಿದ್ದಾರೆ. ಆದರೆ ರಿಷಭ್ ಪಂತ್ ಅವರ ಹಣೆ ಹಾಗೂ ಮುಂಗಾಲಿಗೆ ತೀವ್ರ ಗಾಯವಾಗಿದ್ದು, ಮೊಣಕಾಲಿಗೂ ಕೂಡಾ ತರಚಿದ ಗಾಯಗಳಾಗಿವೆ.
ರಿಷಭ್ ಪಂತ್, ಇತ್ತೀಚೆಗಷ್ಟೇ ಮುಕ್ತಾಯವಾದ ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಬಾಂಗ್ಲಾದೇಶ ಎದುರಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಿಷಭ್ ಪಂತ್ ಆಕರ್ಷಕ 93 ರನ್ ಸಿಡಿಸಿ, ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಆದರೆ ಶ್ರೀಲಂಕಾ ವಿರುದ್ದ ಜನವರಿ 03ರಿಂದ ಆರಂಭವಾಗಲಿರುವ ಸೀಮಿತ ಓವರ್‌ಗಳ ಸರಣಿಯಿಂದ ರಿಷಭ್ ಪಂತ್ ಅವರನ್ನು ಕೈಬಿಡಲಾಗಿತ್ತು.
Rishabh Pant: ವಿಕೆಟ್ ಕೀಪರ್ ಪಂತ್ ಕಾರು ಅಪಘಾತ, ಮೈ ಜುಂ ಎನಿಸುವ ಸಿಸಿಟಿವಿ ವಿಡಿಯೋ ವೈರಲ್..!
ಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ರಿಷಭ್ ಪಂತ್ ಅವರನ್ನು ಫಿಟ್ನೆಸ್ ಸಮಸ್ಯೆಯ ಕಾರಣದಿಂದ ಲಂಕಾ ಎದುರಿನ ಸರಣಿಯಿಂದ ಕೈಬಿಡಲಾಗಿತ್ತು. ಹೊಸ ವರ್ಷದ ಸಂಭ್ರಮಾಚರಣೆಯ ಬಳಿಕ ರಿಷಭ್ ಪಂತ್, ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ 15 ದಿನಗಳ ಕಾಲ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಬೇಕಿತ್ತು. ಇದೀಗ ರಿಷಭ್ ಪಂತ್ ಗಾಯಗೊಂಡಿರುವುದರಿಂದ ಕೆಲ ತಿಂಗಳ ಮಟ್ಟಿಗೆ ಕ್ರಿಕೆಟ್ ಮೈದಾನದಿಂದ ದೂರ ಉಳಿಯುವ ಸಾಧ್ಯತೆಯಿದೆ.
