ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯವಾಗಿ ಸೋತಿದೆ. ಹಂಗಾಮಿ ನಾಯಕ ರಿಷಭ್ ಪಂತ್, ತಂಡದ ಕಳಪೆ ಪ್ರದರ್ಶನದ ಜವಾಬ್ದಾರಿ ಹೊತ್ತು ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಸೋತು ಸರಣಿ ಕೈಚೆಲ್ಲಿದ ನಂತರ, ಹಂಗಾಮಿ ನಾಯಕ ರಿಷಭ್ ಪಂತ್ ಅಭಿಮಾನಿಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಮೊದಲ ಟೆಸ್ಟ್ ವೇಳೆ ನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದರಿಂದ, ಎರಡನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಭಾರತವನ್ನು ಮುನ್ನಡೆಸಿದ್ದರು. ನಾಯಕನಾಗಿ ಮತ್ತು ಬ್ಯಾಟರ್ ಆಗಿ ರಿಷಭ್ ಪಂತ್ ನಿರಾಸೆ ಮೂಡಿಸಿದರು.

ಪಂದ್ಯದಲ್ಲಿ ಭಾರತ 408 ರನ್‌ಗಳಿಂದ ಸೋಲು ಕಂಡಿತು. ಇದು ಭಾರತದ ಟೆಸ್ಟ್ ಇತಿಹಾಸದಲ್ಲಿಯೇ ಅತಿದೊಡ್ಡ ಸೋಲಾಗಿದೆ. ಇದರ ಬೆನ್ನಲ್ಲೇ, ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ರಿಷಭ್ ಪಂತ್ ಭಾರತ ತಂಡದ ಕಳಪೆ ಪ್ರದರ್ಶನಕ್ಕಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. ಸರಣಿಯ ನಾಲ್ಕು ಇನ್ನಿಂಗ್ಸ್‌ಗಳಿಂದ ಪಂತ್ 12.25ರ ಸರಾಸರಿಯಲ್ಲಿ ಕೇವಲ 49 ರನ್ ಗಳಿಸಲಷ್ಟೇ ಶಕ್ತರಾದರು.

ಬಹಿರಂಗವಾಗಿ ಕ್ಷಮೆ ಕೋರಿದ ರಿಷಭ್ ಪಂತ್

"ಕಳೆದ ಎರಡು ವಾರಗಳಲ್ಲಿ ನಾವು ಉತ್ತಮ ಕ್ರಿಕೆಟ್ ಆಡಿಲ್ಲ ಎಂದು ಒಪ್ಪಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ಒಂದು ತಂಡವಾಗಿ ಮತ್ತು ವೈಯಕ್ತಿಕವಾಗಿ, ಉನ್ನತ ಮಟ್ಟದ ಪ್ರದರ್ಶನ ನೀಡಿ ಕೋಟ್ಯಂತರ ಭಾರತೀಯರ ಮುಖದಲ್ಲಿ ನಗು ತರಲು ನಾವು ಯಾವಾಗಲೂ ಬಯಸುತ್ತೇವೆ. ಆದರೆ ಈ ಬಾರಿ ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. ಒಂದು ತಂಡವಾಗಿ ಮತ್ತು ವೈಯಕ್ತಿಕವಾಗಿ ಕಲಿಯಲು, ಹೊಂದಿಕೊಳ್ಳಲು ಮತ್ತು ಬೆಳೆಯಲು ಕ್ರೀಡೆ ನಮಗೆ ಕಲಿಸುತ್ತದೆ. ಭಾರತವನ್ನು ಪ್ರತಿನಿಧಿಸುವುದು ನಮ್ಮ ಜೀವನದ ಅತಿದೊಡ್ಡ ಗೌರವ. ಈ ತಂಡ ಏನು ಮಾಡಬಲ್ಲದು ಎಂದು ನಮಗೆ ತಿಳಿದಿದೆ. ತಂಡವಾಗಿ ಮತ್ತು ವೈಯಕ್ತಿಕವಾಗಿ ಇನ್ನಷ್ಟು ಬಲಿಷ್ಠವಾಗಿ ಮತ್ತು ಉತ್ತಮವಾಗಿ ಹಿಂತಿರುಗಲು ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ನಿಮ್ಮ ಅಚಲ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ರಿಷಭ್ ಪಂತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

View post on Instagram

ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಎರಡನೇ ಬಾರಿ ತವರಿನಲ್ಲೇ ವೈಟ್‌ವಾಷ್

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ 30 ರನ್‌ಗಳಿಂದ ಸೋತಿದ್ದ ಭಾರತಕ್ಕೆ, ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಗೆದ್ದರೆ ಮಾತ್ರ ಸರಣಿಯನ್ನು ಸಮಬಲಗೊಳಿಸಲು ಸಾಧ್ಯವಿತ್ತು. ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 124 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, 93 ರನ್‌ಗಳಿಗೆ ಆಲೌಟ್ ಆಗುವ ಮೂಲಕ 30 ರನ್‌ಗಳ ನಂಬಲಾಗದ ಸೋಲನ್ನು ಅನುಭವಿಸಿತ್ತು. ಇನ್ನು ಗುವಾಹಟಿಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ಹರಿಣಗಳ ಎದುರು ಟೀಂ ಇಂಡಿಯಾ, ಟೆಸ್ಟ್ ಕ್ರಿಕೆಟ್‌ನಲ್ಲೇ ಅತಿದೊಡ್ಡ ಸೋಲು ಅನುಭವಿಸಿತು. ಇದರ ಜತೆಗೆ ತವರಿನಲ್ಲಿ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ವೈಟ್‌ವಾಷ್ ಅನುಭವಿಸಿತು.