ಮುಂದೂಡಲ್ಪಟ್ಟಿರುವ 14ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಇಂಗ್ಲೆಂಡ್ ಇಲ್ಲವೇ ಆಸ್ಟ್ರೇಲಿಯಾದಲ್ಲಿ ನಡೆಯುವ ಸಾಧ್ಯತೆಗಳು ದಟ್ಟವಾಗತೊಡಗಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ 

ನವದೆಹಲಿ(ಮೇ.07): ಐಪಿಎಲ್‌ 14ನೇ ಆವೃತ್ತಿ ದಿಢೀರನೆ ಮುಂದೂಡಿಕೆಯಾಗಿರುವುದು ಬಿಸಿಸಿಐಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಟೂರ್ನಿಯನ್ನು ರದ್ದುಗೊಳಿಸಿದರೆ 2000 ಕೋಟಿ ರು. ನಷ್ಟವಾಗುವ ನಿರೀಕ್ಷೆ ಇದ್ದು, ಬಿಸಿಸಿಐ ಹೇಗಾದರೂ ಮಾಡಿ, ಈ ಆವೃತ್ತಿಯನ್ನು ಪೂರ್ಣಗೊಳಿಸಲು ಯೋಜನೆ ರೂಪಿಸುತ್ತಿದೆ. ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಬಾಕಿ ಇರುವ ಪಂದ್ಯಗಳನ್ನು ಭಾರತದಲ್ಲೇ ನಡೆಸುವುದು ಅಸಾಧ್ಯ ಎನ್ನುವುದು ಬಿಸಿಸಿಐಗೆ ಮನವರಿಕೆಯಾಗಿದೆ. ಹೀಗಾಗಿ ಬೇರೆ ಆಯ್ಕೆಗಳನ್ನು ಬಿಸಿಸಿಐ ಪರಿಶೀಲಿಸುತ್ತಿದೆ.

ಯುಎಇನಲ್ಲಿ ಸುಡು ಬಿಸಿಲು!: ಟಿ20 ವಿಶ್ವಕಪ್‌ ಕೂಡ ಭಾರತದಿಂದ ಯುಎಇಗೆ ಸ್ಥಳಾಂತರವಾಗುವ ನಿರೀಕ್ಷೆ ಇದೆ. ಅದಕ್ಕೂ ಮೊದಲು ಯುಎಇನಲ್ಲಿ ಐಪಿಎಲ್‌ ನಡೆಸುವುದಕ್ಕಿರುವ ಸವಾಲೆಂದರೆ ಸೆಪ್ಟೆಂಬರ್‌ನಲ್ಲಿ ಸುಡು ಬಿಸಿಲಿರಲಿದೆ. ಬಾಕಿ ಇರುವ 31 ಪಂದ್ಯಗಳನ್ನು ಆ ವಾತಾವರಣದಲ್ಲಿ ನಡೆಸುವುದು ಸವಾಲಾಗಿ ಪರಿಣಮಿಸಲಿದೆ.

ಬಯೋ ಬಬಲ್‌ ಲೋಪ ಹೇಗಾಯ್ತು ತಿಳಿಯುತ್ತಿಲ್ಲ: ಸೌರವ್ ಗಂಗೂಲಿ

ಇಂಗ್ಲೆಂಡ್‌ನ 4 ಕೌಂಟಿಗಳ ಆಸಕ್ತಿ: ಹೇಗಿದ್ದರೂ ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ, ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ನಲ್ಲೇ ಐಪಿಎಲ್‌ ಆಯೋಜಿಸುವುದು ಸೂಕ್ತವೆನಿಸಲಿದೆ. ಅಲ್ಲದೇ ಮಿಡ್ಲ್‌ಸೆಕ್ಸ್‌, ಸರ್ರೆ, ವಾರ್ವಿಕ್‌ಶೈರ್‌ ಹಾಗೂ ಲಂಕಾಶೈರ್‌ ಕೌಂಟಿಗಳು ಈಗಾಗಲೇ ಐಪಿಎಲ್‌ ಆಯೋಜಿಸಲು ಆಸಕ್ತಿ ತೋರಿವೆ. ಸೆಪ್ಟೆಂಬರ್‌ ನಂತರ ಇಂಗ್ಲೆಂಡ್‌ನಲ್ಲಿ ವಾತಾವರಣವೂ ಅನುಕೂಲಕರವಾಗಿರಲಿದೆ.

ಆಸ್ಪ್ರೇಲಿಯಾದಲ್ಲಿ ವಿಶ್ವಕಪ್‌?: 2021ರ ವಿಶ್ವಕಪ್‌ ಆಯೋಜನೆಯನ್ನು ಆಸ್ಪ್ರೇಲಿಯಾಕ್ಕೆ ಬಿಟ್ಟುಕೊಟ್ಟು 2022ರ ಟಿ20 ವಿಶ್ವಕಪ್‌ ಅನ್ನು ಭಾರತ ಆಯೋಜಿಸಲು ನಿರ್ಧರಿಸುವ ಸಾಧ್ಯತೆಯೂ ಇದೆ. ಹೀಗಾಗದಲ್ಲಿ, ವಿಶ್ವಕಪ್‌ಗೂ ಮೊದಲು ಆಸ್ಪ್ರೇಲಿಯಾದಲ್ಲೇ ಐಪಿಎಲ್‌ ನಡೆಸಬಹುದು. ಪರ್ತ್ ಹಾಗೂ ಭಾರತದ ನಡುವೆ ಕೇವಲ ಮೂರುವರೆ ಗಂಟೆ ವ್ಯತ್ಯಾಸವಿದೆ. ಭಾರತೀಯ ವೀಕ್ಷಕರಿಗೆ ಸರಿಹೊಂದುವ ಸಮಯದಲ್ಲೇ ಪಂದ್ಯಗಳನ್ನು ನಡೆಸಬಹುದು.