ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಂಡಿದೆ. 15 ವರ್ಷದ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರೂ, ಜೋಫ್ರಾ ಆರ್ಚರ್ ಮತ್ತು ರವಿ ಬಿಷ್ಣೋಯಿ ಅವರ ಬೌಲಿಂಗ್ ಪ್ರದರ್ಶನವೇ ರಾಜಸ್ಥಾನದ ಗೆಲುವಿಗೆ ಪ್ರಮುಖ ಕಾರಣವಾಯಿತು ಎಂದು ಲೇಖನ ವಿವರಿಸುತ್ತದೆ.

ಗುವಾಹಟಿ: ನಿನ್ನೆ ಅಂದರೆ ಏಪ್ರಿಲ್ 10ರ ತಡರಾತ್ರಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಮಳೆಬಾಧಿತ ಪಂದ್ಯದಲ್ಲಿ ಮತ್ತೊಮ್ಮೆ ವೈಭವ್ ಸೂರ್ಯವಂಶಿ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ವಿಸ್ಪೋಟಕ ಬ್ಯಾಟಿಂಗ್ ಮೂಲಕ 15 ವರ್ಷದ ವೈಭವ್, ಆರ್‌ಸಿಬಿ ಬೌಲರ್‌ಗಳ ಮೇಲೆ ಸವಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರ್‌ಸಿಬಿ ನೀಡಿದ್ದ 202 ರನ್‌ಗಳ ಕಠಿಣ ಗುರಿಯನ್ನು ರಾಜಸ್ಥಾನ ರಾಯಲ್ಸ್ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಆದರೆ ಆರ್‌ಸಿಬಿ ಸೋಲಿಸಿದ್ದು ಬರೀ ವೈಭವ್ ಸೂರ್ಯವಂಶಿ ಇನ್ನಿಂಗ್ಸ್ ಅಲ್ಲ, ಬದಲಾಗಿ ರಾಜಸ್ಥಾನದ ಪಾಲಿನ ಗೇಮ್‌ ಚೇಂಜರ್ ಇಬ್ಬರು ಬೌಲರ್‌ಗಳು ಎಂದರೆ ಅತಿಯೋಕ್ತಿಯಲ್ಲ.

Add Asianetnews Kannada as a Preferred SourcegooglePreferred

ಆರ್‌ಸಿಬಿಯನ್ನು ಕಟ್ಟಿಹಾಕಿದ ಆರ್ಚರ್-ಬಿಷ್ಣೋಯ್

19ನೇ ಸೀಸನ್‌ ಐಪಿಎಲ್ ಟೂರ್ನಿಯಲ್ಲಿ 200+ ರನ್ ಬಾರಿಸುವುದು ನೀರು ಕುಡಿದಷ್ಟೇ ಸುಲಭ ಎನ್ನುವಂತೆ ಭಾಸವಾಗುತ್ತಿದೆ. ಆದರೆ ಆರ್‌ಸಿಬಿಯಂತಹ ಬಲಾಢ್ಯ ಬ್ಯಾಟಿಂಗ್ ಲೈನ್ ಅಪ್‌ಅನ್ನು ಅದರಲ್ಲೂ ಬ್ಯಾಟಿಂಗ್ ಫ್ರೆಂಡ್ಲಿಯಾಗಿರುವ ಗುವಾಹಟಿಯಲ್ಲಿ 200ರ ಸಮೀಪವೇ ಕಟ್ಟಿಹಾಕಿದ್ದರ ಶ್ರೇಯ ಜೋಫ್ರಾ ಆರ್ಚರ್ ನೇತೃತ್ವದ ರಾಜಸ್ಥಾನ ರಾಯಲ್ಸ್ ಬೌಲಿಂಗ್ ಪಡೆಗೆ ಸಲ್ಲಬೇಕು. ಅದರಲ್ಲೂ ಜೋಫ್ರಾ ಆರ್ಚರ್ ಹಾಗೂ ರವಿ ಬಿಷ್ಣೋಯ್ ತಲಾ ಎರಡು ವಿಕೆಟ್ ಕಬಳಿಸುವ ಮೂಲಕ ಪಂದ್ಯ ರಾಜಸ್ಥಾನ ರಾಯಲ್ಸ್ ಪರ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು.

ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದ ಮೊದಲ ಓವರ್‌ನಿಂದಲೇ ರಾಜಸ್ಥಾನ ರಾಯಲ್ಸ್ ಸರಿಯಾದ ದಿಕ್ಕಿನಲ್ಲಿ ಹಾಗೂ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಆರ್‌ಸಿಬಿ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುವಂತೆ ಮಾಡಿದರು. ಮಳೆಯಿಂದಾಗಿ ಚೆಂಡಿನ ಮೇಲೆ ಹಿಡಿತ ಸಾಧಿಸುವುದು ರಾಜಸ್ಥಾನ ರಾಯಲ್ಸ್ ಬೌಲರ್‌ಗಳ ಪಾಲಿಗೆ ಅಷ್ಟು ಸುಲಭವಾಗಿರಲಿಲ್ಲ. ಹೀಗಿದ್ದು ಮೊದಲ 11 ಓವರ್‌ನಲ್ಲೇ ಆರ್‌ಸಿಬಿ 94 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಆರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಆರ್ಚರ್ ಆರಂಭದಲ್ಲೇ ಫಿಲ್ ಸಾಲ್ಟ್ ಹಾಗೂ ದೇವದತ್ ಪಡಿಕ್ಕಲ್ ವಿಕೆಟ್ ಕಬಳಿಸಿದರೆ, ರವಿ ಬಿಷ್ಣೋಯ್ ಇನ್ ಫಾರ್ಮ್ ಬ್ಯಾಟರ್ ವಿರಾಟ್‌ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯಗೆ ಪೆವಿಲಿಯನ್ ಹಾದಿ ತೋರಿಸಿದರು. ಇದು ರಾಜಸ್ಥಾನ ರಾಯಲ್ಸ್ ಗೆಲುವಿಗೆ ಪ್ರಮುಖ ಕಾರಣವಾಯಿತು.

ಮತ್ತೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ

ಇನ್ನು ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ನಾಯಕ ರಜತ್ ಪಾಟೀದಾರ್ 40 ಎಸೆತಗಳಲ್ಲಿ 63 ಹಾಗೂ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಅಜೇಯ 29 ರನ್ ಸಿಡಿಸುವ ಮೂಲಕ ತಂಡ ಇನ್ನೂರರ ಗಡಿ ದಾಟುವಂತೆ ಮಾಡಿದರು. ಆದರೆ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡಿತಾದರೂ, ಎರಡನೇ ವಿಕೆಟ್‌ಗೆ ವೈಭವ್ ಸೂರ್ಯವಂಶಿ ಹಾಗೂ ಧೃವ್ ಜುರೆಲ್ 108 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಅದರಲ್ಲೂ ಮೈಚಳಿ ಬಿಟ್ಟು ಬ್ಯಾಟ್ ಬೀಸಿದ ವೈಭವ್ ಸೂರ್ಯವಂಶಿ ಕೇವಲ 26 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ ಸ್ಪೋಟಕ 78 ರನ್ ಸಿಡಿಸಿದರೆ, ಧ್ರುವ್ ಜುರೆಲ್ 43 ಎಸೆತಗಳಲ್ಲಿ ಅಜೇಯ 81 ರನ್ ಬಾರಿಸಿ ಇನ್ನೂ ಎರಡು ಓವರ್ ಬಾಕಿ ಇರುವಂತೆಯೇ ತಂಡಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು.

ಕೇವಲ 15 ಎಸೆತಗಳಲ್ಲೇ ಸ್ಪೋಟಕ ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.