ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, ಆರ್‌ಸಿಬಿ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 43 ರನ್‌ಗಳ ಭರ್ಜರಿ ಜಯ ಸಾಧಿಸಿತು. ಟಿಮ್ ಡೇವಿಡ್, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 250 ರನ್ ಗಳಿಸಿದರೆ, ಈ ಬೃಹತ್ ಮೊತ್ತ ಬೆನ್ನತ್ತಿದ ಸಿಎಸ್‌ಕೆ 207 ರನ್‌ಗಳಿಗೆ ಆಲೌಟಾಯಿತು.

ನಾಸಿರ್‌ ಸಜಿಪ, ಕನ್ನಡಪ್ರಭ

ಬೆಂಗಳೂರು: ಹಾಲಿ ಚಾಂಪಿಯನ್‌ ಆರ್‌ಸಿಬಿಯ ‘ಆಪರೇಷನ್‌ ಸಿಎಸ್‌ಕೆ’ ಯಶಸ್ವಿಯಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಎದುರಾಳಿಗಳಿಂದ ಸಾಕಷ್ಟು ದಂಡಿಸಿಕೊಂಡಿದ್ದ ಚೆನ್ನೈ ತಂಡವನ್ನು ಭಾನುವಾರ ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮನಬಂದಂತೆ ಬೆಂಡೆತ್ತಿ, 43 ರನ್‌ಗಳಿಂದ ಮಣಿಸಿದೆ. ಸತತ 2ನೇ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, 5 ಬಾರಿ ಚಾಂಪಿಯನ್‌ ಸಿಎಸ್‌ಕೆ ಹ್ಯಾಟ್ರಿಕ್‌ ಸೋಲಿನೊಂದಿಗೆ ಕೊನೆ ಸ್ಥಾನದಲ್ಲೇ ಉಳಿದಿದೆ.

‘ಬ್ಯಾಟರ್‌ಗಳ ಸ್ವರ್ಗ’ ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಕ್ಷರಶಃ ಆರ್ಭಟಿಸಿತು. 13 ಬೌಂಡರಿ, 19 ಸಿಕ್ಸರ್‌ ದಾಖಲಿಸಿದ ತಂಡ, 3 ವಿಕೆಟ್‌ಗೆ 250 ರನ್‌ ಗಳಿಸಿ ಇನ್ನಿಂಗ್ಸ್‌ ಕೊನೆಗೊಳಿಸಿತು. ಬೆಟ್ಟದಂತಿದ್ದ ಸವಾಲು ಬೆನ್ನತ್ತಿದ ಚೆನ್ನೈ ಅರ್ಧದಲ್ಲೇ ಮುಗ್ಗರಿಸಿತು. 19.4 ಓವರ್‌ಗಳಲ್ಲಿ 207 ರನ್‌ಗೆ ಆಲೌಟಾಯಿತು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಿಕ್ಸರ್‌ ಸುರಿಮಳೆ:

ಆರ್‌ಸಿಬಿಯಲ್ಲಿ ವಿರಾಟ್‌ ಕೊಹ್ಲಿ ಹೊರತಾಗಿ ಇತರೆಲ್ಲರೂ ಅಬ್ಬರಿಸಿದರು. 2 ಜೀವದಾನ ಸಿಕ್ಕರೂ ಕೊಹ್ಲಿ 28 ರನ್‌ಗಳನ್ನಷ್ಟೇ ಗಳಿಸಿದರು. ಪವರ್‌ಪ್ಲೇನಲ್ಲಿ 1 ವಿಕೆಟ್‌ಗೆ 51 ರನ್‌ ಗಳಿಸಿದ್ದ ತಂಡ, 10 ಓವರ್‌ನಲ್ಲಿ 90ರ ಗಡಿ ದಾಟಿತ್ತು. ಫಿಲ್‌ ಸಾಲ್ಟ್‌(46) ಔಟಾದ ಬಳಿಕ ದೇವದತ್‌ ಪಡಿಕ್ಕಲ್‌(29 ಎಸೆತಕ್ಕೆ 50) ಹಾಗೂ ರಜತ್‌ ಪಾಟೀದಾರ್‌ 21 ಎಸೆತಗಳಲ್ಲೇ 58 ರನ್‌ ಜೊತೆಯಾಟವಾಡಿದರು. ಆ ಬಳಿಕವಂತೂ ತಂಡದ ರನ್‌ ವೇಗ ಮತ್ತಷ್ಟು ಹೆಚ್ಚಾಯಿತು. ರಜತ್‌-ಟಿಮ್‌ ಡೇವಿಡ್ ಸಿಎಸ್‌ಕೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ಚಿನ್ನಸ್ವಾಮಿಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಈ ಜೋಡಿ ಕೇವಲ 33 ಎಸೆತಕ್ಕೆ 99 ರನ್‌ ದೋಚಿತು. ರಜತ್‌ 19 ಎಸೆತಕ್ಕೆ ಔಟಾಗದೆ 49 ರನ್ ಗಳಿಸಿದರೆ, 25 ಎಸೆತ ಎದುರಿಸಿದ ಡೇವಿಡ್‌ 3 ಬೌಂಡರಿ, 8 ಸಿಕ್ಸರ್‌ನೊಂದಿಗೆ ಔಟಾಗದೆ 70 ರನ್‌ ಚಚ್ಚಿದರು. ಕೊನೆ 5 ಓವರಲ್ಲಿ ತಂಡ 97 ರನ್‌ ಸಿಡಿಸಿತು.

ಟಾರ್ಗೆಟ್ ವಿಫಲ:

ಸಿಎಸ್‌ಕೆ ಸೋಲುತ್ತೆ ಎಂಬುದು ಮೊದಲ 3 ಓವರ್‌ನಲ್ಲೇ ಬಹುತೇಕ ಖಚಿತವಾಗಿತ್ತು. ಸ್ಯಾಮ್ಸನ್‌(9), ಋತುರಾಜ್(7), ಆಯುಶ್(1) ಕೈಕೊಟ್ಟರು. ಆಗ ಪಂದ್ಯಕ್ಕೆ ಕಿಕ್‌ ಕೊಟ್ಟಿದ್ದು ಸರ್ಫರಾಜ್‌ ಆಟ. ಅವರು 25 ಎಸೆತಕ್ಕೆ 50 ರನ್‌ ಸಿಡಿಸಿದರೂ, ಪವರ್‌ಪ್ಲೇ ಬಳಿಕ ತಂಡ ಮಂಕಾಯಿತು. ಪ್ರಶಾಂತ್‌ ವೀರ್‌(29 ಎಸೆತಕ್ಕೆ 43) ಹಾಗೂ ಜೆಮೀ ಓವರ್ಟನ್‌(16 ಎಸೆತಕ್ಕೆ 37) ಕೆಲಹೊತ್ತು ಅಬ್ಬರಿಸಿ, ಸಿಎಸ್‌ಕೆ ಮಾನ ಕಾಪಾಡಲು ಪ್ರಯತ್ನಿಸಿದರೂ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ಸ್ಕೋರ್: ಆರ್‌ಸಿಬಿ 20 ಓವರ್‌ನಲ್ಲಿ 250/3 (ಡೇವಿಡ್‌ 70*, ದೇವದತ್‌ 50, ರಜತ್‌ 48*, ಸಾಲ್ಟ್‌ 46, ದುಬೆ 1-30), ಸಿಎಸ್‌ಕೆ 19.4 ಓವರ್‌ನಲ್ಲಿ 207/10 (ಸರ್ಫರಾಜ್‌ 50, ಪ್ರಶಾಂತ್‌ 43, ಓವರ್ಟನ್‌ 37, ಭುವನೇಶ್ವರ್‌ 3-41, ಸುಯಶ್‌ 1-21)

ಟರ್ನಿಂಗ್‌ ಪಾಯಿಂಟ್‌

ಡೇವಿಡ್‌ ಹಾಗೂ ರಜತ್‌ ಕೊನೆ 5 ಓವರಲ್ಲಿ 97 ರನ್‌ ಸಿಡಿಸಿದ್ದು ಆರ್‌ಸಿಬಿ ಬೃಹತ್‌ ಮೊತ್ತ ದಾಖಲಿಸಲು ಕಾರಣವಾಯಿತು. ಅದರಲ್ಲೂ 19ನೇ ಓವರಲ್ಲಿ 30 ರನ್‌ ದೋಚಿದರು. ಟಾರ್ಗೆಟ್‌ 220ರ ಆಸುಪಾಸಿನಲ್ಲಿ ಇದ್ದಿದ್ದರೆ ಸಿಎಸ್‌ಕೆ ಯಶಸ್ವಿಯಾಗಿ ಬೆನ್ನತ್ತುವ ಸಾಧ್ಯತೆ ಇತ್ತು.