ಆರ್‌ಸಿಬಿ ನಾಲ್ಕನೇ ಬಾರಿ ಐಪಿಎಲ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಆರ್‌ಸಿಬಿ ಲೆಗ್‌ಸ್ಪಿನ್ನರ್ ಸುಯಶ್ ಶರ್ಮ ಐಪಿಎಲ್ 2025ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮೂರು ಮಹತ್ವದ ವಿಕೆಟ್‌ಗಳನ್ನು ಪಡೆದು ಪಂಜಾಬ್ ಕಿಂಗ್ಸ್‌ಗೆ ಪೆಟ್ಟು ನೀಡಿದರು.

ಸುಯಶ್ ಶರ್ಮ ಯಾರು?: ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಆರ್‌ಸಿಬಿ ಐಪಿಎಲ್ 2025ರ ಫೈನಲ್‌ಗೆ ಪ್ರವೇಶಿಸಿದೆ. ಮುಲ್ಲನ್‌ಪುರದಲ್ಲಿ ಗುರುವಾರ ನಡೆದ ಐಪಿಎಲ್ 2025ರ ಕ್ವಾಲಿಫೈಯರ್ 1 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್‌ಸಿಬಿಯ ಯುವ ಲೆಗ್‌ಸ್ಪಿನ್ನರ್ ಸುಯಶ್ ಶರ್ಮ ತಮ್ಮ ಅದ್ಭುತ ಬೌಲಿಂಗ್‌ನಿಂದ ಗಮನ ಸೆಳೆದರು. ಅವರ ಬೌಲಿಂಗ್ ದಾಳಿಗೆ ಪಂಜಾಬ್ ಕಿಂಗ್ಸ್ ತಂಡ ಕೇವಲ 101 ರನ್‌ಗಳಿಗೆ ಆಲೌಟ್ ಆಯಿತು.

ಐಪಿಎಲ್ 2025 ಕ್ವಾಲಿಫೈಯರ್ 1 ಆರ್‌ಸಿಬಿ vs ಪಿಬಿಕೆಎಸ್: ಮೂರು ಮಹತ್ವದ ವಿಕೆಟ್ ಪಡೆದ ಸುಯಶ್ ಶರ್ಮ

ಈ ಪಂದ್ಯದಲ್ಲಿ ಸುಯಶ್ ಶರ್ಮ ಮೂರು ಮಹತ್ವದ ವಿಕೆಟ್‌ಗಳನ್ನು ಪಡೆದು ಎದುರಾಳಿ ತಂಡದ ಮಧ್ಯಮ ಕ್ರಮಾಂಕವನ್ನು ಧ್ವಂಸ ಮಾಡಿದರು. 11ನೇ ಓವರ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಅವರನ್ನು 26 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಔಟ್ ಮಾಡುವುದು ನಿರ್ಣಾಯಕವೆನಿಸಿತು. ಸ್ಟೋಯ್ನಿಸ್ ಲೆಗ್‌ಸೈಡ್‌ಗೆ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದಾಗ, ಸುಯಶ್ ಎಸೆದ ಚೆಂಡು ಲೆಗ್‌ಸ್ಟಂಪ್ ಅನ್ನು ಉರುಳಿಸಿತು. ಇದು ಸುಯಶ್‌ಗೆ ಈ ಇನ್ನಿಂಗ್ಸ್‌ನಲ್ಲಿ ಮೂರನೇ ವಿಕೆಟ್.

ಇದಕ್ಕೂ ಮೊದಲು ಸುಯಶ್ ಶರ್ಮ ಉತ್ತಮ ಫಾರ್ಮ್‌ನಲ್ಲಿದ್ದ ಶಶಾಂಕ್ ಸಿಂಗ್ ಅವರನ್ನು 3 ರನ್‌ಗಳಿಗೆ ಔಟ್ ಮಾಡಿದರು. ಈ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಇಂಪ್ಯಾಕ್ಟ್ ಸಬ್ ಆಗಿ ಬಂದ ಮುಶೀರ್ ಖಾನ್ ಅವರನ್ನು ಖಾತೆ ತೆರೆಯದಂತೆಯೇ ಪೆವಿಲಿಯನ್‌ಗೆ ಕಳುಹಿಸಿದರು. ಸುಯಶ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದ ಆರ್‌ಸಿಬಿ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. 

ಪಂದ್ಯದ ನಂತರ ಸುಯಶ್ ಮಾತನಾಡಿ, "ಇದನ್ನು ಸಾಮಾನ್ಯ ಪಂದ್ಯದಂತೆ ಭಾವಿಸಿದೆವು. ನನ್ನ ಬೌಲಿಂಗ್ ಅನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳಲು ಶ್ರಮಿಸಿದೆ. ಇಂದು ನನ್ನ ಗೂಗ್ಲಿಗಳು ಯಾರಿಗೂ ಅರ್ಥವಾಗಲಿಲ್ಲ. ಕೋಚ್ ಹೇಳಿದ ಯೋಜನೆಯನ್ನು ಅನುಷ್ಠಾನಗೊಳಿಸುವುದೇ ನನ್ನ ಗುರಿಯಾಗಿತ್ತು.. ವಿಕೆಟ್‌ಗಳನ್ನು ಪಡೆದೆ" ಎಂದು ಹೇಳಿದರು. ಈ ಪಂದ್ಯದಲ್ಲಿ ಸುಯಶ್ ಶರ್ಮ 3 ಓವರ್‌ಗಳಲ್ಲಿ ಕೇವಲ 17 ರನ್ ನೀಡಿ 3 ವಿಕೆಟ್ ಪಡೆದರು.

ಸುಯಶ್ ಶರ್ಮ ಯಾರು?

ಸುಯಶ್ ಶರ್ಮ 2003ರ ಮೇ 15 ರಂದು ದೆಹಲಿಯ ಭಜನ್‌ಪುರದಲ್ಲಿ ಜನಿಸಿದರು. ಅವರ ಅದ್ಭುತ ಕ್ರಿಕೆಟ್ ಪ್ರದರ್ಶನದಿಂದ ಪ್ರಥಮ ದರ್ಜೆ ಕ್ರಿಕೆಟ್, ಲಿಸ್ಟ್ ಎ ಪಂದ್ಯಗಳನ್ನು ಆಡದೆಯೇ ಐಪಿಎಲ್‌ನಲ್ಲಿ ಸ್ಥಾನ ಪಡೆದರು. 2023ರಲ್ಲಿ ಕೋಲ್ಕತ್ತಾ ನೈಟ್‌ರೈಡರ್ಸ್ ಪರ 19ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಸುಯಶ್ ಶರ್ಮ, ಆರ್‌ಸಿಬಿ ವಿರುದ್ಧ 3/30 ಬೌಲಿಂಗ್ ಪ್ರದರ್ಶನ ನೀಡಿದ್ದರು.

2025ರ ಐಪಿಎಲ್ ಮೆಗಾ ಹರಾಜಿನಲ್ಲಿ 2.60 ಕೋಟಿ ರೂ.ಗಳಿಗೆ ಆರ್‌ಸಿಬಿ ಸುಯಶ್ ಅವರನ್ನು ಖರೀದಿಸಿತು. ಇದು ಅವರಿಗೆ ಅತಿ ಹೆಚ್ಚು ಬೆಲೆ ಪಡೆದ ಸ್ಪಿನ್ನರ್ ಎಂಬ ಹೆಗ್ಗಳಿಕೆ ತಂದುಕೊಟ್ಟಿತು. ಇಲ್ಲಿಯವರೆಗೆ 26 ಐಪಿಎಲ್ ಪಂದ್ಯಗಳಲ್ಲಿ 18 ವಿಕೆಟ್ ಪಡೆದಿರುವ ಸುಯಶ್, ಭವಿಷ್ಯದಲ್ಲಿ ಭಾರತ ತಂಡದ ಪ್ರಮುಖ ಬೌಲರ್ ಆಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಸುಯಶ್ ಶರ್ಮ ಅವರ ಆದಾಯ ಎಷ್ಟು?

2025ರ ವೇಳೆಗೆ ಸುಯಶ್ ಶರ್ಮ ಅವರ ನಿವ್ವಳ ಆಸ್ತಿ ಸುಮಾರು 7.7 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಈ ಆದಾಯವು ಹೆಚ್ಚಾಗಿ ಐಪಿಎಲ್ ಒಪ್ಪಂದಗಳು, ದೇಶೀಯ ಕ್ರಿಕೆಟ್ ಮತ್ತು ಬ್ರ್ಯಾಂಡ್ ಪ್ರಚಾರಗಳಿಂದ ಬರುತ್ತದೆ.

ಐಪಿಎಲ್ 2025 ಕ್ವಾಲಿಫೈಯರ್ 1 ಪಂಜಾಬ್ vs ಬೆಂಗಳೂರು ಪಂದ್ಯದ ಮುಖ್ಯಾಂಶಗಳು

ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರಂಭದಲ್ಲಿ ಯಶ್ ದಯಾಳ್ ಮತ್ತು ಭುವನೇಶ್ವರ್ ಕುಮಾರ್ ವಿಕೆಟ್ ಪಡೆದು ಪಂಜಾಬ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ನಂತರ ಸುಯಶ್ ಶರ್ಮ ತಮ್ಮ ಸ್ಪಿನ್ ಮೋಡಿಯಿಂದ ಉಳಿದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದರು. ಜೋಶ್ ಹೇಜಲ್‌ವುಡ್ 3.1 ಓವರ್‌ಗಳಲ್ಲಿ 21 ರನ್ ನೀಡಿ ಮೂರು ವಿಕೆಟ್ ಪಡೆದರು. ಪಂಜಾಬ್ ತಂಡ 14.1 ಓವರ್‌ಗಳಲ್ಲಿ 101 ರನ್‌ಗಳಿಗೆ ಆಲೌಟ್ ಆಯಿತು.

ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಆರಂಭಿಕ ಜೋಡಿ ಕೇವಲ 3 ಓವರ್‌ಗಳಲ್ಲಿ 30 ರನ್ ಗಳಿಸಿ, ಫೈನಲ್ ತಲುಪುವತ್ತ ಬಲವಾದ ಆರಂಭವನ್ನು ಒದಗಿಸಿದರು. ಕಡಿಮೆ ಗುರಿಯೊಂದಿಗೆ ಎರಡನೇ ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ಕೇವಲ 10 ಓವರ್‌ಗಳಲ್ಲಿ 106/2 ರನ್ ಗಳಿಸಿ ಗೆಲುವು ಸಾಧಿಸಿತು. 8 ವಿಕೆಟ್‌ಗಳ ಅಂತರದಿಂದ ಪಂಜಾಬ್ ವಿರುದ್ಧ ಗೆಲುವು ಸಾಧಿಸಿತು. ಫಿಲಿಪ್ ಸಾಲ್ಟ್ 56 ರನ್ ಗಳಿಸಿ ಆರ್‌ಸಿಬಿಗೆ ಗೆಲುವು ತಂದುಕೊಟ್ಟರು.