'ಕೆಟ್ಟ ಟೈಮ್‌ನಲ್ಲೂ ವಿನ್ ಆಗ್ತಾರಲ್ಲ, ಅವರೇ ಚಾಂಪಿಯನ್ಸ್..' ಆರ್‌ಸಿಬಿಯಲ್ಲಿ ಆರಂಭವಾಯ್ತು ಸಾನಿಯಾ ಸ್ಫೂರ್ತಿ!
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೆಂಟರ್ ಸಾನಿಯಾ ಮಿರ್ಜಾ ಅವರು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಆರಂಭಕ್ಕೂ ಮುನ್ನ ಆಟಗಾರ್ತಿಯರೊಂದಿಗೆ ಸಂವಾದ ನಡೆಸಿದ್ದಲ್ಲದೆ, ತಂಡದ್ಲಿ ತಮ್ಮ ಪಾತ್ರವನ್ನು ವಿವರಿಸಿದರು. ಇದೇ ವೇಳೆ ಕ್ರಿಕೆಟ್ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದರು.
ಬೆಂಗಳೂರು (ಮಾ.4): ಮೊಟ್ಟಮೊದಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಶನಿವಾರ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿವೆ. ಅದರೊಂದಿಗೆ ತಮ್ಮದೇ ಆದ ಸ್ವಂತ ಟಿ20 ಲೀಗ್‌ಗೆ ಬೇಡಿಕೆ ಇಟ್ಟಿದ್ದ ಮಹಿಳಾ ಕ್ರಿಕೆಟಿಗರ ಕನಸು ಕೂಡ ನನಸಾಗಿದೆ. ಈ ವರ್ಷದ ಆರಂಭದಲ್ಲಿ ಬಿಸಿಸಿಐ ವುಮೆನ್ಸ್ ಪ್ರೀಮಿಯರ್ ಲೀಗ್ ಆರಂಭಿಸುವುದಾಗಿ ಘೋಷಣೆ ಮಾಡಿದ ಬಳಿಕ ತಂಡಗಳ ಹರಾಜು ನಡೆದ ಬಳಿಕ ಆಟಗಾರ್ತಿಯರ ಹರಾಜು ಪ್ರಕ್ರಿಯೆಯನ್ನೂ ನಡೆಸಲಾಗಿತ್ತು. ಇಂದಿನಿಂದ ಲೀಗ್ ಅಧಿಕೃತವಾಗಿ ಆರಂಭವಾಗಿದೆ. ಐಪಿಎಲ್‌ನಲ್ಲಿ ಮೂರು ತಂಡಗಳ ಮಾಲೀಕರಾಗಿರುವವರು ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲೂ ಮೂರೂ ತಂಡಗಳ ಮಾಲೀಕರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ಮುಂಬೈ ಇಂಡಿಯನ್ಸ್ (ಎಂಐ) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಐಪಿಎಲ್‌ನ ಎಎಲ್ಲಾ ಆವೃತ್ತಿಗಳಲ್ಲೂ ಆಡಿರುವ ತಂಡಗಳಾಗಿದ್ದು, ಡಬ್ಲ್ಯುಪಿಎಲ್‌ನಲ್ಲೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದೆ.
ಡಬ್ಲ್ಯುಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಅಚ್ಚರಿನ ನಿರ್ಧಾರ ಮಾಡಿತ್ತು. ಕ್ರಿಕೆಟ್‌ನ ಯಾವ ಸಂಪರ್ಕವೂ ಇಲ್ಲದ, ಟೆನಿಸ್‌ನಲ್ಲಿ ದೊಡ್ಡ ಹೆಸರು ಮಾಡಿದ್ದ ಸಾನಿಯಾ ಮಿರ್ಜಾರನ್ನು ತಂಡಕ್ಕೆ ಮೆಂಟರ್ ಆಗಿ ಆಯ್ಕೆ ಮಾಡಿತ್ತು. ಗ್ರ್ಯಾಂಡ್‌ಸ್ಲಾಂ ಟೂರ್ನಿಗಳಲ್ಲಿ ಹಾಗೂ ಡಬ್ಲ್ಯುಟಿಎ ಟೂರ್‌ಗಳಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಸಾನಿಯಾ ಮಿರ್ಜಾ ದಂತಕಥೆಯಾಗಿದ್ದರೂ, ಕ್ರಿಕೆಟ್‌ನ ಯಾವ ಮಾದರಿಯೊಂದಿಗೂ ಅವರ ಸಂಪರ್ಕವಿಲ್ಲ. ಆದರೆ, ಡಬ್ಲ್ಯುಪಿಎಲ್ ಆರಂಭಕ್ಕೂ ಮುನ್ನ ತಂಡದ ಆಟಗಾರ್ತಿಯರ ಜೊತೆ ಸಾನಿಯಾ ಮಿರ್ಜಾ ನಡೆಸಿರುವ ಸಂವಾದದ ವಿಡಿಯೋವನ್ನು ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಪ್ರಕಟಿಸಿದೆ. ಕ್ರಿಕೆಟ್ ವಿಚಾರದಲ್ಲಿ ನಿಮಗೆ ನನ್ನಿಂದ ಯಾವುದೇ ಸಹಾಯ ಸಿಗೋದಿಲ್ಲ. ಯಾಕೆಂದರೆ, ಕ್ರಿಕೆಟ್‌ನ ಬಗ್ಗೆ ನನಗೇನೂ ಜ್ಞಾನವಿಲ್ಲ ಎಂದು ಮೊದಲಗೆ ಸ್ಪಷ್ಟಪಡಿಸಿದರು.
'ಮೊಟ್ಟಮೊದಲನೆಯದಾಗಿ ಆರ್‌ಸಿಬಿ ತಂಡದ ಭಾಗವಾಗಿರುವುದು ನನಗೆ ಖುಷಿ ತಂದಿದೆ. ನನಗೆ ಕ್ರಿಕೆಟ್ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಹಾಗಿದ್ದರೆ ಇಲ್ಲಿ ನಾನೇನು ಮಾಡಬಲ್ಲೆ? ಆಟಗಾರ್ತಿಯರ ಜೊತೆ ಯಾವ ರೀತಿ ಸಂವಾದ ನಡೆಸಬಲ್ಲೆ? ಎನ್ನುವ ಪ್ರಶ್ನೆಗಳಿದ್ದವು. ನಾನು ಇತ್ತೀಚೆಗೆ ಅಂದರೆ ಕಲೆದ ವಾರವಷ್ಟೇ ನಿವೃತ್ತಿಯಾಗಿದ್ದೇನೆ. ನನ್ನ ಜೀವನದ ಮುಂದಿನ ಹೆಜ್ಜೆನೇನು ಅನ್ನೋ ತೀರ್ಮಾನದಲ್ಲಿದ್ದೇನೆ? ನನ್ನ ಜೀವನದ ಮುಂದಿನ ಹಂತವೆಂದರೆ ಭಾರತದಲ್ಲಿ ಅಥವಾ ಯಾವುದೇ ಕ್ರೀಡೆಯಲ್ಲಿ ಮಹಿಳಾ ಕ್ರೀಡಾಪಟುಗಳಿಗೆ ಸಹಾಯ ಮಾಡುವುದು. ಕಳೆದ 20 ವರ್ಷಗಳಲ್ಲಿ ನಾನು ಅನುಭವಿಸಿದ ವಿಷಯಗಳ ಮಾನಸಿಕ ವಿಚಾರಗಳನ್ನು ಅವರಿಗೆ ತಿಳಿಸಲಿದ್ದೇನೆ' ಎಂದು ಟೆನಿಸ್ ತಾರೆ ತಿಳಿಸಿದ್ದಾರೆ.
ನಿಮ್ಮಲ್ಲಿ ಯಾರಿಗಾದರೂ ನನ್ನೊಂದಿಗೆ ಮಾತನಾಡಬೇಕು ಎಂದು ಅನಿಸಿದರೆ, ನಾನು ಲಭ್ಯಳಿದ್ದೇನೆ. ನನ್ನ ಫೋನ್ ನಂಬರ್ ಕುಡ ನೀಡುತ್ತೇನೆ. ನಾನು ಇಲ್ಲಿ ಇಲ್ಲದೇ ಇದ್ದ ಸಮಯದಲ್ಲಿ ಫೋನ್ ಮೂಲಕ ಲಭ್ಯವಿರುತ್ತೇನೆ. ನಿಮಗೆ ಸಮಸ್ಯೆ ಅನಿಸಿದ ವಿಷಯಗಳ ಬಗ್ಗೆ ಎಲ್ಲಾ ಮಾತನಾಡಿ, ನಾನು ಖಂಡಿತವಾಗಿ ಈ ಬಗ್ಗೆ ವಿವರ ಹಂಚಿಕೊಳ್ಳುತ್ತೇನೆ ಎಂದಿದ್ದಾರೆ.
Sania Mirza: ಆರ್‌ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್!
ಕಪ್ಪಗಾಗ್ತೀಯ ಅಂದಿದ್ದರು: ಮಹಿಳಾ ಅಥ್ಲೀಟ್‌ಗೆ ಪ್ರತಿ ಹಂತದಲ್ಲೂ ಕಷ್ಟಗಳಿರುತ್ತವೆ. ನಾನು ಆಡುವಾಗ ಟೆನಿಸ್ ಕೋರ್ಟ್‌ಗಳೇ ಇದ್ದಿರಲಿಲ್ಲ. ಸಗಣಿ ಸಾರಿಸಿದ ಕೋರ್ಟ್‌ನಲ್ಲಿ ಆಡುತ್ತಿದ್ದೆ. ಕೋಚ್‌ಗಳು ಇದ್ದಿರಲಿಲ್ಲ. ಇದ್ದರೂ ಅವರಿಗೆ ಟೆನಿಸ್‌ನ ಬಗ್ಗೆ ತುಂಬಾ ಜ್ಞಾನ ಇದ್ದಿರಲಿಲ್ಲ. ಆದರೆ, ಈಗ ಹಾಗಲ್ಲ. ನಿಮಗೆ ಇಂಟರ್ನೆಟ್, ಯೂಟ್ಯೂಬ್ ಎಲ್ಲದರಲ್ಲೂ ಮಾಹಿತಿ ಸಿಗುತ್ತದೆ. ಫಿಟ್‌ನೆಸ್ ಯಾವ ರೀತಿ ಇರಬೇಕು ಎನ್ನಲು ಗೂಗಲ್ ಮಾಡಿದರೆ ಸಾಕಾಗುತ್ತದೆ. ಆಗ ಇಂಥ ವ್ಯವಸ್ಥೆಗಳು ಇದ್ದಿರಲಿಲ್ಲ. 'ಹುಡುಗಿ ಹೇಗೆ ಆಡ್ತಾಳೆ?', ಹುಡುಗರ ಜೊತೆಯಲ್ಲಿ ಆಡ್ತಾಳಾ?, ಬಿಸಿಲಲ್ಲಿ ಆಡಿದರೆ ಕಪ್ಪಗಾಗೋದಿಲ್ವಾ..? ಹೀಗೆ ಒಂದಲ್ಲಾ ಒಂದು ಪ್ರಶ್ನೆಗಳು ಎದುರಾಗುತ್ತಿದ್ದವು ಎಂದು ಸಾನಿಯಾ ಹೇಳಿದ್ದಾರೆ.
'ಫುಟ್‌ಬಾಲ್ ಟೀಮ್‌ಗೆ ಚೆಸ್ ಪ್ಲೇಯರ್ ಕೋಚ್ ಆದಂಗಾಯ್ತು..' ಆರ್‌ಸಿಬಿ 'ಮೆಂಟರ್' ಆಯ್ಕೆಗೆ ತಲೆಕೆರೆದುಕೊಂಡ ಫ್ಯಾನ್ಸ್!
ನಾವು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಬೇಕು. ಬೇರೆಯವರಿಗಿಂತ ಭಿನ್ನವಾಗಿ ಏನನ್ನಾದರೂ ಮಾಡಬೇಕು. ಕೆಲವೊಮ್ಮೆ ನಾನು ಸೋಶಿಯಲ್ ಮೀಡಿಯಾದಿಂದ ಸಂಪುರ್ಣವಾಗಿ ಹೊರಗೆ ಬರುತ್ತೇನೆ. ನೀವು ಏನೇ ಒಳ್ಳೆಯದು ಮಾಡಿದರೂ ಅಲ್ಲೊಂದು ಕೊಂಕು ಇದ್ದೇ ಇರುತ್ತದೆ. ಆದರೆ, ಎಲ್ಲವನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ. ಎಲ್ಲಾ ಟೈಮ್‌ನಲ್ಲೂ ಉತ್ತಮವಾಗಿ ಆಡುವವರನ್ನು ಎಂದಿಗೂ ಚಾಂಪಿಯನ್‌ಗಳು ಅನ್ನೋದಿಲ್ಲ. ತಾವು ಕೆಟ್ಟದಾಗಿ ಆಡುತ್ತಿದ್ದ ಸಮಯದಲ್ಲೂ ಗೆಲ್ತಾರಲ್ಲ ಅವರನ್ನು ಚಾಂಪಿಯನ್‌ಗಳು ಎನ್ನುತ್ತಾರೆ. ನೀವು ಕ್ರಿಕೆಟ್‌ಅನ್ನು ಆಡಲು ಆರಂಭ ಮಾಡಿದ್ದೇಕೆ ಎನ್ನುವುದನ್ನು ನೀವು ಎಂದಿಗೂ ತಲೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಸ್ಪೂರ್ತಿಯ ಮಾತುಗಳನ್ನಾಡಿದ್ದಾರೆ.