ಆರ್‌ಸಿಬಿ ಖರೀದಿ ಬಳಿಕ ಅನನ್ಯಾ ಬಿರ್ಲಾ ಲಕ್ ಡಬಲ್ ಆಗಿದೆ. ಇದೀಗ ಬರೋಬ್ಬರಿ 3000 ಕೋಟಿ ರೂಪಾಯಿ ಐಪಿಒ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿದ್ದಾರೆ. SEBI ಅರ್ಜಿ ಸಲ್ಲಿಸಿದ್ದು ದಾಖಲೆಗಳನ್ನು ನೀಡಿದ್ದಾರೆ.
ಮುಂಬೈ (ಆ.15) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲಕಿ ಅನನ್ಯಾ ಬಿರ್ಲಾ ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಬರೋಬ್ಬರಿ 3000 ಕೋಟಿ ರೂಪಾಯಿ ಒಪಿಒ ಮೂಲಕ ಷೇರು ಮಾರುಕಟ್ಟೆ ಎಂಟ್ರಿಗೆ ಸಜ್ಜಾಗಿದ್ದಾರೆ. ಬಿರ್ಲಾ ಗ್ರೂಪ್ ಮುಖ್ಯಸ್ಥ ಕುಮಾರ್ ಮಂಗಲಂ ಬಿರ್ಲಾ ಪುತ್ರಿ ಅನನ್ಯಾ ಬಿರ್ಲಾ ಯ ಮೈಕ್ರೋಫಿನ್ ಫಿನಾನ್ಸ್ ಸಂಸ್ಥೆ ಇದೀಗ ಷೇರು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗುತ್ತಿದೆ. ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (SEBI) ಕರಡು ಅರ್ಜಿ ಸಲ್ಲಿಸಿದೆ. ಇದೇ ವೇಳೆ ಪೂರಕ ದಾಖಲೆಗನ್ನು ಒದಗಿಸಿದೆ.
ಬಂಡವಾಳ ಸಂಗ್ರಹಕ್ಕೆ ಪ್ಲಾನ್
ಬಂಡವಾಳ ಸಂಗ್ರಹಿಸುವ ಉದ್ದೇಶದಿಂದ ಇದೀಗ ಮೈಕ್ರೋಫಿನ್ ಫಿನಾನ್ಸ್ ಸಂಸ್ಥೆ ಷೇರುಮಾರುಕಟ್ಟೆಗೆ ಎಂಟ್ರಿಕೊಡುತ್ತಿದೆ. ಸಂಪೂುರ್ಣ ಹೊಸ ಷೇರುಗಳ ವಿತರಣೆ ಹಾಗೂ ಹಾಲಿ ಹೂಡಿಕೆದಾರರ ಷೇರು ಮಾರಾಟ ಆಫರ್ ಒಳಗೊಂಡ 3000 ಕೋಟಿ ರೂಪಾಯಿ ಮೌಲ್ಯದ ಐಪಿಒಗೆ ಕರಡು ದಾಖಲೆ ಸಲ್ಲಿಸಲಾಗಿದೆ.
ಅನನ್ಯಾ ಬಿರ್ಲಾ ನೇತೃತ್ವದ ಸ್ವತಂತ್ರ ಮೈಕ್ರೋಫಿನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಗ್ರಾಮೀಣ , ಪಟ್ಟಣ ಹಾಗೂ ಸಣ್ಣ ನಗರಗಳ ಮಹಿಳಾ ಉದ್ಯಮಿಗಳಿಗೆ ಆರ್ಥಿಕ ಬೆಂಬಲ ನೀಡಲು ಸ್ಥಾಪಿಸಲಾಗಿದೆ. ಇದೀಗ ಕಂಪನಿ 2000 ಕೋಟಿ ರೂಪಾಯಿ ಮೌಲ್ಯದ ಹೊಸ ಈಕ್ವಿಟಿ ಷೇರುಗಳನ್ನು ಸಾರ್ವಜನಿಕರಿಗೆ ವಿತರಿಸಲಿದೆ. ಹೂಡಿಕೆದಾರರು 1000 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನುಒಎಫ್ಎಸ್ ಹಂತದ ಮೂಲಕ ಮಾರಾಟ ಮಾಡಲಾಗುತ್ತದೆ.
ಬಂಡವಾಳ ಸಂಗ್ರಹ ಉದ್ದೇಶವೇನು
ಸ್ವತಂತ್ರ ಮೈಕ್ರೋಫಿನ್ ಸಂಸ್ಥೆಯನ್ನು ವಿಸ್ತರಿಸಲು ಅನನ್ಯಾ ಬಿರ್ಲಾ ಮುಂದಾಗಿದ್ದಾರೆ ಹೀಗಾಗಿ ಷೇರುಮಾರುಕಟ್ಟೆ ಮೂಲಕ ಸಂಗ್ರವಾಗುವ ಬಂಡವಾಳವನ್ನು ಸಂಸ್ಥೆಯ ಆರ್ಥಿಕ ಮೂಲಸೌಕರ್ಯ, ಹಾಗೂ ಉದ್ಯಮ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ. ಸಾಲ ಮರುಪಾವತಿ ಸೇರಿದಂತೆ ವ್ಯವಹಾರ ವಿಸ್ತರಣೆ ವೆಚ್ಚಗಳಿಗೆ ಬಂಡವಾಳ ಮೀಸಲಿಡಲಾಗುತ್ತದೆ.
ಭಾರತದಲ್ಲಿ ಅನನ್ಯಾ ಬಿರ್ಲಾ ಅವರ ಸ್ವತಂತ್ರ ಮೈಕ್ರೋಫಿನ್ ಹಣಕಾಸು ಸಂಸ್ಥೆ ಅತೀ ದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಉದ್ಯಮಿ ಸಚಿನ್ ಬನ್ಸಾಲ್ ಮಾಲೀಕತ್ವದ ಚೈತನ್ಯ ಇಂಡಿಯಾ ಫಿನ್‌ಕ್ರೆಡಿಟ್ ಸಂಸ್ಥೆಯನ್ನು 1479 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಈ ಮೂಲಕ ಸ್ವತಂತ್ರ ಮೈಕ್ರೋಫಿನ್ ಭಾರತದ 2ನೇ ಅತೀ ದೊಡ್ಡ ಸೂಕ್ಷ್ಮ ಹಣಸಾಕು ಸಂಸ್ಥೆಯಾಗಿ ಬೆಳೆದು ನಿಂತಿದೆ. 20 ರಾಜ್ಯಗಳಲ್ಲಿ ಸಾವಿರಾರು ಶಾಖೆಗಳನ್ನು ಹೊಂದಿರುವ ಸ್ವತಂತ್ರ ಮೈಕ್ರೋಫಿನ್ ಲಕ್ಷಾಂತರ ಮಹಿಳಾ ಸ್ವಸಹಾಯ ಗುಂಪುಗಳಿಗೆ , ಸಣ್ಣ ಉದ್ಯಮಿಗಳಿಗೆ ಕಿರು ಸಾಲ ನೀಡುತ್ತಿದೆ.


