ಐಪಿಎಲ್‌ನಲ್ಲಿ ಟ್ರೋಫಿ ಗೆಲ್ಲುವಂತೆ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಆರ್‌ಸಿಬಿ ಅಭಿಮಾನಿಯೊಬ್ಬರು ತಂಡದ ಜೆರ್ಸಿಗೆ ಪುಣ್ಯಸ್ನಾನ ಮಾಡಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಉತ್ಸಾಹವನ್ನು ಎತ್ತಿ ತೋರಿಸುತ್ತಿದೆ.
ಭಾರತದಲ್ಲಿ ಅತ್ಯಂತ ಪ್ರಸಿದ್ಧವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರಾಯಲ್ ಚಾಲೆಂಜರ್ಸ್ ತಂಡ ಅಭಿಮಾನಿಯೊಬ್ಬರು ನಮ್ಮ ಆರ್‌ಸಿಬಿ ತಂಡ ಈ ಬಾರಿ ಗೆಲ್ಲಲೇಬೇಕು ಎಂದು 144 ವರ್ಷಗಳಿಗೊಮ್ಮೆ ನಡೆಯುವ ಪ್ರಯಾಗರಾಜ್‌ನ ಮಾಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಆರ್‌ಸಿಬಿ ಜೆರ್ಸಿಗೆ ಪುಣ್ಯಸ್ನಾನ ಮಾಡಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ನಮ್ಮ ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೇನೂ ಕಡಿಮೆಯಿಲ್ಲ. ಅದರಲ್ಲಿಯೂ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪ್ರಮುಖ ತಂಡಗಳಲ್ಲಿ ಒಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅತ್ಯಂತ ಜನಪ್ರಿಯ ತಂಡಗಳಲ್ಲಿ ಒಂದಾಗಿದೆ. ಆದರೆ, ಈವರೆಗೆ ಆರ್‌ಸಿಬಿ ಪುರುಷರ ತಂಡ ಮಾತ್ರ ಇದುವರೆಗೂ ಒಂದೇ ಒಂದು ಐಪಿಎಲ್ ಪ್ರಶಸ್ತಿ ಗೆದ್ದಿಲ್ಲ. ಇಷ್ಟಿದ್ದರೂ ಆರ್‌ಸಿಬಿ ಅಭಿಮಾನಿಗಳಿಗೆ ತಂಡದ ಮೇಲಿನ ಪ್ರೀತಿ ಮಾತ್ರ ಒಂದು ಇಂಚೂ ಕಡಿಮೆಯಾಗಿಲ್ಲ. ಇದಕ್ಕೆ ಒಂದು ಉದಾಹರಣೆ ಇಲ್ಲಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ 2025ರಲ್ಲಿ ಆರ್‌ಸಿಬಿ ಫ್ಯಾನ್ ಒಬ್ಬರು ತಂಡದ ಜೆರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಟ್ರೋಫಿ ಗೆಲ್ಲುವಂತೆ ಪ್ರಾರ್ಥಿಸಿದ್ದಾರೆ.
ಈಗ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಭಿಮಾನಿ ತಮ್ಮ ತಂಡದ ಮೇಲಿನ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಆರ್‌ಸಿಬಿಯ ಕೆಂಪು ಮತ್ತು ಕಪ್ಪು ಜೆರ್ಸಿಯನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಆಶೀರ್ವಾದ ಪಡೆಯುತ್ತಿದ್ದಾರೆ. ಜೆರ್ಸಿಗೆ ಮಹಾಕುಂಭ ಸ್ನಾನ ಮಾಡಿಸುವ ಮೂಲಕ ಈ ಬಾರಿ ತಮ್ಮ ತಂಡ ಐಪಿಎಲ್ ಟ್ರೋಫಿ ಗೆಲ್ಲುವುದು ಖಚಿತ ಎಂಬ ಸಂದೇಶವನ್ನು ಎಲ್ಲಾ ಅಭಿಮಾನಿಗಳಿಗೆ ರವಾನಿಸಿದ್ದಾರೆ. ತಂಡದ ಮೇಲಿನ ಅವರ ಉತ್ಸಾಹವನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ವಿಡಿಯೋಗೆ ಲೈಕ್ಸ್ ಮತ್ತು ಕಾಮೆಂಟ್ಸ್‌ಗಳ ಸುರಿಮಳೆಯೇ ಆಗುತ್ತಿದೆ.
ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವುದೇ ಟ್ರೋಫಿ ಗೆದ್ದಿಲ್ಲದಿದ್ದರೂ, ಅಭಿಮಾನಿಗಳ ಸಂಖ್ಯೆಯಲ್ಲಿ ಮಾತ್ರ ಯಾರಿಗೂ ಕಮ್ಮಿ ಇಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಆರ್‌ಸಿಬಿಗೆ 15.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈ ಅಂಕಿಅಂಶದಿಂದ ವಿರಾಟ್ ಕೊಹ್ಲಿ ನೇತೃತ್ವದ ಈ ತಂಡ ಐಪಿಎಲ್‌ನಲ್ಲಿ ಎಷ್ಟು ಮಹತ್ವದ್ದಾಗಿದೆ ಎಂದು ತಿಳಿಯಬಹುದು. ಚೆನ್ನೈ ಸೂಪರ್ ಕಿಂಗ್ಸ್‌ಗೆ 16.6 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಮುಂಬೈ ಇಂಡಿಯನ್ಸ್‌ಗೆ 14.9 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಆರ್‌ಸಿಬಿ ತಂಡ ಐಪಿಎಲ್‌ನಲ್ಲಿ ಯಾವುದೇ ನಗರದಲ್ಲಿ ಆಡಲಿ, ಅಲ್ಲಿನ ಕ್ರೀಡಾಂಗಣ ಖಾಲಿ ಇರುವುದಿಲ್ಲ.
ಇದನ್ನೂ ಓದಿ: RCB ನಾಯಕರಾಗಲು ತುದಿಗಾಲಿನಲ್ಲಿದ್ದಾರೆ ಈ ನಾಲ್ವರು ಪ್ಲೇಯರ್ಸ್!
ಪ್ರತಿ ಐಪಿಎಲ್ ಸೀಸನ್ ನಡೆದಾಗಲೂ ಆರ್‌ಸಿಬಿ ಅಭಿಮಾನಿಗಳನ್ನು ನೋಡಿ ಮಂತ್ರಮುಗ್ದಾರಾಗದಿರುವ ಆಟಗಾರರೇ ಇಲ್ಲ. ಒಮ್ಮೆ ಆರ್‌ಸಿಬಿ ತಂಡದಲ್ಲಿ ಆಟವಾಡಿದ ನಮ್ಮ ದೇಶ ಅಥವಾ ವಿದೇಶದ ಯಾವುದೇ ಆಟಗಾರನೂ ಕೂಡ ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಸೋಲದವರೇ ಇಲ್ಲ. ಹೀಗಾಗಿ, ಘಟಾನುಘಟಿ ಕ್ರಿಕೆಟ್ ಪ್ಲೇಯರ್‌ಗಳಾದ ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಪಾಫ್ ಡುಪ್ಲೆಸಿ ಸೇರಿ ಅನೇಕ ಆಟಗಾರರು ಆರ್‌ಸಿಬಿ ಮೇಲೆ ಅಪಾರ ಗೌರವ ಹೊಂದಿದ್ದಾರೆ.
ಧರ್ಮ ಮತ್ತು ಕ್ರಿಕೆಟ್‌ನ ವಿಶಿಷ್ಟ ಸಂಗಮ: ಭಾರತದಲ್ಲಿ ನಡೆಯುತ್ತಿರುವ ಮಹಾಕುಂಭ 2025 ಭಾರತೀಯ ಸಂಸ್ಕೃತಿಯ ಪ್ರತೀಕ. ಕೋಟ್ಯಂತರ ಯಾತ್ರಿಕರು ಸಂಗಮದಲ್ಲಿ ಮುಳುಗಲು ಇಲ್ಲಿಗೆ ಬರ್ತಿದ್ದಾರೆ. ಭಾರತ ಮಾತ್ರವಲ್ಲ, ವಿದೇಶಗಳಿಂದಲೂ ಜನರು ಬರ್ತಿದ್ದಾರೆ. ಇಲ್ಲಿಗೆ ಬಂದು ಭಕ್ತರು ಸಂಗಮದಲ್ಲಿ ಮುಳುಗಿ ತಮ್ಮ ಪಾಪಗಳನ್ನು ತೊಳೆದುಕೊಳ್ಳುತ್ತಾರೆ. ಆರ್‌ಸಿಬಿ ಅಭಿಮಾನಿ ತಂಡದ ಜೆರ್ಸಿಯನ್ನು ನೀರಿನಲ್ಲಿ ಮುಳುಗಿಸುವ ಮೂಲಕ ಆಧ್ಯಾತ್ಮಿಕ ಮಹತ್ವವನ್ನು ತಂಡದ ಕ್ರಿಕೆಟ್‌ಗೆ ಜೋಡಿಸಿ ಪ್ರಾರ್ಥಿಸಿದ್ದಾರೆ. ಇದರಲ್ಲಿ ಕ್ರಿಕೆಟ್ ಮತ್ತು ಧರ್ಮದ ವಿಶಿಷ್ಟ ಸಂಗಮವನ್ನು ಕಾಣಬಹುದು. ಈ ವಿಶಿಷ್ಟ ಪ್ರಾರ್ಥನೆಯನ್ನು ನೋಡಿ ಜನ ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ: ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ಅಪ್ಪು ಮೆರಗು! ಬೊಂಬೆ ಹೇಳುತೈತೆ ಹಾಡಿನಿಂದ RCB ಪ್ರೋಗ್ರಾಂ ಶುರು
