ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು. ಜೈಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.
ಜೈಪುರ: ಕಳೆದ ಐಪಿಎಲ್ ವೇಳೆ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಶ್ ದಯಾಳ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಜೈಪುರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಈ ಹಿಂದೆ ಗಾಜಿಯಾಬಾದ್‌ನ ಯುವತಿಯೊಬ್ಬರು ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು.
ಈ ಪ್ರಕರಣದ ನಂತರ, ಐಪಿಎಲ್ ಸಮಯದಲ್ಲಿ ಜೈಪುರದಲ್ಲಿ ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಗಾಜಿಯಾಬಾದ್ ಪ್ರಕರಣದಲ್ಲಿ ದಯಾಳ್‌ರನ್ನು ಬಂಧಿಸುವುದನ್ನು ಅಲಹಾಬಾದ್ ಹೈಕೋರ್ಟ್ ತಡೆಹಿಡಿದಿತ್ತು. ಆದರೆ, ಅಪ್ರಾಪ್ತ ಬಾಲಕಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದಯಾಳ್‌ರನ್ನು ಬಂಧಿಸಬೇಕಾಗಬಹುದು ಎಂದು ವರದಿಯಾಗಿದೆ. ಜೈಪುರದ ಸಂಗನೇರ್ ಸದರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವೃತ್ತಿಪರ ಕ್ರಿಕೆಟ್‌ನಲ್ಲಿ ಅವಕಾಶ ಕೊಡಿಸುವುದಾಗಿ ಆಮಿಷವೊಡ್ಡಿ ಎರಡು ವರ್ಷಗಳ ಕಾಲ ಯಶ್ ದಯಾಳ್ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ದೂರಿದ್ದಾಳೆ. ಎರಡು ವರ್ಷಗಳ ಹಿಂದೆ ಕ್ರಿಕೆಟ್ ಮೂಲಕ ದಯಾಳ್ ಪರಿಚಯವಾಗಿದ್ದ. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಕ್ಕಾಗಿ ಜೈಪುರಕ್ಕೆ ಬಂದಿದ್ದಾಗ ಸೀತಾಪುರದ ಹೋಟೆಲ್‌ಗೆ ಕರೆಸಿಕೊಂಡು ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಾಳೆ.
ದಯಾಳ್‌ನಿಂದ ನಿರಂತರ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಕಿ, ಈ ತಿಂಗಳ 23ರಂದು ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ವರದಿಯಾಗಿದೆ. ಬಾಲಕಿಗೆ ಮೊದಲ ಬಾರಿಗೆ ದೌರ್ಜನ್ಯ ಎಸಗಿದಾಗ ಆಕೆಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಆದ್ದರಿಂದ, ದಯಾಳ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಯಶ್ ದಯಾಳ್ ತಮ್ಮನ್ನು ಎಮೋಷನಲ್ ಬ್ಲಾಕ್‌ಮೇಲ್ ಹಾಗೂ ನಿರಂತರವಾಗಿ ಶೋಷಣೆ ಮಾಡಿದ್ದರಿಂದ ಬೇಸತ್ತು ಅಪ್ರಾಪ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ವರದಿಯಾಗಿದೆ.
27 ವರ್ಷದ ಎಡಗೈ ವೇಗಿ ಯಶ್ ದಯಾಳ್ ಮೇಲೆ ಜುಲೈ 23ರಂದು ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಆ ಯುವತಿಯ ಮೇಲೆ ಮೊದಲ ಸಲ ಬಲಾತ್ಕಾರ ನಡೆದಿದ್ದು 2023ರಲ್ಲಿ. ಆಗ ಆ ಯುವತಿಗೆ 17 ವರ್ಷ ವಯಸ್ಸಾಗಿತ್ತು. ಇನ್ನು ತೀರಾ ಇತ್ತೀಚೆಗೆ ಕಳೆದ 2025 ಏಪ್ರಿಲ್‌ನಲ್ಲಿ ಕೊನೆಯ ಬಾರಿಗೆ ಆಕೆಯ ಮೇಲೆ ಲೈಂಗಿಕ ಬಲಾತ್ಕಾರ ನಡೆದಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಹೇಳಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಂದ್ಯವು ಜೈಪುರದಲ್ಲಿ ಆಯೋಜನೆಯಾದಾಗ ಯಶ್ ದಯಾಳ್ ತಮ್ಮ ಮೇಲೆ ಬಲಾತ್ಕಾರ ಮಾಡಿದ್ದಾರೆ ಎಂದು ಆ ಯುವತಿ ಆರೋಪಿಸಿದ್ದಾರೆ. ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತೆ ಕಾದು ನೋಡಬೇಕಿದೆ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಯಶ್ ದಯಾಳ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ರೀಟೈನ್ ಮಾಡಿಕೊಂಡಿತ್ತು. ಇನ್ನು 2025ರಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆರ್‌ಸಿಬಿ ತಂಡದ ಗೆಲುವಿನಲ್ಲಿ ಎಡಗೈ ವೇಗಿ ಯಶ್ ದಯಾಳ್ ಕೂಡಾ ಪ್ರಮುಖ ಪಾತ್ರ ವಹಿಸಿದ್ದರು. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಯಶ್ ದಯಾಳ್ 15 ಪಂದ್ಯಗಳನ್ನಾಡಿ 13 ವಿಕೆಟ್ ಕಬಳಿಸಿ ಮಿಂಚಿದ್ದರು. 18ನೇ ಆವೃತ್ತಿಯ ಐಪಿಎಲ್ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ರೋಚಕವಾಗಿ ಮಣಿಸಿ ಆಗಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
