ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮತ್ತು ರಜತ್ ಪಾಟೀದಾರ್ ಅವರ ಸ್ಪೋಟಕ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ 241 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್, ಶೆರ್ಫಾನೆ ರುದರ್‌ಫೋರ್ಡ್‌ ಅವರ ಅಜೇಯ 71 ರನ್‌ಗಳ ಹೋರಾಟದ ಹೊರತಾಗಿಯೂ 18 ರನ್‌ಗಳ ಅಂತರದಿಂದ ಸೋಲನುಭವಿಸಿತು.

ಮುಂಬೈ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟೀದಾರ್ ಅವರ ಸ್ಪೋಟಕ ಅರ್ಧಶತಕ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿಯುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಶಸ್ವಿಯಾಗಿದೆ. 241 ರನ್ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ 5 ವಿಕೆಟ್ ಕಳೆದುಕೊಂಡು 222 ರನ್ ಗಳಿಸುವ ಮೂಲಕ 18 ರನ್ ಅಂತರದ ಸೋಲು ಅನುಭವಿಸಿದೆ. ಇದರೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡರೆ, ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಮೂರನೇ ಗೆಲುವು ದಾಖಲಿಸಿ, ಮೂರನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಉತ್ತಮ ಆರಂಭ ಪಡೆದ ಮುಂಬೈ ಇಂಡಿಯನ್ಸ್

ಇಲ್ಲಿನ ವಾಂಖೆಡೆ ಮೈದಾನದಲ್ಲಿ ಗೆಲ್ಲಲು ಬರೋಬ್ಬರಿ 241 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಸ್ಪೋಟಕ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ರಿಯನ್ ರಿಕಲ್ಟನ್ ಜೋಡಿ 32 ಎಸೆತಗಳಲ್ಲಿ 57 ರನ್‌ಗಳ ಜತೆಯಾಟವಾಡಿದರು. ಈ ವೇಳೆ 13 ಎಸೆತಗಳಲ್ಲಿ 19 ರನ್ ಗಳಿಸಿದ್ದ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್‌ಗೆ ವಾಪಾಸ್ಸಾದರು. ರಿಯನ್ ರಿಕಲ್ಟನ್ 22 ಎಸೆತಗಳಲ್ಲಿ 37 ರನ್ ಸಿಡಿಸಿ ಸುಯಾಶ್‌ ಶರ್ಮಾಗೆ ವಿಕೆಟ್ ಒಪ್ಪಿಸಿದರು. ಇದೇ ಓವರ್‌ನಲ್ಲೇ ತಿಲಕ್ ವರ್ಮಾ ಕೂಡಾ ಒಂದು ರನ್‌ ಗಳಿಸಿ ಡಫಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಇನ್ನು ನಾಲ್ಕನೇ ವಿಕೆಟ್‌ಗೆ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ 27 ಎಸೆತಗಳಲ್ಲಿ 47 ರನ್‌ಗಳ ಜತೆಯಾಟವಾಡಿದರು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕೃನಾಲ್ ಪಾಂಡ್ಯ ಯಶಸ್ವಿಯಾದರು. ಸೂರ್ಯಕುಮಾರ್ ಯಾದವ್ 33 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಹಾರ್ದಿಕ್ ಪಾಂಡ್ಯ ಕೇವಲ 22 ಎಸೆತಗಳಲ್ಲಿ 40 ರನ್ ಸಿಡಿಸಿ ಜೇಕಬ್ ಡಫಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಶೆರ್ಫಾನೆ ರುದರ್‌ಫೋರ್ಡ್‌ ಅಜೇಯ 71 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಟಾಸ್ ಸೋತು ಬೃಹತ್ ಮೊತ್ತ ಕಲೆಹಾಕಿದ ಆರ್‌ಸಿಬಿ

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಮಾಡಲಿಳಿದ ಆರ್‌ಸಿಬಿ ತಂಡವು ಮತ್ತೊಮ್ಮೆ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ಮೂರು ಪಂದ್ಯಗಳಲ್ಲಿ ದೊಡ್ಡ ಮೊತ್ತ ಗಳಿಸಲು ವಿಫಲವಾಗಿದ್ದ ಫಿಲ್ ಸಾಲ್ಟ್ ಸ್ಪೋಟಕ ಇನ್ನಿಂಗ್ಸ್ ಆಡಿದರು. ಸಾಲ್ಟ್‌ಗೆ ಮತ್ತೊಂದು ತುದಿಯಲ್ಲಿ ವಿರಾಟ್ ಕೊಹ್ಲಿ ಉತ್ತಮ ಸಾಥ್ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 10.5 ಓವರ್‌ಗಳಲ್ಲಿ 120 ರನ್‌ಗಳ ಜತೆಯಾಟವಾಡಿದರು. ಫಿಲ್ ಸಾಲ್ಟ್ ಕೇವಲ 36 ಎಸೆತಗಳಲ್ಲಿ ತಲಾ 6 ಬೌಂಡರಿ ಹಾಗೂ ಸಿಕ್ಸರ್‌ಗಳ ನೆರವಿನಿಂದ 78 ರನ್ ಸಿಡಿಸಿದರು. ಇನ್ನು ಕೊಹ್ಲಿ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 50 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟ್ ಮಾಡಲಿಳಿದ ನಾಯಕ ರಜತ್ ಪಾಟೀದಾರ್ ಕೇವಲ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 53 ರನ್ ಚಚ್ಚಿದರು. ಇನ್ನು ಕೊನೆಯಲ್ಲಿ ಟಿಮ್ ಡೇವಿಡ್ ಚುರುಕಿನ 34 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 240ರ ಗಡಿ ಮುಟ್ಟಿಸಿದರು.