ನಿರ್ಣಾಯಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 30 ರನ್‌ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್, ಐಪಿಎಲ್‌ನ 4ನೇ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಈ ಗೆಲುವಿನೊಂದಿಗೆ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ತಂಡಗಳ ಕನಸು ಭಗ್ನಗೊಂಡಿದ್ದು, ಮುಂಬೈ 10 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

ಮುಂಬೈ: 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 30 ರನ್‌ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್‌, ಈ ಬಾರಿ ಐಪಿಎಲ್‌ನ 4ನೇ ತಂಡವಾಗಿ ಪ್ಲೇ-ಆಫ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಇದರೊಂದಿಗೆ ಪಂಜಾಬ್‌ ಕಿಂಗ್ಸ್‌, ಕೋಲ್ಕತಾ ತಂಡಗಳ ಕನಸು ಭಗ್ನಗೊಂಡಿತು. ರಾಯಲ್ಸ್‌ 14 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕ ಸಂಪಾದಿಸಿದರೆ, ಮುಂಬೈ 10 ಸೋಲಿನೊಂದಿಗೆ ಅಭಿಯಾನ ಕೊನೆಗೊಳಿಸಿತು.

Add Asianetnews Kannada as a Preferred SourcegooglePreferred

ಮಾಡು ಇಲ್ಲವೇ ಮಡಿ ಮ್ಯಾಚ್ ಗೆದ್ದ ರಾಜಸ್ಥಾನ ರಾಯಲ್ಸ್

ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ರಾಯಲ್ಸ್‌ಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿತ್ತು. ಆರಂಭಿಕ ಬ್ಯಾಟರ್‌ಗಳ ವೈಫಲ್ಯದ ಹೊರತಾಗಿಯೂ ತಂಡ 8 ವಿಕೆಟ್‌ಗೆ 205 ರನ್‌ ಕಲೆಹಾಕಿತು. ವೈಭವ್‌(4) ಮಿಂಚಲಿಲ್ಲ. ಆದರೆ ಧ್ರುವ್‌ ಜುರೆಲ್‌ 38, ಜೈಸ್ವಾಲ್‌ 27 ರನ್‌ ಗಳಿಸಿದರು. ನಿರ್ಣಾಯಕ ಹಂತದಲ್ಲಿ ದಸುನ್‌ ಶಾನಕ 15 ಎಸೆತಕ್ಕೆ 29, ಜೋಫ್ರಾ ಆರ್ಚರ್‌ 15 ಎಸೆತಕ್ಕೆ 32, ಜಡೇಜಾ ಔಟಾಗದೆ 19 ರನ್‌ ಸಿಡಿಸಿದ್ದರಿಂದ ತಂಡ 200ರ ಗಡಿ ದಾಟಿತು.

ದೊಡ್ಡ ಗುರಿ ಬೆನ್ನತ್ತಿದ ಮುಂಬೈ, ಸೂರ್ಯಕುಮಾರ್‌ ಹೋರಾಟದ ಹೊರತಾಗಿಯೂ 9 ವಿಕೆಟ್‌ ನಷ್ಟದಲ್ಲಿ 175 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ರೋಹಿತ್‌ ಸೊನ್ನೆ ಸುತ್ತಿದರು. ಆದರೆ ಸೂರ್ಯಕುಮಾರ್‌ 42 ಎಸೆತಕ್ಕೆ 60, ವಿಲ್‌ ಜ್ಯಾಕ್ಸ್‌ 18 ಎಸೆತಕ್ಕೆ 33, ಹಾರ್ದಿಕ್‌ 15 ಎಸೆತಕ್ಕೆ 34 ರನ್‌ ಗಳಿಸಿದರು. ಕೊನೆಯಲ್ಲಿ ಸತತ ವಿಕೆಟ್‌ ಕಳೆದುಕೊಂಡ ಮುಂಬೈ ತಂಡ ರಾಯಲ್ಸ್‌ಗೆ ಪ್ಲೇ-ಆಫ್‌ ಹಾದಿಯನ್ನು ಸುಗಮಗೊಳಿಸಿತು. ಆರ್ಚರ್‌ 17 ರನ್‌ ನೀಡಿ 3 ವಿಕೆಟ್‌ ಕಿತ್ತರು.

ಸ್ಕೋರ್‌: ರಾಜಸ್ಥಾನ 20 ಓವರ್‌ನಲ್ಲಿ 205/8 (ಜುರೆಲ್‌ 38, ಆರ್ಚರ್‌ 32, ಶಾರ್ದೂಲ್‌ 2-41, ದೀಪಕ್‌ 2-43), ಮುಂಬೈ 20 ಓವರ್‌ನಲ್ಲಿ 175/9 (ಸೂರ್ಯಕುಮಾರ್‌ 60, ಹಾರ್ದಿಕ್‌ 34,, ಜ್ಯಾಕ್ಸ್‌ 33, ಆರ್ಚರ್‌ 3-17, ಬ್ರಿಜೇಶ್‌ 2-26)

ಪಂದ್ಯಶ್ರೇಷ್ಠ: ಜೋಫ್ರಾ ಆರ್ಚರ್‌

ಕೋಲ್ಕತಾ ಟೀಮ್‌ ಸೋಲಿನ ವಿದಾಯ

ಕೋಲ್ಕತಾ: ಈ ಬಾರಿ ಐಪಿಎಲ್‌ನ ಆರಂಭಿಕ 6 ಪಂದ್ಯಗಳಲ್ಲಿ ಗೆಲುವೇ ಕಾಣದಿದ್ದರೂ, ಭಾನುವಾರದವರೆಗೂ ಪ್ಲೇ-ಆಫ್‌ ರೇಸ್‌ನಲ್ಲಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು. ಲೀಗ್‌ ಹಂತದ ಕೊನೆ ಪಂದ್ಯದಲ್ಲಿ ತಂಡಕ್ಕೆ ಡೆಲ್ಲಿ ವಿರುದ್ಧ 40 ರನ್‌ ಸೋಲು ಎದುರಾಯಿತು. ಮುಂಬೈ ವಿರುದ್ಧ ರಾಜಸ್ಥಾನ ಗೆದ್ದಿದ್ದರಿಂದ ಕೋಲ್ಕತಾ ತಂಡ ಡೆಲ್ಲಿ ವಿರುದ್ಧ ಗೆದ್ದರೂ ಪ್ರಯೋಜನವಿರಲಿಲ್ಲ. ತಂಡ 14 ಪಂದ್ಯಗಳಲ್ಲಿ 13 ಅಂಕದೊಂದಿಗೆ 7ನೇ ಸ್ಥಾನಿಯಾಯಿತು. ಡೆಲ್ಲಿ 7ನೇ ಗೆಲುವಿನೊಂದಿಗೆ 14 ಅಂಕ ಗಳಿಸಿ 6ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ 5 ವಿಕೆಟ್‌ಗೆ 203 ರನ್‌ ಗಳಿಸಿತು. ಕೆ.ಎಲ್‌.ರಾಹುಲ್‌ 30 ಎಸೆತಕ್ಕೆ 60 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಕೋಲ್ಕತಾ 18.4 ಓವರಲ್ಲಿ 163 ರನ್‌ಗೆ ಆಲೌಟಾಯಿತು. ನಾಯಕ ರಹಾನೆ 63 ರನ್‌ ಗಳಿಸಿದರು.

ಪ್ಲೇ-ಆಫ್‌ ವೇಳಾಪಟ್ಟಿ

ದಿನಾಂಕ ಪಂದ್ಯ ತಂಡ ಸ್ಥಳ

ಮೇ 26 ಕ್ವಾಲಿಫೈಯರ್‌-1 ಆರ್‌ಸಿಬಿ-ಗುಜರಾತ್‌ ಧರ್ಮಶಾಲಾ

ಮೇ 27 ಎಲಿಮಿನೇಟರ್‌ ಸನ್‌ರೈಸರ್ಸ್‌-ರಾಯಲ್ಸ್‌ ಚಂಡೀಗಢ

ಮೇ 29 ಕ್ವಾಲಿಫೈಯರ್‌-2 ಕ್ವಾ.-1 ಸೋತ ತಂಡ-ಎಲಿಮಿನೇಟರ್‌ ಗೆದ್ದ ತಂಡ ಚಂಡೀಗಢ

ಮೇ 31 ಫೈನಲ್‌ ಕ್ವಾ-1 ಗೆದ್ದ ತಂಡ vs ಕ್ವಾ-2 ಗೆದ್ದ ತಂಡ ಅಹಮದಾಬಾದ್‌

--