ಭಾರತದ ಸ್ಪಿನ್ನರ್ ಆರ್. ಅಶ್ವಿನ್ ಧರ್ಮಶಾಲಾದಲ್ಲಿ ನಡೆದ 100ನೇ ಟೆಸ್ಟ್ ಪಂದ್ಯದ ನಂತರ ನಿವೃತ್ತಿ ನಿರ್ಧಾರ ಮಾಡಿದ್ದರು. ಎಂ.ಎಸ್.ಧೋನಿ ಸ್ಮರಣಿಕೆ ನೀಡಲು ಬರಲು ಸಾಧ್ಯವಾಗಲಿಲ್ಲ. 106 ಟೆಸ್ಟ್ ಪಂದ್ಯಗಳಲ್ಲಿ 537 ವಿಕೆಟ್ ಪಡೆದಿದ್ದಾರೆ. ಅತಿ ವೇಗವಾಗಿ 500 ವಿಕೆಟ್ ಪಡೆದ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದು. ಸದ್ಯಕ್ಕೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡಲಿದ್ದಾರೆ.

ಚೆನ್ನೈ: 2024ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಸರಣಿ ಮಧ್ಯೆ ಭಾರತದ ತಾರಾ ಸ್ಪಿನ್ನರ್‌ ಆರ್‌.ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿ, ಎಲ್ಲರ ಅಚ್ಚರಿಗೆ ಕಾರಣರಾಗಿದ್ದರು. ಆದರೆ ಅಶ್ವಿನ್‌ ಕಳೆದ ವರ್ಷ ಮಾರ್ಚ್‌ನಲ್ಲೇ ನಿವೃತ್ತಿಯಾಗಲು ನಿರ್ಧರಿಸಿದ್ದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 

ಈ ಬಗ್ಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಧರ್ಮಶಾಲಾದಲ್ಲಿ ನಡೆದ ನನ್ನ 100ನೇ ಟೆಸ್ಟ್‌ ಪಂದ್ಯದ ಬಳಿಕ ನಿವೃತ್ತಿಯಾಗಲು ನಿರ್ಧರಿಸಿದ್ದೆ. ಆ ಪಂದ್ಯದ ಸ್ಮರಣಿಕೆ ನೀಡಲು ಎಂ.ಎಸ್‌.ಧೋನಿಯನ್ನು ಆಹ್ವಾನಿಸಿದ್ದೆ. ಆದರೆ ಅವರಿಗೆ ಬರಲಾಗಲಿಲ್ಲ. ಆದರೆ ಸಿಎಸ್‌ಕೆ ತಂಡಕ್ಕೆ ಮತ್ತೆ ನನ್ನನ್ನು ಸೇರಿಸಿ ದೊಡ್ಡ ಉಡುಗೊರೆ ನೀಡುತ್ತಾರೆ ಅಂದುಕೊಂಡಿರಲಿಲ್ಲ. ಅದಕ್ಕಾಗಿ ಧೋನಿಗೆ ಧನ್ಯವಾದಗಳು’ ಎಂದಿದ್ದಾರೆ. 

ಇದನ್ನೂ ಓದಿ: ಐಪಿಎಲ್‌ನಲ್ಲಿ ಧೂಳೆಬ್ಬಿಸ್ತೇನೆ; ಉಳಿದ ತಂಡಗಳಿಗೆ ಕಾಶ್ಮೀರಿ ವೇಗಿ ಖಡಕ್ ವಾರ್ನಿಂಗ್!

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಗಾಬಾ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯವಾದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಅಚ್ಚರಿಯ ರೀತಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಭಾರತಕ್ಕಾಗಿ 100 ಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಕೆಲವೇ ಕೆಲವು ಆಟಗಾರರಲ್ಲಿ ಅವರು ಒಬ್ಬರು ಮತ್ತು ಅತಿ ವೇಗವಾಗಿ 500 ವಿಕೆಟ್‌ಗಳನ್ನು ಪಡೆದ ಭಾರತೀಯ ಕೂಡ. ಅವರು 36 ಬಾರಿ ಐದು ವಿಕೆಟ್‌ಗಳನ್ನು ಕೂಡ ಪಡೆದ್ದರು.

100ನೇ ಟೆಸ್ಟ್ ಸ್ಮರಣೀಯವಾಗಿಸಿಕೊಂಡಿದ್ದ ಅಶ್ವಿನ್: ರವಿಚಂದ್ರನ್ ಅಶ್ವಿನ್ ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ಬಳಿಕ ಎರಡನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯವು ರವಿಚಂದ್ರನ್ ಅಶ್ವಿನ್ ಪಾಲಿಗೆ 100ನೇ ಟೆಸ್ಟ್ ಪಂದ್ಯ ಎನಿಸಿಕೊಂಡಿತ್ತು.

ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ತಂಡ ಪಾಕ್‌ಗಿಂತ ಶ್ರೇಷ್ಠ: ನೆರೆ ರಾಷ್ಟ್ರ ಕಾಲೆಳೆದ ಮೋದಿ!

ಮೊದಲ ಇನ್ನಿಂಗ್ಸ್‌ನಲ್ಲಿ 51 ರನ್ ನೀಡಿ ಇಂಗ್ಲೆಂಡ್‌ನ 4 ಬ್ಯಾಟರ್‌ಗಳನ್ನು ಪೆವಿಲಿಯನ್ನಿಗಟ್ಟಿದ್ದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 77 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ಎದುರು ಭಾರತ ಇನ್ನಿಂಗ್ಸ್‌ ಹಾಗೂ 64 ರನ್ ಅಂತರದ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅಶ್ವಿನ್ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 9 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶ್ವಿಯಾಗಿದ್ದರು.

ಭಾರತ ಪರ 106 ಟೆಸ್ಟ್ ಪಂದ್ಯಗಳನ್ನಾಡಿ 537 ವಿಕೆಟ್ ಕಬಳಿಸಿರುವ ಅಶ್ವಿನ್, 37 ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಬ್ಯಾಟಿಂಗ್‌ನಲ್ಲೂ 6 ಶತಕ ಸಿಡಿಸುವ ಮೂಲಕ ತಾವೊಬ್ಬ ಉಪಯುಕ್ತ ಆಲ್ರೌಂಡರ್ ಎನ್ನುವುದನ್ನು ಜಗತ್ತಿನ ಮುಂದೆ ಅನಾವರಣ ಮಾಡಿದ್ದರು. 

ರವಿಚಂದ್ರನ್ ಅಶ್ವಿನ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಪರ ಅತಿವೇಗದ 50, 100, 150, 200, 250, 300, 350, 400, 450, 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಅನಿಲ್ ಕುಂಬ್ಳೆ ಬಳಿಕ ಭಾರತ ಕ್ರಿಕೆಟ್ ಕಂಡ ದಿಗ್ಗಜ ಸ್ಪಿನ್ನರ್ ಆಗಿ ರವಿಚಂದ್ರನ್ ಅಶ್ವಿನ್ ಹೊರಹೊಮ್ಮಿದ್ದರು.

ಇದನ್ನೂ ಓದಿ: ಟಿ20 ವಿಶ್ವಕಪ್‌ ಸೋತಾಗ ಬೆದರಿಕೆ ಕರೆಗಳು ಬರುತ್ತಿತ್ತು; ಅಚ್ಚರಿ ಮಾಹಿತಿ ಬಿಚ್ಚಿಟ್ಟ ಭಾರತದ ಸ್ಟಾರ್ ಕ್ರಿಕೆಟಿಗ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ರವಿಚಂದ್ರನ್ ಅಶ್ವಿನ್ ಇದೀಗ ಐಪಿಎಲ್ ಟೂರ್ನಿಗೆ ಸಜ್ಜಾಗುತ್ತಿದ್ದಾರೆ. 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಶ್ವಿನ್ ಇದೀಗ ತಮ್ಮ ನೆಚ್ಚಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಇದೇ ಮಾರ್ಚ್ 22ರಿಂದ ಆರಂಭವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನ ಆತಿಥ್ಯ ವಹಿಸಲಿದೆ.