ಭಾರತ ತಂಡವು ಐತಿಹಾಸಿಕ ವಿಶ್ವಕಪ್ ಗೆದ್ದು ಇತಿಹಾಸ ಬರೆದಿದೆ. ಆದರೆ, ಗೆಲುವಿನ ಅಂತಿಮ ಕ್ಷಣದಲ್ಲಿ ಕಾಮೆಂಟೇಟರ್ ರವಿಶಾಸ್ತ್ರಿ ಮಾಡಿದ ಸಣ್ಣ ತಪ್ಪಿನಿಂದಾಗಿ, ಅಭಿಮಾನಿಗಳು ನಿರಾಸೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದರು.

ಅಹಮದಾಬಾದ್ (ಮಾ.9): 28 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡಿದ್ದ 2011ರ ವಿಶ್ವಕಪ್ ಗೆಲುವಿನ ಕ್ಷಣಗಳನ್ನು ರವಿಶಾಸ್ತ್ರಿ ತಮ್ಮ ಕಾಮೆಂಟರಿ ಮೂಲಕ ಅಜರಾಮರಗೊಳಿಸಿದ್ದರು. ಆದರೆ, ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತಂಡ ಇತಿಹಾಸ ಬರೆದಾಗ, ಶಾಸ್ತ್ರಿ ಅವರ ಕಾಮೆಂಟರಿ ಮಾತ್ರ ಅಭಿಮಾನಿಗಳನ್ನು ಸ್ವಲ್ಪ ನಿರಾಸೆಗೊಳಿಸಿದೆ.

ನಡೆದಿದ್ದೇನು? ಶಾಸ್ತ್ರಿ ಮಾಡಿದ ಆ ಎಡವಟ್ಟು!

ಪಂದ್ಯದ ಅಂತಿಮ ಕ್ಷಣಗಳಲ್ಲಿ ನ್ಯೂಜಿಲೆಂಡ್ ತಂಡದ ಜಾಕೋಬ್ ಡಫಿ ವಿಕೆಟ್ ಅನ್ನು ಅಭಿಷೇಕ್ ಶರ್ಮಾ ಪಡೆದರು. ಆ ಕ್ಷಣದಲ್ಲಿ ಮೈಕ್ ಹಿಡಿದಿದ್ದ ರವಿಶಾಸ್ತ್ರಿ, "Taken in the deep. The ninth wicket goes down" (ಒಂಬತ್ತನೇ ವಿಕೆಟ್ ಪತನವಾಗಿದೆ) ಎಂದು ಉದ್ಗರಿಸಿದರು. ಆದರೆ, ವಾಸ್ತವದಲ್ಲಿ ಅದು ನ್ಯೂಜಿಲೆಂಡ್‌ನ 10ನೇ ವಿಕೆಟ್ ಆಗಿತ್ತು ಮತ್ತು ಆ ಮೂಲಕ ಭಾರತ ಗೆಲುವು ಸಾಧಿಸಿತ್ತು.

ತಕ್ಷಣವೇ ತಮ್ಮ ತಪ್ಪನ್ನು ತಿದ್ದಿಕೊಂಡ ಶಾಸ್ತ್ರಿ, "ನಿಜ ಏನೆಂದರೆ ಎಲ್ಲವೂ ಮುಗಿದಿದೆ. ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆದ್ದಿದೆ. ಸತತವಾಗಿ ಎರಡು ಬಾರಿ ವಿಶ್ವಕಪ್ ಗೆದ್ದ ಮೊದಲ ತಂಡ ಮತ್ತು ತವರಿನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಆತಿಥೇಯ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ" ಎಂದು ತಮ್ಮ ತಪ್ಪನ್ನು ಸರಿಪಡಿಸಿಕೊಂಡರು. ಆದರೂ, ವಿಜಯೋತ್ಸವದ ಆ ಅಂತಿಮ ಕ್ಷಣದ ಕಾಮೆಂಟರಿಯಲ್ಲಿ ಶಾಸ್ತ್ರಿ ಮ್ಯಾಜಿಕ್ ಮಿಸ್ ಆಗಿದೆ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Scroll to load tweet…

ದಾಖಲೆಯ ಮೇಲೆ ದಾಖಲೆ ಬರೆದ ಭಾರತ

ಫೈನಲ್‌ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ 15 ರನ್ ನೀಡಿ 4 ವಿಕೆಟ್ ಪಡೆಯುವ ಮೂಲಕ ನ್ಯೂಜಿಲೆಂಡ್ ಬೆನ್ನೆಲುಬು ಮುರಿದರು. ಕಳೆದ ಮೂರು ವರ್ಷಗಳಲ್ಲಿ ಭಾರತ ಸತತವಾಗಿ ಮೂರು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದೆ (2024 ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಈಗ 2026 ಟಿ20 ವಿಶ್ವಕಪ್).

"ನಾನು ಯಾವುದನ್ನೂ ಪರಂಪರೆಯಾಗಿ ಪಡೆಯುವುದರಲ್ಲಿ ನಂಬಿಕೆ ಇಟ್ಟಿಲ್ಲ, ಹೊಸದನ್ನು ಸೃಷ್ಟಿಸುವುದರಲ್ಲಿ ನಂಬಿಕೆ ಇಟ್ಟಿದ್ದೇನೆ. ಸೋಲುವ ಭಯವಿಲ್ಲದೆ ಆಡುವ ಮತ್ತು ಎದುರಾಳಿಗಳಿಗಿಂತ ಸದಾ ಮೇಲುಗೈ ಸಾಧಿಸುವ ಕ್ರಿಕೆಟ್ ಶೈಲಿಯನ್ನು ನಾವು ಸೃಷ್ಟಿಸಿದ್ದೇವೆ" ಎಂದು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಹೆಮ್ಮೆಯಿಂದ ಹೇಳಿದ್ದಾರೆ.