ರಣಜಿ ಟ್ರೋಫಿ: ಮಳೆಯಲ್ಲ, ಬಿಸಿಲಲ್ಲ ಹಾವಿನಿಂದ ಕೆಲಕಾಲ ಪಂದ್ಯ ರದ್ದು..!
ಕ್ರಿಕೆಟ್ ಪಂದ್ಯಾಟಕ್ಕೆ ಮಳೆ, ಬಿಸಿಲು ಇನ್ನೂ ಕೆಲವೊಮ್ಮೆ ಅಭಿಮಾನಿಗಳು ಅಡ್ಡಿಪಡಿಸುವುದನ್ನು ನೋಡಿರುತ್ತೇವೆ. ಆದರೆ ಮೊದಲ ಬಾರಿಗೆ ಹಾವೊಂದು ಮೈದಾನ ಪ್ರವೇಶಿಸಿ ಕೆಲಕಾಲ ಆಟಗಾರರನ್ನು ತಬ್ಬಿಬ್ಬುಗೊಳಿಸಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಲಪಾಡು[ಆಂಧ್ರ ಪ್ರದೇಶ:ಡಿ.09]: ಜಗತ್ತಿನಾದ್ಯಂತ ಹಲವಾರು ಕಾರಣಗಳಿಗಾಗಿ ಕ್ರಿಕೆಟ್ ಪಂದ್ಯ ಸ್ಥಗಿತವಾಗಿರುವುದನ್ನು ನೋಡಿರುತ್ತೇವೆ. ಬಹುತೇಕ ಸಂದರ್ಭಗಳಲ್ಲಿ ಜಂಟಲ್ ಮನ್ ಕ್ರೀಡೆ ಮಳೆಯೇ ವಿಲನ್ ಆಗಿದ್ದನ್ನೂ ನಾವು ಕಂಡಿದ್ದೇವೆ. ಇನ್ನು ಕಳೆದು ವರ್ಷ ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ಪಂದ್ಯ ಅತಿಯಾದ ಬಿಸಿಲಿನಿಂದಾಗಿ ತಡವಾಗಿ ಆರಂಭವಾಗಿತ್ತು. ಇದೀಗ ರಣಜಿ ಪಂದ್ಯಕ್ಕೆ ಹಾವು ಅಡ್ಡಿ ಪಡಿಸಿದ ಅತಿ ಅಪರೂಪದ ಘಟನೆ ನಡೆದಿದೆ.
ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕಕ್ಕೆ ತಮಿಳುನಾಡು ಸವಾಲು
ಹೌದು, ಸೋಮವಾರ[ಡಿಸೆಂಬರ್ 9]ದಿಂದ 2019-20ನೇ ಸಾಲಿನ ರಣಜಿ ಟೂರ್ನಿ ಆರಂಭವಾಗಿದ್ದು, ಆಂಧ್ರ ಹಾಗೂ ವಿದರ್ಭ ನಡುವಿನ ಪಂದ್ಯಕ್ಕೆ ವಿಜಯವಾಡದ ಮುಲಪಾಡುವಿನ ಡಾ. ಗೋಕರಾಜು ಲೈಲಾ ಗಂಗರಾಜು ಮೈದಾನ ಆತಿಥ್ಯ ವಹಿಸಿದೆ. ಈ ಪಂದ್ಯಕ್ಕೆ ಮೈದಾನದೊಳಗೆ ಹಾವು ಪ್ರವೇಶಿಸಿ ಕೆಲಕಾಲ ಆತಂಕ ಸೃಷ್ಟಿಸಿತ್ತು.
ಈ ಕುರಿತಂತೆ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಅಕೌಂಟ್’ನಿಂದ ’ಆಟ ನಿಲ್ಲಿಸಿದ ಹಾವು!, ಅತಿಥಿಯೊಬ್ಬರು ಮೈದಾನ ಪ್ರವೇಶಿಸಿದ್ದರಿಂದ ಪಂದ್ಯ ಆರಂಭಕ್ಕೆ ತಡವಾಯಿತು ಎಂದು ಟ್ವೀಟ್ ಮಾಡಿದೆ. ಹಾವು ಮೈದಾನ ತೊರೆದ ಬಳಿಕ ಪಂದ್ಯ ಆರಂಭವಾಯಿತು. ಇದಕ್ಕೂ ಮೊದಲು ಟಾಸ್ ಗೆದ್ದ ವಿದರ್ಭ ಫೀಲ್ಡಿಂಗ್ ಆಯ್ದುಕೊಂಡಿತು.
ಈ ಹಿಂದೆ ಟೀಂ ಇಂಡಿಯಾ ಪಂದ್ಯಾವಳಿಗಳು ನಡೆಯುವಾಗ ನಾಯಿ, ಕೆಲ ಅಭಿಮಾನಿಗಳು ಮೈದಾನ ಪ್ರವೇಶಿಸಿದ್ದನ್ನು ನೋಡಿದ್ದೇವೆ. ಆದರೆ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಾವು ಮೈದಾನ ಪ್ರವೇಶಿಸಿ ಕೆಲಕಾಲ ಆತಂಕವನ್ನುಂಟು ಮಾಡಿತ್ತು.