ರಣಜಿ ಟ್ರೋಫಿ: ಇಂದಿನಿಂದ ಕರ್ನಾಟಕಕ್ಕೆ ತಮಿಳುನಾಡು ಸವಾಲು
ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡವಿಂದು ತಮಿಳುನಾಡು ಸವಾಲನ್ನು ಎದುರಿಸಲು ಸಜ್ಜಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ದಿಂಡಿಗಲ್(ಡಿ.09): ವಿಜಯ್ ಹಜಾರೆ ಏಕದಿನ ಹಾಗೂ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್ ಆದ ಕರ್ನಾಟಕ, ಸೋಮವಾರದಿಂದ ಆರಂಭಗೊಳ್ಳಲಿರುವ 2019-20ನೇ ಸಾಲಿನ ರಣಜಿ ಟ್ರೋಫಿಯಲ್ಲೂ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೆಣಸಲಿರುವ ಕರ್ನಾಟಕ, ಶುಭಾರಂಭದ ನಿರೀಕ್ಷೆಯಲ್ಲಿದೆ. 8 ಬಾರಿ ರಣಜಿ ಚಾಂಪಿಯನ್ ಆಗಿರುವ ಕರ್ನಾಟಕ, 9ನೇ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದೆ.
ವಿಜಯ್ ಹಜಾರೆ ಹಾಗೂ ಮುಷ್ತಾಕ್ ಅಲಿ ಟಿ20 ಟೂರ್ನಿಗಳ ಫೈನಲ್ ಪಂದ್ಯದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಮುಖಾಮುಖಿಯಾಗಿದ್ದವು. ಎರಡೂ ಪಂದ್ಯದಲ್ಲೂ ಕರ್ನಾಟಕ ಮೇಲುಗೈ ಸಾಧಿಸಿತ್ತು.’
ರಣಜಿ ಟ್ರೋಫಿ: ಇತಿಹಾಸ ಬರೆಯಲು ಸಜ್ಜಾದ ಕರ್ನಾಟಕ!
ಕರ್ನಾಟಕ ತಂಡವನ್ನು ಕರುಣ್ ನಾಯರ್ ಮುನ್ನಡೆಸಲಿದ್ದು ಮಯಾಂಕ್ ಅಗರ್‌ವಾಲ್, ದೇವದತ್ ಪಡಿಕ್ಕಲ್, ಡಿ.ನಿಶ್ಚಲ್, ಆರ್.ಸಮರ್ಥ್’ರಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಬಲವಿದೆ. ಬೌಲಿಂಗ್‌ನಲ್ಲಿ ತಂಡ ಸ್ವಲ್ಪ ದುರ್ಬಲವಾಗಿ ತೋರುತ್ತಿದ್ದು, ಸ್ಪಿನ್ನರ್‌ಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಬೇಕಿದೆ.
ತಮಿಳುನಾಡು ತಂಡವನ್ನು ಆಲ್ರೌಂಡರ್ ವಿಜಯ್ ಶಂಕರ್ ಮುನ್ನಡೆಸಲಿದ್ದು, ದಿನೇಶ್ ಕಾರ್ತಿಕ್, ಆರ್.ಅಶ್ವಿನ್, ಮುರಳಿ ವಿಜಯ್, ಬಾಬಾ ಅಪರಾಜಿತ್ರಂತಹ ಅನುಭವಿ ಆಟಗಾರರ ದಂಡೇ ಇದೆ. ತವರಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ, ಕರ್ನಾಟಕ ವಿರುದ್ಧ ಸೇಡು ತೀರಿಸಿಕೊಳ್ಳಲು ತಮಿಳುನಾಡು ತಂಡ ಕಾತರಿಸುತ್ತಿದೆ.
ತಂಡಗಳು
ಕರ್ನಾಟಕ: ಕರುಣ್ ನಾಯರ್ (ನಾಯಕ), ಶ್ರೇಯಸ್ ಗೋಪಾಲ್ (ಉಪನಾಯಕ), ಮಯಾಂಕ್ ಅಗರ್‌ವಾಲ್, ದೇವದತ್ ಪಡಿಕ್ಕಲ್, ಡಿ.ನಿಶ್ಚಲ್, ಆರ್.ಸಮಥ್ರ್, ಪವನ್ ದೇಶಪಾಂಡೆ, ಕೆ.ಗೌತಮ್, ಜೆ.ಸುಚಿತ್, ಬಿ.ಆರ್.ಶರತ್, ಶರತ್ ಶ್ರೀನಿವಾಸ್, ರೋನಿತ್ ಮೋರೆ, ಡೇವಿಡ್ ಮಥಾಯಿಸ್, ವಿ.ಕೌಶಿಕ್, ಕೆ.ಎಸ್.ದೇವಯ್ಯ.
ತಮಿಳುನಾಡು: ವಿಜಯ್ ಶಂಕರ್ (ನಾಯಕ), ಬಾಬಾ ಅಪರಾಜಿತ್ (ಉಪನಾಯಕ), ಮುರಳಿ ವಿಜಯ್, ಅಭಿನವ್ ಮುಕುಂದ್, ದಿನೇಶ್ ಕಾರ್ತಿಕ್, ಎನ್.ಜಗದೀಶನ್, ಆರ್.ಅಶ್ವಿನ್, ಸಾಯಿ ಕಿಶೋರ್, ಟಿ.ನಟರಾಜನ್, ಕೆ.ವಿಗ್ನೇಶ್, ಅಭಿಷೇಕ್ ತನ್ವರ್, ಎಂ.ಅಶ್ವಿನ್, ಎಂ.ಸಿದ್ಧಾರ್ಥ್, ಶಾರುಖ್ ಖಾನ್, ಕೆ.ಮುಕುಂದ್.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ಅಂಕಿ-ಅಂಶ:
86 ವರ್ಷ
86ನೇ ಬಾರಿಗೆ ರಣಜಿ ಟ್ರೋಫಿ ಟೂರ್ನಿ ನಡೆಯಲಿದೆ.
38 ತಂಡಗಳು
ಈ ಬಾರಿ ಟೂರ್ನಿಗೆ ಚಂಡೀಗಢ ತಂಡ ಪ್ರವೇಶವಾಗಿದ್ದು, ತಂಡಗಳ ಸಂಖ್ಯೆಗಳ 38ಕ್ಕೇರಿದೆ.
169 ಪಂದ್ಯಗಳು
ಈ ಬಾರಿ ಟೂರ್ನಿಯಲ್ಲಿ ಫೈನಲ್ ಸೇರಿ ಒಟ್ಟು 169 ಪಂದ್ಯಗಳು ನಡೆಯಲಿವೆ.