ಹುಬ್ಬಳ್ಳಿ[ಡಿ.20]: ಉಪನಾಯಕ ಶ್ರೇಯಸ್‌ ಗೋಪಾಲ್‌ (58) ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಉತ್ತರ ಪ್ರದೇಶ ವಿರುದ್ಧ ‘ಬಿ’ ಗುಂಪಿನ ರಣಜಿ ಪಂದ್ಯದಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. 321 ರನ್‌ ಕಲೆಹಾಕಿದ ಕರ್ನಾಟಕ 40 ರನ್‌ ಮುನ್ನಡೆ ಪಡೆಯಿತು. 2ನೇ ಇನ್ನಿಂಗ್ಸ್‌ ಆರಂಭಿಸಿರುವ ಉತ್ತರ ಪ್ರದೇಶ, 3ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 29 ರನ್‌ ಗಳಿಸಿದ್ದು, ಇನ್ನು 11 ರನ್‌ ಹಿನ್ನಡೆಯಲ್ಲಿದೆ. ಶುಕ್ರವಾರ 4ನೇ ಹಾಗೂ ಅಂತಿಮ ದಿನವಾಗಿದ್ದು, ಪಂದ್ಯ ಬಹುತೇಕ ಡ್ರಾದತ್ತ ಸಾಗಿದೆ.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಇನ್ನಿಂಗ್ಸ್‌ ಮುನ್ನಡೆ ಗುರಿ

ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಉತ್ತರಪ್ರದೇಶಕ್ಕೆ ಆಸರೆಯಾಗಿದ್ದ ಆರ್ಯನ್‌ ಜುಯಲ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶೂನ್ಯಕ್ಕೆ ಔಟಾದರು. ಅಲ್ಮಸ್‌ ಶೌಕತ್‌ (6), ಮಾಧವ ಕೌಶಿಕ್‌ (19) ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

4 ವಿಕೆಟ್‌ ನಷ್ಟಕ್ಕೆ 168 ರನ್‌ಗಳಿಂದ 3ನೇ ದಿನದಾಟವನ್ನು ಆರಂಭಿಸಿದ ಕರ್ನಾಟಕ, ಆರಂಭದಲ್ಲೇ ಅಭಿಷೇಕ್‌ ರೆಡ್ಡಿ (32) ವಿಕೆಟ್‌ ಕಳೆದುಕೊಂಡಿತು. ಉತ್ತರ ಪ್ರದೇಶದ ಶಿಸ್ತುಬದ್ಧ ಬೌಲಿಂಗ್‌ ದಾಳಿ ಎದುರು ರನ್‌ ಗಳಿಸಲು ಕರ್ನಾಟಕ ಬ್ಯಾಟ್ಸ್‌ಮನ್‌ಗಳು ಪರದಾಡಿದರು.

ಬಿ.ಆರ್‌.ಶರತ್‌ (16), ಡೇವಿಡ್‌ ಮಥಾಯಿಸ್‌ (04) ಬೇಗನೆ ಔಟಾದರು. ಆದರೆ ಶ್ರೇಯಸ್‌ ಹಾಗೂ ಜೆ.ಸುಚಿತ್‌ (28) ತಂಡಕ್ಕೆ ಆಸರೆಯಾದರು. ಇವರಿಬ್ಬರ ನಡುವೆ 55 ರನ್‌ ಜೊತೆಯಾಟ ಮೂಡಿಬಂತು. 182 ಎಸೆತ ಎದುರಿಸಿದ ಶ್ರೇಯಸ್‌ 58 ರನ್‌ ಗಳಿಸಿ ಔಟಾದರು. ಅಭಿಮನ್ಯು ಮಿಥುನ್‌ ಅಜೇಯ 34 ರನ್‌ ಬಾರಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು.

ಸ್ಕೋರ್‌:

ಉತ್ತರ ಪ್ರದೇಶ 281 ಹಾಗೂ 29/1

ಕರ್ನಾಟಕ 321