ರಣಜಿ ಟ್ರೋಫಿ ಫೈನಲ್‌ಗೇರುವ ಕರ್ನಾಟಕದ ತಂಡದ ಆಸೆ ಭಗ್ನವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡ 4 ವಿಕೆಟ್‌ಗಳಿಂದ ಆತಿಥೇಯ ಕರ್ನಾಟಕ ತಂಡವನ್ನು ಸೋಲಿಸುವ ಮೂಲಕ ಫೈನಲ್ ಸಾಧನೆ ಮಾಡಿತು.
ಬೆಂಗಳೂರು (ಫೆ.12): ದೇಶೀಯ ಕ್ರಿಕೆಟ್‌ನ ಮಹತ್ವದ ಟೂರ್ನಿಯ ರಣಜಿ ಟ್ರೋಫಿಯಲ್ಲಿ ಫೈನಲ್‌ಗೇರುವ ಕರ್ನಾಟಕದ ಆಸೆ ಭಗ್ನಗೊಂಡಿದೆ. ಸೌರಾಷ್ಟ್ರ ತಂಡದ ವಿರುದ್ಧ 4 ವಿಕೆಟ್ ಸೋಲು ಕಂಡ ಕರ್ನಾಟಕ ತಂಡ ಸೆಮಿಫೈನಲ್ ಹಂತದಲ್ಲಿಯೇ ಹೊರಬಿದ್ದಿದೆ. ಗೆಲುವಿಗೆ 115 ರನ್‌ಗಳ ಸಾಧಾರಣ ಸವಾಲು ಪಡೆದುಕೊಂಡಿದ್ದ ಸೌರಾಷ್ಟ್ರ ತಂಡ, ವಿ.ಕೌಶಿಕ್ (32ಕ್ಕೆ 3) ಹಾಗೂ ಕೆ. ಗೌತಮ್ (38ಕ್ಕೆ 3) ಮಾರಕ ದಾಳಿಯ ನಡುವೆಯೂ 6 ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿ ಫೈನಲ್‌ಗೆ ಲಗ್ಗೆ ಇಡಲು ಯಶಸ್ವಿಯಾಯಿತು. ಆ ಮೂಲಕ ಸೌರಾಷ್ಟ್ರ ತಂಡ 2019-20ರ ಬಳಿಕ ಮೊದಲ ಬಾರಿಗೆ ರಣಜಿ ಟ್ರೋಫಿಯಲ್ಲಿ ಫೈನಲ್ ಸಾಧನೆ ಮಾಡಿದಂತಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 120 ರನ್ ಹಿನ್ನಡೆ ಕಂಡಿದ್ದ ಕರ್ನಾಟಕ ತಂಡ, ಐದನೇ ದಿನವಾದ ಭಾನುವಾರ 4 ವಿಕೆಟ್‌ಗೆ 123 ರನ್‌ಗಳಿಂದ ಬ್ಯಾಟಿಂಗ್ ಮುಂದುವರಿಸಿತು. ನಿಕಿನ್ ಜೋಸ್ (109 ರನ್, 161 ಎಸೆತ, 9 ಬೌಂಡರಿ) ಶತಕದ ಸಾಹಸದಿಂದ 234 ರನ್‌ಗೆ ಕರ್ನಾಟಕ ಆಲೌಟ್ ಆಯಿತು. ಇದರಿಂದಾಗಿ ಗೆಲುವಿಗೆ 115 ರನ್‌ಗಳ ಸವಾಲು ಪಡೆದಿದ್ದ ಸೌರಾಷ್ಟ್ರ ತಂಡ, ರಾಜ್ಯ ತಂಡದ ಬೌಲರ್‌ಗಳ ಹೋರಾಟದ ನಡುವೆಯೂ ಫೈನಲ್‌ಗೇರುವಲ್ಲಿ ಯಶಸ್ಸು ಕಂಡಿತು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು 306 ರನ್‌ಗಳಿಂದ ಮಣಿಸಿದ ಬಂಗಾಳ ತಂಡ ಫೈನಲ್‌ಗೆ ಪ್ರವೇಶ ಪಡೆದಿದೆ.
ದಿನದಾಟ ಆರಂಭಕ್ಕೂ ಮುನ್ನವೇ ಫೈನಲ್ ಆಸೆಯನ್ನು ಕೈಬಿಟ್ಟಿದ್ದ ಕರ್ನಾಟಕ ಕೊನೆಯವರೆಗೂ ಹೋರಾಟ ತೋರುವ ಮೂಲಕ ಗಮನಸೆಳೆಯಿತು. ದಿನದಾಟ ಆರಂಭಿಸಿದ ನಿಕಿನ್ ಜೋಸ್ ಹಾಗೂ ಶ್ರೇಯಸ್ ಗೋಪಾಲ್ ಜೋಡಿ ತಂಡದ ಮೊತ್ತಕ್ಕೆ 10 ರನ್ ಕೂಡಿಸುವ ವೇಳೆಗೆ ಬೇರೆಯಾದರು. ವಿಕೆಟ್ ಕೀಪರ್ ಶರತ್ ಶ್ರೀನಿವಾಸ್ (2) ಕೂಡ ಹೆಚ್ಚಿನ ಹೋರಾಟ ತೋರಲಿಲ್ಲ. 6 ವಿಕೆಟ್‌ಗೆ 136 ರನ್ ಬಾರಿಸಿದ್ದ ಕರ್ನಾಟಕ ತಂಡ ಕನಿಷ್ಠ ಹೋರಾಟ ಮಾಡಲು ಸಾಧ್ಯವಾಗಿದ್ದು, ಕೆ.ಗೌತಮ್ ಹಾಗೂ ವಿ ಕೌಶಿಕ್ ಅವರ ಉಪಯುಕ್ತ ಕಾಣಿಕೆಗಳಿಂದ. ಕ್ರೀಸ್‌ನ ಒಂದು ಕಡೆ ಗಟ್ಟಿಯಾಗಿ ತಳವೂರಿದ್ದ ನಿಕಿನ್ ಜೋಸ್‌ಗೆ ಸಾಥ್ ನೀಡಿದ ಕೆ. ಗೌತಮ್ (23) ಏಳನೇ ವಿಕೆಟ್‌ಗೆ ಅಮೂಲ್ಯ 35 ರನ್ ಜೊತೆಯಾಟವಾಡಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದ್ದರು.
ಗೌತಮ್ ಔಟಾದ ಬಳಿಕ ಕ್ರೀಸ್‌ಗೆ ಇಳಿದ ವಿ ಕೌಶಿಕ್ (20) ಅವರೊಂದಿಗೆ 60 ನಿಕಿನ್ ಜೋಸ್ 60 ರನ್ ಜೊತೆಯಾಟವಾಡಿದರು. ಈ ಹಂತದಲ್ಲಿ ಅವರು ತಮ್ಮ ಶತಕವನ್ನು ಪೂರೈಸಿಕೊಂಡರು. ತಂಡದ ಮೊತ್ತ 231 ರನ್ ಆಗಿದ್ದಾಗ ವೈಶಾಕ್ ನಿರ್ಗಮಿಸಿದರೆ, ವಿದ್ವತ್ ಕಾವೇರಪ್ಪ ಹಾಗೂ ನಿಕಿನ್ ಜೋಸ್ ತಂಡದ ಮೊತ್ತ 234 ರನ್ ಆಗಿದ್ದಾಗ ಔಟಾಗಿದ್ದರಿಂದ ಕರ್ನಾಟಕದ ಇನ್ನಿಂಗ್ಸ್‌ಗೆ ಕೊನೆ ಬಿದ್ದಿತು.
ಅಪ್ಪನ ದಾರಿಯಲ್ಲಿ ಮಗ, ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಅರ್ಜುನ್ ತೆಂಡುಲ್ಕರ್ ಶತಕ!
ಗೆಲುವಿಗೆ 115 ರನ್‌ಗಳ ಗುರಿ ಪಡೆದುಕೊಂಡಿದ್ದ ಸೌರಾಷ್ಟ್ರ ತಂಡಕ್ಕೂ ಚೇಸಿಂಗ್ ಉತ್ತಮವಾಗಿರಲಿಲ್ಲ. 42 ರನ್ ಬಾರಿಸುವ ವೇಳೆಗೆ 5 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಹಾರ್ವಿಕ್ ದೇಸಾಯಿ, ಸ್ನೆಲ್ ಪಟೇಲ್, ವಿ.ಜಡೇಜಾ, ಶೆಲ್ಡನ್ ಜಾಕ್ಸನ್ ಹಾಗೂ ಚಿರಾಗ್ ಜಾನಿ ವಿಕೆಟ್‌ಅನ್ನು ತಂಡ ಕಳೆದುಕೊಂಡಿತ್ತು. ಈ ಹಂತದಲ್ಲಿ ನಾಯಕ ಅರ್ಪಿತ್ ವಸವಾಡ (47) ಹಾಗೂ ಚೇತನ್ ಸಕಾರಿಯಾ (24) ಆರನೇ ವಿಕೆಟ್‌ಗೆ 63 ರನ್ ಜೊತೆಯಾಟವಾಡುವ ಮೂಲಕ ಫೈನಲ್‌ಗೇರುವ ಕರ್ನಾಟಕದ ಆಸೆಯನ್ನು ಹಾಳು ಮಾಡಿದರು. 105 ರನ್ ಬಾರಿಸಿದ್ದ ವೇಳೆ ಚೇತನ್ ಸಕಾರಿಯಾ ಔಟಾದರೂ, ಅದಾಗಲೇ ಸೌರಾಷ್ಟ್ರ ಗೆಲ್ಲುವುದು ಖಚಿತಗೊಂಡಿತ್ತು.
Delhi Test ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಗುಡ್ ನ್ಯೂಸ್; ಮಾರಕ ವೇಗಿ ತಂಡ ಸೇರ್ಪಡೆ..?
ಸ್ಕೋರ್: ಕರ್ನಾಟಕ 407/10 ಮತ್ತು 234/10 (ನಿಕಿನ್ ಜೋಸ್ 109, ಕೆ ಗೌತಮ್ 23, ವಿ.ಕೌಶಿಕ್ 20, ಚೇತನ್ ಸಕಾರಿಯಾ 45ಕ್ಕೆ 4, ಧರ್ಮೇಂದ್ರ ಜಡೇಜಾ 79ಕ್ಕೆ 4)
ಸೌರಾಷ್ಟ್ರ 527/10 ಮತ್ತು 34.2 ಓವರ್‌ಗಳಲ್ಲಿ 6 ವಿಕೆಟ್‌ಗೆ 117 (ಅರ್ಪಿತ್ ವಸವಾಡ 47*, ಚೇತನ್ ಸಕಾರಿಯಾ 24, ವಿ.ಕೌಶಿಕ್ 32ಕ್ಕೆ 3, ಗೌತಮ್ 38ಕ್ಕೆ 3)
