Delhi Test ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಗುಡ್ ನ್ಯೂಸ್; ಮಾರಕ ವೇಗಿ ತಂಡ ಸೇರ್ಪಡೆ..?
Delhi Test ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಗುಡ್ ನ್ಯೂಸ್; ಮಾರಕ ವೇಗಿ ತಂಡ ಸೇರ್ಪಡೆ..?
ನವದೆಹಲಿ(ಫೆ.12): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಇನಿಂಗ್ಸ್ ಹಾಗೂ 132 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಇದೀಗ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ಪಾಲಿಗೆ ಸಿಹಿ ಸುದ್ದಿಯೊಂದ ಹೊರಬಿದ್ದಿದ್ದು, ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್, ಡೆಲ್ಲಿ ಟೆಸ್ಟ್ ಪಂದ್ಯದಲ್ಲಿ ತಂಡದ ಆಯ್ಕೆಗೆ ಲಭ್ಯವಾಗುವ ಕುರಿತಂತೆ ನಾಯಕ ಪ್ಯಾಟ್ ಕಮಿನ್ಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಇದೇ ವೇಳೆ ಎರಡನೇ ಟೆಸ್ಟ್ ಪಂದ್ಯದ ಆಯ್ಕೆಗೆ ಕ್ಯಾಮರೋನ್ ಗ್ರೀನ್ ಹಾಗೂ ಜೋಶ್ ಹೇಜಲ್‌ವುಡ್ ಅಲಭ್ಯರಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವು ತನ್ನ ಪ್ರಮುಖ ವೇಗಿಗಳಾದ ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್ ಹಾಗೂ ಕ್ಯಾಮರೋನ್ ಗ್ರೀನ್ ಅವರಿಲ್ಲದೆಯೇ ಕಣಕ್ಕಿಳಿದಿತ್ತು. ಪರಿಣಾಮ ಭಾರತ ಎದುರು ಕಾಂಗರೂ ಪಡೆ ಕೇವಲ ಎರಡೂವರೆ ದಿನಕ್ಕೆ ತನ್ನ ಹೋರಾಟವನ್ನು ಮುಗಿಸಿ ಹೀನಾಯ ಸೋಲು ಅನುಭವಿಸಿತ್ತು.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ವೇಳೆ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಕೈಬೆರಳಿನ ಗಾಯ ಮಾಡಿಕೊಂಡಿದ್ದರು. ಇನ್ನು ಇದೇ ಪಂದ್ಯದಲ್ಲಿ ತಾರಾ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಕೂಡಾ ತೋರು ಬೆರಳಿನ ಗಾಯಕ್ಕೆ ತುತ್ತಾಗಿದ್ದರು. ಇನ್ನು ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದು ಭಾರತ ಪ್ರವಾಸ ಕೈಗೊಂಡಿದ್ದ ಬಲಗೈ ವೇಗಿ ಜೋಶ್ ಹೇಜಲ್‌ವುಡ್ ಎಡ ಹಿಮ್ಮಡಿ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಇದು ಕಾಂಗರೂ ಪಡೆಯ ಬೌಲಿಂಗ್ ವಿಭಾಗ ಮತ್ತಷ್ಟು ದುರ್ಬಲವಾಗಿ ಕಾಣುವಂತೆ ಮಾಡಿದೆ.
ಇದೀಗ ಈಗಾಗಲೇ ಮೊದಲ ಪಂದ್ಯವನ್ನು ಸೋತು ಕಂಗಾಲಾಗಿರುವ ಆಸ್ಟ್ರೇಲಿಯಾ ತಂಡವು, ಟೆಸ್ಟ್ ಸರಣಿಯಲ್ಲಿ ಶತಾಯಗತಾಯ ಕಮ್‌ಬ್ಯಾಕ್ ಮಾಡಬೇಕಿದ್ದರೇ, ಈ ಮೂವರು ತಾರಾ ಆಟಗಾರರೊಂದಿಗೆ ಕಣಕ್ಕಿಳಿಯಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಆದರೆ ಈ ಮೂವರು ತಂಡ ಕೂಡಿಕೊಳ್ಳುವ ಕುರಿತಂತೆ ಸ್ವಲ್ಪ ಅನುಮಾನವಿದೆ ಎಂದು ಸ್ವತಃ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಒಪ್ಪಿಕೊಂಡಿದ್ದಾರೆ.
ಮುಖ್ಯವಾಗಿ ನಾಗ್ಪುರ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಕ್ಯಾಮರೋನ್ ಗ್ರೀನ್ ನೆಟ್ಸ್‌ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಅಭ್ಯಾಸ ಮಾಡಿದ್ದರು. ಹೀಗಿದ್ದು, ಅವರು ಸಂಪೂರ್ಣ ಫಿಟ್ ಆಗಲು ಆಸ್ಟ್ರೇಲಿಯಾ ಟೀಂ ಮ್ಯಾನೇಜ್‌ಮೆಂಟ್ ಕಾಲಾವಕಾಶ ನೀಡಿದೆ. ಆಸೀಸ್ ಮೊದಲ ಪಂದ್ಯ ಸೋಲಿನ ಬಳಿಕ ಮಾತನಾಡಿದ್ದ ಪ್ಯಾಟ್ ಕಮಿನ್ಸ್, "ಮಿಚೆಲ್ ಸ್ಟಾರ್ಕ್ ಇಂದು ಅಥವಾ ನಾಳೆಯೊಳಗಾಗಿ ಡೆಲ್ಲಿಗೆ ಬಂದಿಳಿಯಲಿದ್ದಾರೆ. ಜೋಶ್ ಹೇಜಲ್‌ವುಡ್ ಡೆಲ್ಲಿ ಟೆಸ್ಟ್ ಪಂದ್ಯಕ್ಕೆ ಸಿದ್ದರಿದ್ದಾರೆ ಎಂದು ನನಗನಿಸುತ್ತಿಲ್ಲ. ಈಗಷ್ಟೇ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಎರಡನೇ ಟೆಸ್ಟ್ ಪಂದ್ಯವನ್ನಾಡುತ್ತಾರೆ ಎಂದು ನನಗನಿಸುತ್ತಿಲ್ಲವೆಂದು ಹೇಳಿದ್ದಾರೆ.
ಇನ್ನುಳಿದಂತೆ ಕ್ಯಾಮರೋನ್ ಗ್ರೀನ್ ವಿಚಾರದಲ್ಲಿ ನಾವು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದೇವೆ. ಈಗಾಗಲೇ ಅವರು ನೆಟ್ಸ್‌ನಲ್ಲಿ ಒಳ್ಳೆಯ ರೀತಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇನ್ನು ಬ್ಯಾಟಿಂಗ್‌ನಲ್ಲೂ ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ತಂಡದಲ್ಲಿ ಸ್ಥಾನ ನೀಡುವ ಕುರಿತಂತೆ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಸೂರ್ಯಕುಮಾರ್ ಯಾದವ್ ಹಾಗೂ ಕೆ ಎಸ್ ಭರತ್ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರೂ ಸಹಾ, ರೋಹಿತ್ ಶರ್ಮಾ ಬಾರಿಸಿದ ಆಕರ್ಷಕ ಶತಕ ಹಾಗೂ ಅಕ್ಷರ್ ಪಟೇಲ್ ಹಾಗೂ ರವೀಂದ್ರ ಜಡೇಜಾ ಬಾರಿಸಿದ ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 400 ರನ್ ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು.