ಜಮ್ಮು(ಫೆ.24): ಕೃಷ್ಣಪ್ಪ ಗೌತಮ್ ಮಿಂಚಿನ ಸ್ಪಿನ್ ದಾಳಿಗೆ ತತ್ತರಿಸಿದ ಜಮ್ಮು ಕಾಶ್ಮೀರ ತಂಡ 163 ರನ್‌ಗಳಿಗೆ ಆಲೌಟ್ ಆಗಿದೆ. ಇದರೊಂದಿಗೆ ಕರ್ನಾಟಕ 167 ರನ್‌ಗಳ ಜಯಭೇರಿ ಬಾರಿಸುವುದರೊಂದಿಗೆ ರಣಜಿ ಟ್ರೋಫಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಕರ್ನಾಟಕ ನೀಡಿದ್ದ 331 ರನ್‌ಗಳ ಗುರಿ ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ತಂಡ 4ನೇ ಓವರ್‌ನಲ್ಲೇ ವಿಕೆಟ್ ಕಳೆದುಕೊಂಡಿತು. ಪ್ರಸಿದ್ಧ್ ಕೃಷ್ಣ ರಾಜ್ಯ ತಂಡಕ್ಕೆ ಮೊದಲ ಯಸಸ್ಸು ದಕ್ಕಿಸಿಕೊಟ್ಟರು. ಆ ಬಳಿಕ  ಕೃಷ್ಣಪ್ಪ ಗೌತಮ್ 7 ವಿಕೆಟ್ ಕಬಳಿಸುವ ಅಕ್ಷರಶಃ ಮ್ಯಾಜಿಕ್ ಮಾಡಿದರು. ಒಂದು ಹಂತದಲ್ಲಿ 45 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದ್ದ ಜಮ್ಮು&ಕಾಶ್ಮೀರ ತಂಡ 53 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿತು. ಶುಭಂ ಪಂಡೀರ್(31) ಹಾಗೂ ಆಕೀಬ್ ನಬೀ(26) ಕೆಲಕಾಲ ಪ್ರತಿರೋಧ ತೋರಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ರಣಜಿ ಟ್ರೋಫಿ: ಜಮ್ಮು-ಕಾಶ್ಮೀರಕ್ಕೆ 331 ರನ್‌ಗಳ ಗುರಿ ನೀಡಿದ ಕರ್ನಾಟಕ

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಕರ್ನಾಟಕ 206 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಜಮ್ಮು ಮತ್ತು ಕಾಶ್ಮೀರ ತಂಡ 192 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 14 ರನ್‌ಗಳ ಮುನ್ನಡೆ ಗಳಿಸಿತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಕೆ. ಸಿದ್ಧಾರ್ಥ್ ಶತಕವಂಚಿತ(98) ಬ್ಯಾಟಿಂಗ್ ನೆರವಿನಿಂದ 316 ರನ್ ಬಾರಿಸಿ ಆಲೌಟ್ ಆಯಿತು. 331 ರನ್‌ಗಳ ಗುರಿ ಪಡೆದ ಜಮ್ಮು ಮತ್ತು ಕಾಶ್ಮೀರ ತಂಡ ಕೇವಲ 163 ರನ್‌ಗಳಿಗೆ ಸರ್ವಪತನವಾಯಿತು. ಎರಡು ಇನಿಂಗ್ಸ್‌ನಲ್ಲೂ ಅದ್ಭುತ ಪ್ರದರ್ಶನ(76&98 ರನ್) ತೋರಿದ ಕೃಷ್ಣಮೂರ್ತಿ ಸಿದ್ಧಾರ್ಥ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

ಇನ್ನು ಫೆಬ್ರವರಿ 29ರಂದು ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ಈಡನ್ ಗಾರ್ಡನ್ ಮೈದಾನದಲ್ಲಿ ಬೆಂಗಾಲ್ ತಂಡವನ್ನು ಎದುರಿಸಲಿದೆ.