ಕಳೆದರು ಪಂದ್ಯದಲ್ಲಿ ಗೆಲುವು ಕಾಣದ ಕರ್ನಾಟಕ ತಂಡ ಇದೀಗ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಬಲಿಷ್ಠ ಮುಂಬೈ ವಿರುದ್ದ ಗೆಲುವು ಸಾಧಿಸಿ ನಾಕೌಟ್ ಹಂತ ಪ್ರವೇಶಿಸಲು ಕರ್ನಾಟಕ ಪ್ಲಾನ್ ಮಾಡಿಕೊಂಡಿದೆ. ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿದೆ.

ಮುಂಬೈ(ಜ.03): ರಣಜಿ ಟ್ರೋಫಿ ನಾಕೌಟ್ ಹಂತ ಪ್ರವೇಶಿಸಲು ಕರ್ನಾಟಕ್ಕೆ ಗೆಲ್ಲಲೇಬೇಕಾದ ಪಂದ್ಯ. ಮುಂಬೈ ವಿರುದ್ಧದ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಬಿಕೆಸಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿರುವ ಕರುಣ್ ನಾಯರ್ ಸೈನ್ಯ, ಬಲಿಷ್ಠ ತಂಡವನ್ನೇ ಕಣಕ್ಕಿಳಿಸಿದೆ. 

ಇದನ್ನೂ ಓದಿ: ರಣಜಿಯಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ವೇಗಿ ವಿನಯ್ ಕುಮಾರ್

ತಮಿಳುನಾಡು ವಿರುದ್ಧ ರೋಚಕ ಗೆಲುವು ಸಾಧಿಸಿ, ಈ ಋುತುವಿನಲ್ಲಿ ಶುಭಾರಂಭ ಮಾಡಿದ್ದ ರಾಜ್ಯ ತಂಡ, ಉತ್ತರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ವಿರುದ್ಧ ಡ್ರಾಗೆ ತೃಪ್ತಿಪಟ್ಟಿತ್ತು. ಸತತ 2 ಪಂದ್ಯಗಳಲ್ಲಿ ಗೆಲುವನ್ನು ಕಾಣದ ಕರುಣ್‌ ನಾಯರ್‌ ಪಡೆ ಒತ್ತಡಕ್ಕೆ ಸಿಲುಕಿದ್ದು, ಈ ಪಂದ್ಯದಲ್ಲಿ ಶತಾಯಗತಾಯ ಜಯಕ್ಕಾಗಿ ಹೋರಾಡುವ ಪರಿಸ್ಥಿತಿ ಎದುರಿಸುತ್ತಿದೆ.

ಇದನ್ನೂ ಓದಿ: ರಣಜಿ ಟ್ರೋಫಿ: ಹಿಮಾಚಲ ವಿರುದ್ಧ ಕರ್ನಾಟಕದ ಪಂದ್ಯ ಡ್ರಾನಲ್ಲಿ ಅಂತ್ಯ

ತಂಡಕ್ಕೆ ಅನುಭವಿ ಆಟಗಾರರ ಕೊರತೆ ಕಾಡುತ್ತಿದೆ. ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ಇದು ಉತ್ತಮ ಅವಕಾಶವಾದರೂ, ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರಲು ವಿಫಲಗೊಳ್ಳುತ್ತಿದೆ. ಬಲಿಷ್ಠ ಮುಂಬೈ ಎದುರು ಗೆಲ್ಲಬೇಕಾದರೆ, ಸಾಂಘಿಕ ಹೋರಾಟದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಆಲ್ರೌಂಡ್‌ ಪ್ರದರ್ಶನ ತೋರಲೇಬೇಕಿದೆ.

ಅನುಮತಿ ಇಲ್ಲದೆ ಡ್ರೆಸಿಂಗ್ ರೂಂ ಪ್ರವೇಶಿಸಿದ ಗಾಂಧಿ; ಹೊರಕ್ಕೆ ಹಾಕಿದ ACU!.

ಹೊರಬಿದ್ದ ಮಯಾಂಕ್‌: ಪಂದ್ಯಕ್ಕಾಗಿ ಕೆಎಸ್‌ಸಿಎ ತಂಡ ಪ್ರಕಟಿಸಿದಾಗ ಮಯಾಂಕ್‌ ಅಗರ್‌ವಾಲ್‌ಗೆ ಸ್ಥಾನ ನೀಡಲಾಗಿತ್ತು. ಆದರೆ ಭಾರತ ‘ಎ’ ತಂಡದಲ್ಲಿ ಸ್ಥಾನ ಪಡೆದಿರುವ ಮಯಾಂಕ್‌ ಜ.10ರಂದು ನ್ಯೂಜಿಲೆಂಡ್‌ಗೆ ತೆರಳಬೇಕಿದೆ. ನಿರಂತರವಾಗಿ ಕ್ರಿಕೆಟ್‌ ಆಡುತ್ತಿರುವ ಕಾರಣ, ರಣಜಿ ಪಂದ್ಯದಲ್ಲಿ ಆಡದಂತೆ ಬಿಸಿಸಿಐ ಸೂಚಿಸಿದೆ. ಹೀಗಾಗಿ ಕರ್ನಾಟಕಕ್ಕೆ ಮಯಾಂಕ್‌ ಸೇವೆ ಲಭ್ಯವಾಗುವುದಿಲ್ಲ. ತಂಡದಿಂದ ಹೊರಬಿದ್ದಿದ್ದ ಆರ್‌.ಸಮಥ್‌ರ್‍ ತಂಡಕ್ಕೆ ವಾಪಸಾಗಿದ್ದಾರೆ.

ದೇವದತ್‌ ಪಡಿಕ್ಕಲ್‌ ಸ್ಥಿರ ಪ್ರದರ್ಶನ ಮುಂದುವರಿಸಿದ್ದು, ಕಳೆದ ಪಂದ್ಯದಲ್ಲಿ 99 ರನ್‌ಗೆ ಔಟಾಗಿ ನಿರಾಸೆ ಅನುಭವಿಸಿದ್ದರು. ಕರುಣ್‌ ನಾಯರ್‌ ಲಯಕ್ಕೆ ಮರಳಿದ್ದಾರೆ. ಈ ಇಬ್ಬರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.

ಅಭಿಮನ್ಯು ಮಿಥುನ್‌ ಬೌಲಿಂಗ್‌ ಪಡೆ ಮುನ್ನಡೆಸಲಿದ್ದು, ರೋನಿತ್‌ ಮೋರೆ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ಬೌಲಿಂಗ್‌ ಬಲ ಹೆಚ್ಚಿಸಲಿದೆ. ವಿ.ಕೌಶಿಕ್‌ ಉತ್ತಮ ಲಯದಲ್ಲಿದ್ದಾರೆ. ಶ್ರೇಯಸ್‌ ಗೋಪಾಲ್‌ ಹಾಗೂ ಜೆ.ಸುಚಿತ್‌ ಸ್ಪಿನ್‌ ಬೌಲಿಂಗ್‌ ಜತೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ನೆರವಾಗಬೇಕಿದೆ.

ರಹಾನೆ, ಶಾ ಬಲ: ಆತಿಥೇಯ ಮುಂಬೈ ತಂಡ ಕಳೆದ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಸೋಲುಂಡು ಆಘಾತಕ್ಕೊಳಗಾಗಿತ್ತು. ಆ ಸೋಲಿನ ಕಹಿಯನ್ನು ಮರೆಯಲು ಸೂರ್ಯ ಕುಮಾರ್‌ ಯಾದವ್‌ ಪಡೆ ಕಾತರಿಸುತ್ತಿದೆ. ತಂಡಕ್ಕೆ ಭಾರತ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ ಹಾಗೂ ಯುವ ಆರಂಭಿಕ ಪೃಥ್ವಿ ಶಾ ಬಲ ತುಂಬಲಿದ್ದಾರೆ. ತಂಡದ ಬೌಲಿಂಗ್‌ ವಿಭಾಗ ದುರ್ಬಲವಾಗಿದ್ದು, ಕರ್ನಾಟಕಕ್ಕೆ ಲಾಭವಾಗುವ ಸಾಧ್ಯತೆ ಇದೆ.

ಕರ್ನಾಟಕ ಆಡಿರುವ 3 ಪಂದ್ಯಗಳಲ್ಲಿ 1 ಗೆಲುವು, 2 ಡ್ರಾದೊಂದಿಗೆ 10 ಅಂಕ ಗಳಿಸಿ ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪುಗಳ ಅಂಕಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದೆ. ಮತ್ತೊಂದೆಡೆ ಮುಂಬೈ 2 ಪಂದ್ಯಗಳಲ್ಲಿ ತಲಾ 1 ಗೆಲುವು, ಸೋಲುಗಳೊಂದಿಗೆ 12ನೇ ಸ್ಥಾನದಲ್ಲಿದೆ.

ಕಳೆದ 3 ಪಂದ್ಯಗಳಲ್ಲಿ ಕರ್ನಾಟಕ ಪ್ರಾಬಲ್ಯ
ಕರ್ನಾಟಕ ಹಾಗೂ ಮುಂಬೈ ತಂಡಗಳು ಇದುವರೆಗೆ ರಣಜಿ ಟ್ರೋಫಿಯಲ್ಲಿ ಒಟ್ಟು 26 ಬಾರಿ ಮುಖಾಮುಖಿಯಾಗಿವೆ. ಮುಂಬೈ 10 ಪಂದ್ಯಗಳಲ್ಲಿ ಗೆದ್ದರೆ ಕರ್ನಾಟಕ ಗೆದ್ದಿರುವುದು 3 ಪಂದ್ಯಗಳಲ್ಲಿ ಮಾತ್ರ. ಆದರೆ ಕಳೆದ 5 ಮುಖಾಮುಖಿಗಳಲ್ಲಿ ಕರ್ನಾಟಕ 3ರಲ್ಲಿ ಜಯಿಸಿದ್ದು, ಮುಂಬೈ ಒಂದರಲ್ಲೂ ಗೆದ್ದಿಲ್ಲ.