ಬೆಂಗಳೂರು[ಡಿ.29]: 2019-20ರ ದೇಸಿ ಋುತುವಿನಲ್ಲಿ ಈಗಾಗಲೇ 2 ಟ್ರೋಫಿಗಳನ್ನು ಗೆದ್ದಿರುವ ಕರ್ನಾಟಕ ತಂಡದ ಮೇಲೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಿದೆ. ಆದರೆ ಹಿಮಾಚಲ ಪ್ರದೇಶ ವಿರುದ್ಧ ಶನಿವಾರ ಮೈಸೂರಲ್ಲಿ ಮುಕ್ತಾಯಗೊಂಡ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಹೋರಾಟ ಬಿಟ್ಟು ಡ್ರಾ ಮಾಡಿಕೊಳ್ಳಲು ನಿರ್ಧರಿಸಿದ್ದಕ್ಕೆ ಕರ್ನಾಟಕ ತಂಡ ಭಾರೀ ಟೀಕೆಗೆ ಗುರಿಯಾಗಿದೆ. ಈ ಫಲಿತಾಂಶದಿಂದ ಕರ್ನಾಟಕ ತಪ್ಪು ಸಂದೇಶ ರವಾನಿಸಿದೆ.

3ನೇ ದಿನದಂತ್ಯಕ್ಕೆ 67 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 191 ರನ್‌ ಗಳಿಸಿದ್ದ ಕರ್ನಾಟಕ, 4ನೇ ಹಾಗೂ ಅಂತಿಮ ದಿನವಾದ ಶನಿವಾರ 41.3 ಓವರ್‌ ಬ್ಯಾಟ್‌ ಮಾಡಿ, 296 ರನ್‌ಗಳಿಗೆ ಆಲೌಟ್‌ ಆಯಿತು. 4ನೇ ದಿನ ತಂಡ ಕಲೆಹಾಕಿದ್ದು 105 ರನ್‌ ಮಾತ್ರ. ಕಳೆದುಕೊಂಡಿದ್ದು 7 ವಿಕೆಟ್‌. ಗೆಲುವಿಗೆ 183 ರನ್‌ ಗುರಿ ಪಡೆದ ಹಿಮಾಚಲ ಪ್ರದೇಶ, ಚಹಾ ವಿರಾಮದ ವೇಳೆಗೆ 2 ವಿಕೆಟ್‌ ನಷ್ಟಕ್ಕೆ 34 ರನ್‌ ಗಳಿಸಿತ್ತು. ಕೊನೆ ಅವಧಿ ಬಹಳ ಕುತೂಹಲ ಮೂಡಿಸಿತ್ತು. ಇನ್ನೂ ಸುಮಾರು 40 ಓವರ್‌ಗಳು ಬಾಕಿ ಉಳಿದಿದ್ದವು. ಆದರೆ ಹಿಮಾಚಲ ತಂಡ, ಗೆಲುವಿಗೆ ಪ್ರಯತ್ನಿಸುವುದಿಲ್ಲ ಎಂದು ತಿಳಿಸಿದ ಕಾರಣ ಕರ್ನಾಟಕ ಸಹ ಡ್ರಾ ಮಾಡಿಕೊಳ್ಳಲು ಒಪ್ಪಿಕೊಂಡಿತು. ನಾಯಕ ಕರುಣ್‌ ನಾಯರ್‌ ಹಾಗೂ ಕೋಚ್‌ ಯರೇ ಗೌಡ್‌ ತೆಗೆದುಕೊಂಡ ಈ ನಿರ್ಧಾರ ರಾಜ್ಯದ ಕ್ರಿಕೆಟ್‌ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ರಣಜಿ ಟ್ರೋಫಿ: ಗೆಲುವಿಗಾಗಿ ಕರ್ನಾಟಕ ಹೋರಾಟ!

ರಾಜ್ಯಕ್ಕೆ 1 ಅಂಕ: ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸಿದ ಕಾರಣ, ಕರ್ನಾಟಕಕ್ಕೆ ಕೇವಲ 1 ಅಂಕ ದೊರೆಯಿತು. ಹಿಮಾಚಲ 3 ಅಂಕಗಳನ್ನು ಪಡೆಯಿತು. 3 ಪಂದ್ಯಗಳಲ್ಲಿ 1 ಗೆಲುವು, 2 ಡ್ರಾಗಳೊಂದಿಗೆ 10 ಅಂಕ ಗಳಿಸಿರುವ ಕರ್ನಾಟಕ, ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಕುಸಿದಿದೆ. ತವರಿನಲ್ಲಿ ಆಡಿದ ಎರಡೂ ಪಂದ್ಯಗಳು ಡ್ರಾಗೊಂಡಿದ್ದು, ರಾಜ್ಯ ತಂಡವನ್ನು ಒತ್ತಡಕ್ಕೆ ಸಿಲುಕಿಸಿದೆ.

99 ರನ್‌ಗೆ ದೇವದತ್‌ ಔಟ್‌: ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆಗೆ ಔಟಾಗಿದ್ದ ದೇವದತ್‌ ಪಡಿಕ್ಕಲ್‌, 2ನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಬ್ಯಾಟಿಂಗ್‌ ನಡೆಸಿದರು. 201 ಎಸೆತಗಳನ್ನು ಎದುರಿಸಿದ ಅವರು, 99 ರನ್‌ಗಳಿಸಿದ್ದಾಗ ಔಟಾಗಿ ಶತಕದ ಅವಕಾಶ ಕೈಚೆಲ್ಲಿದರು. ಕರುಣ್‌ 64 ರನ್‌ ಗಳಿಸಿದರೆ, ಬಿ.ಆರ್‌.ಶರತ್‌ 42 ಹಾಗೂ ಅಭಿಮನ್ಯು ಮಿಥುನ್‌ 22 ರನ್‌ಗಳ ಕೊಡುಗೆ ನೀಡಿದರು. 4ನೇ ದಿನ ಕರ್ನಾಟಕ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿದೆ ಎನ್ನುವ ನಿರೀಕ್ಷೆ ಇತ್ತು. ಆದರೆ ಯಾವ ಹಂತದಲ್ಲೂ ತಂಡ ಗೆಲುವಿನ ಲೆಕ್ಕಾಚಾರದಲ್ಲಿದೆ ಎನಿಸಲಿಲ್ಲ. ದಿನದಾಟದ ಆರಂಭದಿಂದಲೂ ಕರ್ನಾಟಕ, ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರ ಕಡೆಗೇ ಹೆಚ್ಚು ಗಮನ ಹರಿಸಿದ್ದು ಅಚ್ಚರಿಗೆ ಕಾರಣವಾಯಿತು.

ಸ್ಕೋರ್‌: 
ಕರ್ನಾಟಕ 166 ಹಾಗೂ 296 (ದೇವದತ್‌ 99, ಕರುಣ್‌ 64, ಶರತ್‌ 42, ರಿಶಿ 5-83) 
ಹಿಮಾಚಲ ಪ್ರದೇಶ 280 ಹಾಗೂ 34/2 (ಪ್ರಶಾಂತ್‌ 12, ಕೌಶಿಕ್‌ 2-13)

ಜ.3ರಿಂದ ಮುಂಬೈ ವಿರುದ್ಧ ಪಂದ್ಯ

ಕರ್ನಾಟಕ ತಂಡ 4ನೇ ಸುತ್ತಿನ ಪಂದ್ಯವನ್ನು ಜ.3ರಿಂದ ಮುಂಬೈ ವಿರುದ್ಧ ಆಡಲಿದೆ. ಮುಂಬೈನ ಬಿಕೆಸಿ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಸತತ 2 ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿರುವ ಕರ್ನಾಟಕ, ನಾಕೌಟ್‌ ಹಂತಕ್ಕೆ ಪ್ರವೇಶಿಸುವ ದೃಷ್ಟಿಯಿಂದ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ಗೆಲ್ಲುವ ಅವಕಾಶ ಕಡಿಮೆಯಿತ್ತು: ಕರುಣ್‌!

ಕರ್ನಾಟಕ ತಂಡದ ನಾಯಕ ಕರುಣ್‌ ನಾಯರ್‌, ಚಹಾ ವಿರಾಮದ ವೇಳೆಯೇ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ನಿರ್ಧರಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ‘ಆ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವೆನಿಸಿತು. ಖಂಡಿತವಾಗಿಯೂ ಪಂದ್ಯ ಗೆಲ್ಲುವುದು ನಮ್ಮ ಗುರಿಯಾಗಿತ್ತು. ಹಿಮಾಚಲ 2 ವಿಕೆಟ್‌ ಕಳೆದುಕೊಂಡಿತ್ತು. 30-35 ಓವರ್‌ಗಳಷ್ಟೇ ಬಾಕಿ ಇತ್ತು. ಎದುರಾಳಿಯನ್ನು ಆಲೌಟ್‌ ಮಾಡುವುದು ಕಷ್ಟವೆನಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 100ಕ್ಕೂ ಹೆಚ್ಚು ಓವರ್‌ ಬೌಲ್‌ ಮಾಡಿ ನಾವು ದಣಿದಿದ್ದೆವು. ಚಹಾ ವಿರಾಮದ ವೇಳೆಗೆ ಇನ್ನೆರಡು ವಿಕೆಟ್‌ ಪತನಗೊಂಡಿದ್ದರೆ ಕೊನೆ ಅವಧಿಯಲ್ಲಿ ಆಟ ಮುಂದುವರಿಸುತ್ತಿದ್ದೆವು’ ಎಂದು ಕರುಣ್‌ ಪಂದ್ಯದ ಬಳಿಕ ಮಾಧ್ಯಮಗಳಿಗೆ ತಿಳಿಸಿದರು.