Ranji Trophy: ಉತ್ತರಾಖಂಡ ಬಗ್ಗುಬಡಿದು ಸೆಮೀಸ್‌ಗೆ ಕರ್ನಾಟಕ ಲಗ್ಗೆ..!
ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ ಕ್ರಿಕೆಟ್ ತಂಡ
ಉತ್ತರಾಖಂಡ ಎದುರು ಇನಿಂಗ್ಸ್ ಹಾಗೂ 281 ರನ್ ಜಯ ದಾಖಲಿಸಿದ ಮಯಾಂಕ್ ಅಗರ್‌ವಾಲ್ ಪಡೆ
8 ಬಾರಿಯ ಚಾಂಪಿಯನ್ ಕರ್ನಾಟಕ, ಫೈನಲ್ ಪ್ರವೇಶಕ್ಕೆ ಇನ್ನೊಂದು ಹೆಜ್ಜೆ ಬಾಕಿ
ಬೆಂಗಳೂರು(ಫೆ.03): 2022-23ರ ಋುತುವಿನ ರಣಜಿ ಟ್ರೋಫಿ ದೇಸಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರಾಖಂಡ ಎದುರು ಇನಿಂಗ್ಸ್ ಹಾಗೂ 281 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಮೊದಲ ಇನ್ನಿಂಗ್ಸಲ್ಲಿ 606 ರನ್ ಕಲೆಹಾಕಿದ ಕರ್ನಾಟಕ, 490 ರನ್ ಮುನ್ನಡೆ ಸಂಪಾದಿಸಿತು. ಇನ್ನು ಭಾರೀ ಹಿನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಉತ್ತರಾಖಂಡ ತಂಡವು 209 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 3ನೇ ದಿನವಾದ ಗುರುವಾರ 2ನೇ ಇನ್ನಿಂಗ್‌್ಸ ಆರಂಭಿಸಿದ ಉತ್ತರಾಖಂಡ ದಿನದಂತ್ಯಕ್ಕೆ 3 ವಿಕೆಟ್‌ಗೆ 106 ರನ್ ಗಳಿಸಿತ್ತು. ನಾಲ್ಕನೇ ದಿನ ತನ್ನ ಖಾತೆಗೆ 103 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಳ್ಳುವ ಮೂಲಕ ಬಲಿಷ್ಠ ಕರ್ನಾಟಕ ತಂಡಕ್ಕೆ ಶರಣಾಯಿತು. ಉತ್ತರಾಖಂಡ್ ಪರ ದಿಕ್ಷಾನ್ಷ್ಯು ನೇಗಿ(29), ಸ್ವಪ್ನಿಲ್ ಸಿಂಗ್(51) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಆದಿತ್ಯ ತಾರೆ(28) ಕೊಂಚ ಪ್ರತಿರೋಧ ತೋರಿದರಾದರೂ, ತಂಡವನ್ನು ಇನಿಂಗ್ಸ್ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಎರಡನೇ ಇನಿಂಗ್ಸ್ ಕರ್ನಾಟಕ ಪರ ವಿಜಯ್‌ಕುಮಾರ್ ವೈಶಾಕ್ ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಪಡೆದರೆ, ಪಾದಾರ್ಪಣೆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ್ದ ಮುರಳಿಧರ ವೆಂಕಟೇಶ್ ಮತ್ತು ವಿದ್ವತ್ ಕಾವೇರಪ್ಪ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.
ಇದೀಗ ಕರ್ನಾಟಕ ತಂಡವು ಎರಡನೇ ಸೆಮಿಫೈನಲ್‌ನಲ್ಲಿ ಪಂಜಾಬ್ ಹಾಗೂ ಸೌರಾಷ್ಟ್ರ ನಡುವೆ ವಿಜೇತರಾದ ತಂಡದ ಎದುರು ಸೆಮೀಸ್‌ನಲ್ಲಿ ಸೆಣಸಾಡಲಿದೆ.
ಹೇಗಿತ್ತು ಮೂರನೇ ಕ್ವಾರ್ಟರ್ ಫೈನಲ್ ಪಂದ್ಯ..?
ಕರ್ನಾಟಕ ಹಾಗೂ ಉತ್ತರಾಖಂಡ ನಡುವಿನ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ, ಮೊದಲು ಬ್ಯಾಟಿಂಗ್ ಮಾಡಲು ಉತ್ತರಾಖಂಡ ತಂಡವನ್ನು ಆಹ್ವಾನಿಸಿತು. ಚೊಚ್ಚಲ ಪಂದ್ಯವನ್ನಾಡಿದ ವೇಗಿ ಮುರುಳಿಧರ ವೆಂಕಟೇಶ್ ಮಾರಕ ದಾಳಿಗೆ ತತ್ತರಿಸಿದ ಉತ್ತರಖಂಡ ತಂಡವು ಕೇವಲ 116 ರನ್‌ಗಳಿಗೆ ಸರ್ವಪತನ ಕಂಡಿತು.
Ranji Trophy: ಸೆಮೀಸ್ ಹೊಸ್ತಿಲಲ್ಲಿ ಕರ್ನಾಟಕ ಕ್ರಿಕೆಟ್ ತಂಡ
ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡಕ್ಕೆ ರವಿಕುಮಾರ್ ಸಮರ್ಥ್ ಹಾಗೂ ಮಯಾಂಕ್ ಅಗರ್‌ವಾಲ್ ಮೊದಲ ವಿಕೆಟ್‌ಗೆ 159 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಸಮರ್ಥ್ 82 ರನ್ ಬಾರಿಸಿದರೆ, ಮಯಾಂಕ್ ಅಗರ್‌ವಾಲ್ 83 ರನ್ ಸಿಡಿಸಿದರು. ಇನ್ನು ದೇವದತ್ ಪಡಿಕ್ಕಲ್ 69 ಹಾಗೂ ನಿಕಿನ್ ಜೋಶ್ 62 ರನ್ ಬಾರಿಸಿದರು. ಇನ್ನು ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅಜೇಯ 161 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 600ರ ಗಡಿ ದಾಟಿಸಿದರು. ಅಂತಿಮವಾಗಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 606 ರನ್ ಬಾರಿಸಿ ಸರ್ವಪತನ ಕಂಡಿತು.
ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಉತ್ತರಾಖಂಡ ತಂಡದ ಪರ ಸ್ವಪ್ನಿಲ್ ಸಿಂಗ್ 51 ರನ್ ಬಾರಿಸಿದ್ದು ಬಿಟ್ಟರೇ, ಉಳಿದ್ಯಾವ ಬ್ಯಾಟರ್‌ಗಳು ಸಹಾ 30ರ ಗಡಿ ದಾಟಲಿಲ್ಲ. ಪರಿಣಾಮ ಉತ್ತರಾಖಂಡ ತಂಡವು 209 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿತು.