ರಣಜಿ ಟೂರ್ನಿಯಲ್ಲಿ ಕರ್ನಾಟಕದ ಮೇಲೆ ಸೌರಾಷ್ಟ್ರ ತಂಡವು ಫಾಲೋ ಆನ್ ಹೇರಿದೆ. ಜಯದೇವ್ ಉನಾದ್ಕತ್ ಮಾರಕ ದಾಳಿಗೆ ತತ್ತರಿಸಿದ ಕರ್ನಾಟಕ ಕೇವಲ 171 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಫಾಲೋಆನ್‌ಗೆ ಸಿಲುಕಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ...
ರಾಜ್‌ಕೋಟ್(ಜ.14): ಅನನುಭವಿ ತಂಡ ಕಟ್ಟಿಕೊಂಡು ಬಲಿಷ್ಠ ಸೌರಾಷ್ಟ್ರ ವಿರುದ್ಧ ಸಮರಕ್ಕಿಳಿದಿರುವ ಕರ್ನಾಟಕ, 2019-20ರ ರಣಜಿ ಟ್ರೋಫಿಯಲ್ಲಿ ಮೊದಲ ಸೋಲು ತಪ್ಪಿಸಿಕೊಳ್ಳಲು ಹೋರಾಟ ನಡೆಸುತ್ತಿದೆ.
ಇಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಕಳಪೆ ಬೌಲಿಂಗ್‌ನಿಂದಾಗಿ ಆತಿಥೇಯರು ಬೃಹತ್ ಮೊತ್ತ ಕಲೆಹಾಕಲು ಅನುಕೂಲ ಮಾಡಿಕೊಟ್ಟ ಕರ್ನಾಟಕ, ಮೊದಲ ಇನ್ನಿಂಗ್ಸ್‌ನಲ್ಲಿ 171 ರನ್‌ಗಳಿಗೆ ಆಲೌಟ್ ಆಗಿ ಫಾಲೋ ಆನ್ ಹೇರಿಸಿಕೊಂಡಿದೆ. 2ನೇ ಇನ್ನಿಂಗ್ಸ್ ಆರಂಭಿಸಿರುವ ಕರ್ನಾಟಕ, 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದ್ದು, ಇನ್ನೂ 380 ರನ್ ಹಿನ್ನಡೆಯಲ್ಲಿದೆ. ಸೋಲಿನಿಂದ ಪಾರಾಗಬೇಕಿದ್ದರೆ ಕರ್ನಾಟಕ, ಪಂದ್ಯದ 4ನೇ ಹಾಗೂ ಅಂತಿಮ ದಿನವಾದ ಮಂಗಳವಾರ ಇಡೀ ದಿನ ಬ್ಯಾಟ್ ಮಾಡಬೇಕಿದೆ. ಆರಂಭಿಕರಾದ ಆರ್.ಸಮರ್ಥ್ (16) ಹಾಗೂ ರೋಹನ್ ಕದಂ (14) ಕ್ರೀಸ್ ಕಾಯ್ದುಕೊಂಡಿದ್ದಾರೆ. ಉದರ ಬೇನೆಯಿಂದ ಬಳಲುತ್ತಿದ್ದ ಕಾರಣ ದೇವದತ್ ಪಡಿಕ್ಕಲ್, ಸೋಮವಾರ ಇನ್ನಿಂಗ್ಸ್ ಆರಂಭಿಸಲಿಲ್ಲ. ಅವರ ಆರೋಗ್ಯ ಸ್ಥಿತಿ ನೋಡಿಕೊಂಡು ಅಂತಿಮ ದಿನ ಬ್ಯಾಟಿಂಗ್ ನಡೆಸುತ್ತಾರೋ ಇಲ್ಲವೋ ಎನ್ನುವುದನ್ನು ತಿಳಿಸುವುದಾಗಿ ತಂಡ ಸ್ಪಷ್ಟಪಡಿಸಿದೆ.
ರಣಜಿ ಟ್ರೋಫಿ: ಪೂಜಾರ ದ್ವಿಶತಕ ಸಂಭ್ರಮ
ಉನಾದ್ಕತ್‌ಗೆ 5 ವಿಕೆಟ್: 2ನೇ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿದ್ದ ಕರ್ನಾಟಕ, 3ನೇ ದಿನವನ್ನು ಎಚ್ಚರಿಕೆಯಿಂದ ಆರಂಭಿಸಿತು. ಆದರೆ 29 ರನ್ ಗಳಿಸಿದ್ದ ರೋಹನ್‌ರನ್ನು ಸೌರಾಷ್ಟ್ರ ನಾಯಕ ಜೈದೇವ್ ಉನಾದ್ಕತ್ ಪೆವಿಲಿಯನ್‌ಗಟ್ಟಿದರು. ಕೆ.ವಿ.ಸಿದ್ಧಾರ್ಥ್ (00), ಪವನ್ ದೇಶಪಾಂಡೆ (08), ಶ್ರೇಯಸ್ ಗೋಪಾಲ್ (11), ಬಿ.ಆರ್.ಶರತ್ (02) ತಂಡಕ್ಕೆ ನೆರವಾಗಲಿಲ್ಲ. 93 ರನ್‌ಗೆ ಕರ್ನಾಟಕ 6 ವಿಕೆಟ್ ಕಳೆದುಕೊಂಡಿತು. 63 ರನ್ ಗಳಿಸಿದ ಸಮರ್ಥ್ ಹಾಗೂ 46 ರನ್ ಗಳಿಸಿದ ಪ್ರವೀಣ್ ದುಬೆ, ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಉನಾದ್ಕತ್ 5, ಕಮ್ಲೇಶ್ ಮಕ್ವಾನ 3 ವಿಕೆಟ್ ಕಬಳಿಸಿದರು. 410 ರನ್‌ಗಳ ಹಿನ್ನಡೆ ಅನುಭವಿಸಿದ ಕರ್ನಾಟಕದ ಮೇಲೆ ಸೌರಾಷ್ಟ್ರ ಫಾಲೋ ಆನ್ ಹೇರಿತು. ಕರ್ನಾಟಕ ತಂಡ ರಣಜಿ ಟ್ರೋಫಿಯಲ್ಲಿ ಕೊನೆ ಬಾರಿಗೆ ಫಾಲೋ ಆನ್ ಹೇರಿಸಿಕೊಂಡಿದ್ದು 2012ರಲ್ಲಿ. ಹುಬ್ಬಳ್ಳಿ ಯಲ್ಲಿ ಹರ‌್ಯಾಣ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಫಾಲೋ ಅನ್‌ಗೆ ಗುರಿಯಾಗಿದ್ದ ಕರ್ನಾಟಕ, ಉತ್ತಪ್ಪ ಹಾಗೂ ಕುನಾಲ್ ಕಪೂರ್‌ರ ಹೋರಾಟದ ಶತಕದ ನೆರವಿನಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.
ಸ್ಕೋರ್:
ಸೌರಾಷ್ಟ್ರ 581/7 ಡಿ,
ಕರ್ನಾಟಕ 171 (ಸಮರ್ಥ್ 63, ಪ್ರವೀಣ್ 46, ಉನಾದ್ಕತ್ 5-49)
ಹಾಗೂ 30/0 (3ನೇ ದಿನದಂತ್ಯಕ್ಕೆ)
