ರಾಜ್‌ಕೋಟ್‌: 2019-2020ರ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಮೊದಲ ಸೋಲು ಕಾಣುವ ಭೀತಿಗೆ ಸಿಲುಕಿದೆ. ಇಲ್ಲಿ ನಡೆಯುತ್ತಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಸೌರಾಷ್ಟ್ರ ತಂಡ ಕರ್ನಾಟಕದ ಮೇಲೆ ಸವಾರಿ ಮಾಡುತ್ತಿದೆ. 

ಚೇತೇಶ್ವರ್‌ ಪೂಜಾರ ಬಾರಿಸಿದ ಅಮೋಘ ದ್ವಿಶತಕ ಹಾಗೂ ಶೆಲ್ಡನ್‌ ಜಾಕ್ಸನ್‌ರ ಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ನಷ್ಟಕ್ಕೆ 581 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡ ಸೌರಾಷ್ಟ್ರ, 2ನೇ ದಿನದಂತ್ಯಕ್ಕೂ ಮುನ್ನ ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌ರನ್ನು ಪೆವಿಲಿಯನ್‌ಗಟ್ಟಿ, ನಿಯಂತ್ರಣ ಸಾಧಿಸಿದೆ.

ರಣಜಿ ಟ್ರೋಫಿ: ಕರ್ನಾಟಕಕ್ಕೆ ಪೂಜಾರ ಪಂಚ್‌!

2ನೇ ದಿನದಂತ್ಯಕ್ಕೆ ಕರ್ನಾಟಕ 13 ರನ್‌ಗೆ 1 ವಿಕೆಟ್‌ ಕಳೆದುಕೊಂಡಿದ್ದು ಇನ್ನೂ 568 ರನ್‌ಗಳ ಹಿನ್ನಡೆಯಲ್ಲಿದೆ. ಒತ್ತಡದೊಂದಿಗೆ ಕ್ರೀಸ್‌ಗಿಳಿದ ದೇವದತ್‌, ತಾವೆದುರಿಸಿದ ಮೊದಲ ಎಸೆತದಲ್ಲೇ ವಿಕೆಟ್‌ ಕಳೆದುಕೊಂಡರು. ಸೌರಾಷ್ಟ್ರ ನಾಯಕ ಜೈದೇವ್‌ ಉನಾದ್ಕತ್‌ ಕರ್ನಾಟಕಕ್ಕೆ ಆಘಾತ ನೀಡಿದರು. ಆರ್‌.ಸಮಥ್‌ರ್‍ (06) ಹಾಗೂ ರೋಹನ್‌ ಕದಂ (07) 3ನೇ ದಿನ ಬ್ಯಾಟಿಂಗ್‌ ಮುಂದುವರಿಸಲಿದ್ದಾರೆ.

ಪಂದ್ಯದಲ್ಲಿ ಇನ್ನೂ 2 ದಿನದ ಆಟ ಬಾಕಿ ಇದ್ದು, ರಾಜ್ಯ ತಂಡಕ್ಕೆ ಇನ್ನಿಂಗ್ಸ್‌ ಸೋಲು ಎದುರಾದರೆ ಅಚ್ಚರಿಯಿಲ್ಲ. ಕರ್ನಾಟಕದ ಮೊದಲ ಗುರಿ ಫಾಲೋ ಆನ್‌ ತಪ್ಪಿಸಿಕೊಳ್ಳುವುದಾಗಿದೆ. ಇದಕ್ಕಾಗಿ ತಂಡ 431 ರನ್‌ ಗಳಿಸಬೇಕಿದೆ.

ಭರ್ಜರಿ ಜೊತೆಯಾಟ: ಮೊದಲ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 296 ರನ್‌ ಗಳಿಸಿದ್ದ ಸೌರಾಷ್ಟ್ರ, 2ನೇ ದಿನವಾದ ಭಾನುವಾರ ಪ್ರಾಬಲ್ಯ ಮುಂದುವರಿಸಿತು. ಶೆಲ್ಡನ್‌ ಜಾಕ್ಸನ್‌ ಶತಕದ ಸಂಭವ್ರ ಆಚರಿಸಿದರು. ಭೋಜನ ವಿರಾಮಕ್ಕೂ ಮೊದಲೇ 400 ರನ್‌ ಗಡಿ ದಾಟಿದ ಸೌರಾಷ್ಟ್ರ ವಿಕೆಟ್‌ ಕಳೆದುಕೊಳ್ಳಲಿಲ್ಲ. 2ನೇ ಅವಧಿಯಲ್ಲಿ ಜಾಕ್ಸನ್‌ ವಿಕೆಟ್‌ ಒಪ್ಪಿಸಿದರು. 299 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 161 ರನ್‌ ಗಳಿಸಿ ಔಟಾದರು. ಇದರೊಂದಿಗೆ 3ನೇ ವಿಕೆಟ್‌ಗೆ ದಾಖಲಾದ 394 ರನ್‌ಗಳ ಜೊತೆಯಾಟ ಕೊನೆಗೊಂಡಿತು.

ಕರ್ನಾಟಕ ವಿರುದ್ಧ 1000 ರನ್‌ ಪೂರೈಸಿದ ಪೂಜಾರ, 390 ಎಸೆತಗಳಲ್ಲಿ 24 ಬೌಂಡರಿ, 1 ಸಿಕ್ಸರ್‌ನೊಂದಿಗೆ 248 ರನ್‌ ಗಳಿಸಿ ಔಟಾದರು. ರಣಜಿ ಟ್ರೋಫಿಯಲ್ಲಿ ಮತ್ತೊಂದು ತ್ರಿಶತಕ ಬಾರಿಸುವ ಅವಕಾಶವನ್ನು ಕೈಚೆಲ್ಲಿದರು.

ಅರ್ಪಿತ್‌ ವಾಸವಾಡ 35 ರನ್‌ ಗಳಿಸಿದರೆ, ಪ್ರೇರಕ್‌ ಮಂಕಡ್‌ 86 ಎಸೆತಗಳಲ್ಲಿ 86 ರನ್‌ ಸಿಡಿಸಿ ತಂಡದ ಮೊತ್ತವನ್ನು 500 ರನ್‌ ದಾಟಿಸಿದರು. ಬೃಹತ್‌ ಮೊತ್ತ ದಾಖಲಿಸಿ ಆತಿಥೇಯ ತಂಡ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಕರ್ನಾಟಕದ ಪರ ಸ್ಪಿನ್ನರ್‌ಗಳಾದ ಸುಚಿತ್‌, ಪವನ್‌ ದೇಶಪಾಂಡೆ ಹಾಗೂ ಪ್ರವೀಣ್‌ ದುಬೆ ತಲಾ 2 ವಿಕೆಟ್‌ ಕಬಳಿಸಿದರು.

ಸ್ಕೋರ್‌: ಸೌರಾಷ್ಟ್ರ 581/7 ಡಿ.

(ಪೂಜಾರ 248, ಶೆಲ್ಡನ್‌ 161, ಪ್ರೇರಕ್‌ 86, ಪ್ರವೀಣ್‌ 2-80, ಪವನ್‌ 2-98, ಸುಚಿತ್‌ 2-129),

ಕರ್ನಾಟಕ 13/1