ರಣಜಿ ಟ್ರೋಫಿಯಲ್ಲಿ ತ್ರಿಪುರಾ ವಿರುದ್ಧ ಕರ್ನಾಟಕ ತಂಡ ಇನ್ನಿಂಗ್ಸ್ ಹಾಗೂ 116 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿ 7 ಅಂಕಗಳನ್ನು ಗಳಿಸಿದೆ. ಶ್ರೇಯಸ್ ಗೋಪಾಲ್ 5 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬೈ, ವಿದರ್ಭ ಮತ್ತು ಬೆಂಗಾಲ್ ತಂಡಗಳು ಸಹ ತಮ್ಮ ಪಂದ್ಯಗಳಲ್ಲಿ ಜಯಭೇರಿ ಬಾರಿಸಿವೆ.
ಮೈಸೂರು: ತ್ರಿಪುರ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ ನಿರೀಕ್ಷೆಯಂತೆಯೇ ಇನ್ನಿಂಗ್ಸ್ ಅಂತರದಲ್ಲಿ ಗೆದ್ದಿದ್ದು, 1 ಬೋನಸ್ ಸೇರಿ ಒಟ್ಟು 7 ಅಂಕ ಸಂಪಾದಿಸಿದೆ. ಈ ಮೂಲಕ ಎಲೈಟ್ ‘ಬಿ’ ಗುಂಪಿನಲ್ಲಿ 6 ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದೆ. ಮೊದಲೆರಡು ಪಂದ್ಯದಲ್ಲಿ ಕ್ರಮವಾಗಿ ಆಂಧ್ರ ಹಾಗೂ ಸೌರಾಷ್ಟ್ರ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿದ್ದ ರಾಜ್ಯ ಕೇವಲ 2 ಅಂಕ ಗಳಿಸಿತ್ತು. ಈಗ ನಿರ್ಣಾಯಕ ಪಂದ್ಯದಲ್ಲಿ ತ್ರಿಪುರಾ ವಿರುದ್ಧ ಇನ್ನಿಂಗ್ಸ್ ಹಾಗೂ 116 ರನ್ ಅಂತರದಲ್ಲಿ ಗೆದ್ದಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ತ್ರಿಪುರಾ 194 ರನ್ ಗಳಿಸಿ ಅಲೌಟಾಗಿತ್ತು. ಇದಕ್ಕೆ ಪ್ರತಿಯಾಗಿ ಕರ್ನಾಟಕ 9 ವಿಕೆಟ್ ನಷ್ಟದಲ್ಲಿ 490 ರನ್ ಗಳಿಸಿ ಡಿಕ್ಲೇರ್ ಘೋಷಿಸಿತ್ತು. 296 ರನ್ ಹಿನ್ನಡೆ ಅನುಭವಿಸಿದ್ದ ತ್ರಿಪುರಾ, 3ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 98 ರನ್ ಗಳಿಸಿತ್ತು. ಇನ್ನಿಂಗ್ಸ್ ಸೋಲು ತಪ್ಪಿಸಲು ಕೊನೆ ದಿನವಾದ ಗುರುವಾರ 198 ರನ್ ಗಳಿಸಬೇಕಿತ್ತು. ಆದರೆ ತಂಡ 180 ರನ್ ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ರಾಜ್ಯದ ಪರ ನಾಯಕ ಶ್ರೇಯಸ್ ಗೋಪಾಲ್ 5 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ರಾಜ್ಯ ತಂಡ 4ನೇ ಪಂದ್ಯದಲ್ಲಿ ನ.2ರಿಂದ ಅಸ್ಸಾಂ ವಿರುದ್ಧ ಸೆಣಸಾಡಲಿದೆ. ಆ ಪಂದ್ಯದಲ್ಲೂ ಕರ್ನಾಟಕ ಬೋನಸ್ ಅಂಕ ಪಡೆಯುವ ವಿಶ್ವಾಸದಲ್ಲಿದೆ.
ಸ್ಕೋರ್: ತ್ರಿಪುರಾ 194/10 ಮತ್ತು 180/10 (ಪೌಲ್ 50, ಶ್ರೇಯಸ್ 5-36, ವೈಶಾಕ್ 2-31, ಮನ್ವಂತ್ 2-42), ಕರ್ನಾಟಕ 490/9 ಡಿಕ್ಲೇರ್
ಮುಂಬೈಗೆ ಸತತ 3 ಪಂದ್ಯದಲ್ಲಿ ಬೋನಸ್
ಈ ಬಾರಿ ರಣಜಿಯಲ್ಲಿ ಮುಂಬೈ ತಂಡ ಸತತ 3ನೇ ಪಂದ್ಯದಲ್ಲೂ ಬೋನಸ್ ಅಂಕ ಸಂಪಾದಿಸಿದೆ. 3 ಪಂದ್ಯಗಳಲ್ಲಿ ತಂಡ ಒಟ್ಟು 21 ಅಂಕ ಕಲೆಹಾಕಿದ್ದು, ‘ಡಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗುರುವಾರ ತಂಡ ಹರ್ಯಾಣ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿತು. ತನುಶ್ ಕೋಟ್ಯನ್ ಜೀವನಶ್ರೇಷ್ಠ 8 ವಿಕೆಟ್ ಪಡೆದರು. ಬಳಿಕ ಗೆಲುವಿಗೆ 97 ರನ್ ಗುರಿ ಪಡೆದಿದ್ದ ತಂಡ 10.4 ಓವರ್‌ಗಳಲ್ಲೇ ಜಯಗಳಿಸಿತು.
ವಿದರ್ಭ, ಬೆಂಗಾಲ್‌ಗೆ ಹ್ಯಾಟ್ರಿಕ್ ಜಯದ ಸಿಹಿ
ವಿದರ್ಭ, ಬೆಂಗಾಲ್ ತಂಡಗಳು ಈ ಬಾರಿ ಹ್ಯಾಟ್ರಿಕ್ ಜಯಗಳಿಸಿವೆ. ಗೋವಾ ವಿರುದ್ಧ ವಿದರ್ಭ ಇನ್ನಿಂಗ್ಸ್ ಹಾಗೂ 27 ರನ್‌ಗಳಿಂದ ಗೆದ್ದರೆ, ಕೇರಳ ವಿರುದ್ಧ ಬೆಂಗಾಲ್ 287 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಇದೇ ವೇಳೆ ಅಸ್ಸಾಂ ವಿರುದ್ಧ ಸೌರಾಷ್ಟ್ರ ಇನ್ನಿಂಗ್ಸ್ ಹಾಗೂ 12 ರನ್‌ಗಳಿಂದ ಗೆದ್ದರೆ, ಪಂಜಾಬ್-ಹೈದರಾಬಾದ್, ಬರೋಡಾ-ಜಮ್ಮು ಮತ್ತು ಕಾಶ್ಮೀರ ಪಂದ್ಯಗಳು ಡ್ರಾಗೊಂಡವು.
ರಣಜಿ: ಅಸ್ಸಾಂ ವಿರುದ್ಧ ಪಂದ್ಯಕ್ಕೂ ಕರ್ನಾಟಕಕ್ಕೆ ಶ್ರೇಯಸ್ ನಾಯಕತ್ವ
ಬೆಂಗಳೂರು: ರಣಜಿ ಟ್ರೋಫಿಯಲ್ಲಿ ನ.2ರಿಂದ ಗುವಹಾಟಿಯಲ್ಲಿ ನಡೆಯಲಿರುವ ಅಸ್ಸಾಂ ವಿರುದ್ಧ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟಗೊಂಡಿದೆ. ಕಳೆದೆರಡು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದ ಶ್ರೇಯಸ್ ಗೋಪಾಲ್ ಅಸ್ಸಾಂ ಪಂದ್ಯದಲ್ಲೂ ನಾಯಕತ್ವ ವಹಿಸಲಿದ್ದಾರೆ.
ತಂಡ: ಮಯಾಂಕ್ ಅಗರ್‌ವಾಲ್, ರೋಹನ್ ಪಾಟೀಲ್, ಅನೀಶ್ವರ್ ಗೌತಮ್, ಕರುಣ್ ನಾಯರ್, ನಿಕಿನ್ ಜೋಸ್, ಅನೀಶ್ ಕೆ.ವಿ., ಶ್ರೇಯಸ್ ಗೋಪಾಲ್(ನಾಯಕ), ಕೃತಿಕ್ ಕೃಷ್ಣ, ಶಿಖರ್ ಶೆಟ್ಟಿ, ಅಭಿಲಾಶ್ ಶೆಟ್ಟಿ, ಮನ್ವಂತ್ ಕುಮಾರ್, ವೈಶಾಕ್ ವಿ., ರಿತೇಶ್ ಭಟ್ಕಳ್, ಶ್ರೀಜಿತ್ ಕೆ.ಎಲ್., ವಿದ್ವತ್ ಕಾವೇರಪ್ಪ.






