BCCI U-19 women cricketer death ಬಿಸಿಸಿಐ ಅಂಡರ್-19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ 17 ವರ್ಷದ ನಂದಿನಿ ವಿಕಾರಾಬಾದ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. ಇಬ್ಬರು ಯುವಕರು ಕಿರುಕುಳ ನೀಡುತ್ತಿದ್ದರೆಂದು ಕುಟುಂಬಸ್ಥರು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಸಿಸಿಐ ಅಂಡರ್-19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ 17 ವರ್ಷದ ಭರವಸೆಯ ಆಟಗಾರ್ತಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಆಘಾತಕಾರಿ ಘಟನೆ ತೆಲಂಗಾಣದ ವಿಕಾರಾಬಾದ್ ಪಟ್ಟಣದ ಮಧು ಕಾಲೋನಿಯಲ್ಲಿ ನಡೆದಿದೆ. ಯುವತಿಯ ನಿಗೂಢ ಸಾವಿನಿಂದಾಗಿ ಕುಟುಂಬಸ್ಥರು, ತರಬೇತುದಾರರು, ಗ್ರಾಮಸ್ಥರು ಆಘಾತಕ್ಕೊಳಗಾಗಿದ್ದಾರೆ.

ನಂದಿನಿ (17) ಮೃತ ದುರ್ದಿವಿ. ಮಧು ಕಾಲೋನಿಯಲ್ಲಿ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದ ನಂದಿನಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆಯಾಗಿದೆ. ಇತ್ತೀಚೆಗಷ್ಟೇ ಬಿಸಿಸಿಐ ಅಂಡರ್‌-19 ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿ ಖುಷಿಯಲ್ಲಿದ್ದ ನಂದಿನಿ, ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಳು. ಅಲ್ಲದೆ ಬಿಸಿಸಿಐ ಅಂಡರ್‌-19 ತಂಡದಲ್ಲಿ ಭರವಸೆಯ ಆಟಗಾರ್ತಿಯಾಗಿದ್ದಳು.

ಮೂಲತಃ ಯಲಾಲ್ ಮಂಡಲದ ಸಂಗಾಯಪಲ್ಲಿ ಗ್ರಾಮದ ನಿವಾಸಿಯಾಗಿದ್ದ ನಂದಿನಿ ತನ್ನ ವಿದ್ಯಾಭ್ಯಾಸದ ಜೊತೆ ಜೊತೆಗೆ ಕ್ರಿಕೆಟ್ ತರಬೇತಿ ಪಡೆಯಲು ವಿಕಾರಾಬಾದ್‌ನಲ್ಲಿರುವ ತಾಯಿಯ ಕಡೆಯ ಮಾವನ ಮನೆಯಲ್ಲಿ ಅಜ್ಜಿಯೊಂದಿಗೆ ವಾಸವಾಗಿದ್ದಳು. ಬಿಸಿಸಿಐ ಅಂಡರ್ 19 ತಂಡಕ್ಕೆ ಆಯ್ಕೆಯಾಗುವುದರೊಂದಿಗೆ ನಂದಿನಿ ಜಿಲ್ಲೆಗೆ ಹೆಮ್ಮೆ ಎನಿಸಿದ್ದಳು. ಆದರೆ ಇದೀಗ ಯುವತಿ ಹಠಾತ್ ಸಾವಿನಿಂದಾಗಿ ಎಲ್ಲರಿಗೂ ಆಘಾತ ಮೂಡಿಸಿದೆ.

ಮಗಳ ಸಾವಿಗೆ ನ್ಯಾಯ ಸಿಗಬೇಕು: ಕುಟುಂಬಸ್ಥರು ಪ್ರತಿಭಟನೆ

ನಂದಿನಿ ಸಾವಿಗೆ ನ್ಯಾಯ ಒದಗಿಸುವಂತೆ ಕುಟುಂಬಸ್ಥರು ವಿಕಾರಾಬಾದ್‌ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕುಟುಂಬಸ್ಥರು ಆರೋಪಿಸುವಂತೆ ಇಬ್ಬರು ಯುವಕರು ನಂದಿನಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ನಂದಿನಿ ಸಾವಿಗೆ ಆ ಯುವಕರೇ ಕಾರಣ ಎಂದು ಆರೋಪಿಸಿದ್ದಾರೆ.

ನಂದಿನಿಗೆ ಅನಿಲ್ ಮತ್ತು ಕೃಷ್ಣ ಎಂಬ ಇಬ್ಬರು ಯುವಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಅನಿಲ್ ಕಳೆದ ಕೆಲವು ದಿನಗಳಿಂದ ಪ್ರೀತಿಯ ಹೆಸರಲ್ಲಿ ನಂದಿನಿಯ ಹಿಂದೆ ಬಿದ್ದು ಕಾಡುತ್ತಿದ್ದ, ನಂದಿನಿ ನಿರಾಕರಿಸಿದರು ತೊಂದರೆ ಕೊಡುತ್ತಿದ್ದ, ಇನ್ನು ಇದರಲ್ಲಿ ಕೃಷ್ಣ ಎಂಬುವವನು ಅನಿಲ್‌ಗೆ ಸಹಾಯ ಮಾಡುತ್ತಿದ್ದ, ಈ ಇಬ್ಬರಿಂದಲೇ ನಂದಿನಿ ನೊಂದಿದ್ದಳು, ನಂದಿನಿ ಸಾವಿಗೆ ಇವರೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

ಆರೋಪಿಗಳನ್ನ ಕೂಡಲೇ ಬಂಧಿಸಿ, ಕುಟುಂಬಸ್ಥರು ಒತ್ತಾಯ

ನಂದಿನಿ ಸಾವಿಗೆ ಕಾರಣರಾದ ಆ ಇಬ್ಬರು ಯುವಕರನ್ನು ಕೂಡಲೇ ಬಂಧಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರಲ್ಲದೆ, ಸೂಕ್ತ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಇನ್ನು ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ ವಿಕಾರಾಬಾದ್ ಸರ್ಕಲ್ ಇನ್‌ಸ್ಪೆಕ್ಟರ್ ರಘು, 'ಬೆಳಗಿನ ಜಾವ ಸುಮಾರು 9 ಗಂಟೆಗೆ ಯುವತಿಯ ಸಾವಿನ ಬಗ್ಗೆ ನಮಗೆ ಮಾಹಿತಿ ಬಂತು. ಮಾಹಿತಿ ಬಂದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದೆವು. ಪ್ರಾಥಮಿಕ ಮಾಹಿತಿ ಪ್ರಕಾರ ಹೇಳುವುದಾದರೆ ನಂದಿನಿ ಆತ್ಮ೧ತ್ಯೆ ಮಾಡಿಕೊಂಡಿರುವ ಅನುಮಾನವಿದೆ. ಈ ಸಂಬಂಧ ನಂದಿನಿ ತಂದೆ ದೂರು ನೀಡಿದ್ದು, ಆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಮೊಬೈಲ್ ಫೋನ್ ಎಫ್‌ಎಸ್‌ಎಲ್‌ ಪರೀಕ್ಷೆಗೆ ರವಾನೆ

ನಂದಿನಿ ಬಳಸುತ್ತಿದ್ದ ಮೊಬೈಲ್ ಫೋನ್ ಪೊಲೀಸರು ವಶಕ್ಕೆ ಪಡೆದು ಹೆಚ್ಚಿನ ಮಾಹಿತಿಗಾಗಿ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಆಕೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಯಾರಾದರೂ ಕಿರುಕುಳ ನೀಡುತ್ತಿದ್ದರೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ನಂದಿನಿಯ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್ ಅಕೌಂಟ್‌ಗಳನ್ನು ಪರಿಶೀಲಿಸಿ ಅದರಿಂದ ಸಿಗುವ ಮಾಹಿತಿ ಆಧಾರದ ಮೇಲೆ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. ಸದ್ಯ ಮೊಬೈಲ್ ಫೋನ್ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದ್ದು, ವರದಿ ಬಂದ ಬಳಿಕ ತನಿಖೆ ಮುಂದುವರಿಯುತ್ತದೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಹಸ್ತಾಂತರ

ಇಂದು ಬೆಳಗ್ಗೆ ನಂದಿನಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಯಲಿದ್ದು ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಯುವತಿ ನಂದಿನಿಯ ಸಾವಿಗೆ ಕಿರುಕುಳವೇ? ಬೆದರಿಕೆಯೇ? ವೈಯಕ್ತಿಕ ಕಾರಣಗಳೇ? ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.