ರಣಜಿ ಟ್ರೋಫಿ ಫೈನಲ್‌ನಲ್ಲಿ ವಿದರ್ಭ, ಕೇರಳ ವಿರುದ್ಧ ಮೊದಲ ದಿನ 4 ವಿಕೆಟ್‌ಗೆ 254 ರನ್ ಗಳಿಸಿತು. ಆರಂಭಿಕ ಆಘಾತದ ನಂತರ ದಾನಿಶ್ ಮಲೇವಾರ್ (138*) ಮತ್ತು ಕರುಣ್ ನಾಯರ್ (86) ಜೊತೆಯಾಟ ತಂಡಕ್ಕೆ ನೆರವಾಯಿತು. ಕರುಣ್ ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8000 ರನ್ ಪೂರೈಸಿದರು. 

ನಾಗ್ಪುರ: 3ನೇ ಸಲ ರಣಜಿ ಟ್ರೋಫಿ ಗೆಲ್ಲುವ ಕಾತರದಲ್ಲಿರುವ ವಿದರ್ಭ ತಂಡ ಈ ಬಾರಿ ಟೂರ್ನಿಯ ಫೈನಲ್‌ನಲ್ಲಿ ಆರಂಭಿಕ ಆಘಾತದಿಂದ ಚೇತರಿಸಿ, ಉತ್ತಮ ಮೊತ್ತ ಕಲೆಹಾಕಿದೆ. ಕೇರಳ ವಿರುದ್ಧ ಪಂದ್ಯದಲ್ಲಿ ಮೊದಲ ದಿನದಂತ್ಯಕ್ಕೆ ವಿದರ್ಭ 4 ವಿಕೆಟ್‌ಗೆ 254 ರನ್‌ ಗಳಿಸಿದೆ. ತಂಡ 2ನೇ ದಿನ ಮತ್ತಷ್ಟು ರನ್‌ ಗಳಿಸುವ ನಿರೀಕ್ಷೆಯಲ್ಲಿದೆ.

ಟಾಸ್‌ ಗೆದ್ದ ಕೇರಳ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಕೇರಳದ ಈ ನಿರ್ಧಾರ ತಪ್ಪಾಗಲಿಲ್ಲ. ಕೇವಲ 24 ರನ್‌ ಗಳಿಸುವಷ್ಟರಲ್ಲೇ ವಿದರ್ಭ 3 ಪ್ರಮುಖ ಬ್ಯಾಟರ್‌ಗಳನ್ನು ಕಳೆದುಕೊಂಡಿತು. ಪಾರ್ಥ್ ರೇಖಡೆ ಸೊನ್ನೆಗೆ ಔಟಾದರೆ, ಧ್ರುವ್‌ ಶೋರೆ 16, ದರ್ಶನ್‌ ನಾಲ್ಕಂಡೆ 1 ರನ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ 4ನೇ ವಿಕೆಟ್‌ಗೆ ದಾನಿಶ್‌ ಮಲೇವಾರ್‌ ಹಾಗೂ ಕರುಣ್‌ ನಾಯರ್‌ ಅಮೋಘ 215 ರನ್‌ ಜೊತೆಯಾಟವಾಡಿ ತಂಡಕ್ಕೆ ಆಸರೆಯಾದರು. ದಿನದಾಟದ ಕೊನೆಯಲ್ಲಿ ಕರುಣ್‌(86 ರನ್‌) ರನೌಟ್‌ ಮೂಲಕ ವಿಕೆಟ್‌ ಒಪ್ಪಿಸಿದರೆ, ದಾನಿಶ್‌ 259 ಎಸೆತಗಳಲ್ಲಿ 14 ಬೌಂಡರಿ, 2 ಸಿಕ್ಸರ್‌ನೊಂದಿಗೆ 138 ರನ್‌ ಸಿಡಿಸಿ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಕೇರಳ ಪರ ನಿದೀಶ್‌ 2 ವಿಕೆಟ್‌ ಪಡೆದರು.

ಇದನ್ನೂ ಓದಿ: ಪಾಕ್ ತಂಡಕ್ಕೆ ಧೋನಿ ನಾಯಕನಾದರೂ ಸಾಧ್ಯವಿಲ್ಲ: ಸನಾ ಮೀರ್ ಕಿಡಿ

ಕರುಣ್‌ 8000 ರನ್‌

ಕರ್ನಾಟಕದ ಮಾಜಿ ಆಟಗಾರ ಕರುಣ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8000 ರನ್‌ ಪೂರ್ಣಗೊಳಿಸಿದರು. ಅವರು 114ನೇ ಪಂದ್ಯ ಆಡುತ್ತಿದ್ದಾರೆ. ಈ ಬಾರಿ ಟೂರ್ನಿಯಲ್ಲಿ ಅವರು 15 ಇನ್ನಿಂಗ್ಸ್‌ಗಳಲ್ಲಿ 650ಕ್ಕೂ ಹೆಚ್ಚು ರನ್‌ ಗಳಿಸಿದ್ದಾರೆ. 3 ಶತಕವನ್ನೂ ಬಾರಿಸಿದ್ದಾರೆ.

WPL 2025: ಯುಪಿ ವಿರುದ್ಧ ಮುಂಬೈ ತಂಡಕ್ಕೆ 9 ವಿಕೆಟ್‌ ಜಯ

ಬೆಂಗಳೂರು: ಈ ಬಾರಿ ಡಬ್ಲ್ಯುಪಿಎಲ್‌ನಲ್ಲಿ ಮಾಜಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ 3ನೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬುಧವಾರ ಯುಪಿ ವಾರಿಯರ್ಸ್‌ ವಿರುದ್ಧ ಮುಂಬೈ 9 ವಿಕೆಟ್‌ ಜಯಭೇರಿ ಬಾರಿಸಿತು.

ಇದನ್ನೂ ಓದಿ: ರಣಜಿ ಟ್ರೋಫಿ ಫೈನಲ್: ವಿದರ್ಭ ಎದುರು ಟಾಸ್ ಗೆದ್ದ ಕೇರಳ ಬೌಲಿಂಗ್ ಆಯ್ಕೆ!

ಮೊದಲು ಬ್ಯಾಟ್‌ ಮಾಡಿದ ಯುಪಿ 9 ವಿಕೆಟ್‌ಗೆ 142 ರನ್‌ ಗಳಿಸಿತು. ಗ್ರೇಸ್‌ ಹ್ಯಾರಿಸ್‌ 45, ವೃಂದಾ ದಿನೇಶ್‌ 33 ರನ್‌ ಸಿಡಿಸಿದರು. ಮುಂಬೈ ಪರ ಶೀವರ್‌ ಬ್ರಂಟ್‌ 3 ವಿಕೆಟ್‌ ಕಿತ್ತರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮುಂಬೈ ತಂಡ 17 ಓವರ್‌ಗಲ್ಲೇ ಗೆಲುವು ತನ್ನದಾಗಿಸಿಕೊಂಡಿತು. ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್‌ 50 ಎಸೆತಗಳಲ್ಲಿ 07 ಬೌಂಡರಿ, 02 ಸಿಕ್ಸರ್‌ಗಳೊಂದಿಗೆ 59 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರೆ, ಶೀವರ್‌ ಬ್ರಂಟ್‌ 44 ಎಸೆತಗಳಲ್ಲಿ 13 ಬೌಂಡರಿಗಳೊಂದಿಗೆ ಅಜೇಯ 75 ರನ್‌ ಸಿಡಿಸಿ ತಂಡವನ್ನು ಗೆಲ್ಲಿಸಿದರು.