ಕೋಲ್ಕತಾ(ಫೆ.29): 2019-20ರ ಸಾಲಿನ ರಣಜಿ ಟ್ರೋಫಿಯ ಸೆಮಿಫೈನಲ್‌ ಹಂತ ಶನಿವಾರದಿಂದ ಆರಂಭಗೊಳ್ಳಲಿದ್ದು, ಕರ್ನಾಟಕ ತಂಡ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಬಂಗಾಳ ವಿರುದ್ಧ ಸೆಣಸಲಿದೆ. ಕಳೆದ ಸಾಲಿನಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಕರ್ನಾಟಕ, ಈ ಬಾರಿ ಚಾಂಪಿಯನ್‌ ಆಗಲು ಕಾತರಿಸುತ್ತಿದ್ದು ಟೂರ್ನಿಯಲ್ಲಿ ಈ ವರೆಗೂ ಒಂದೂ ಸೋಲನ್ನು ಕಾಣದೆ ಅಜೇಯ ತಂಡವಾಗಿ ಉಳಿದುಕೊಂಡಿದೆ.

ಗುಂಪು ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, ಇನ್ನುಳಿದ 4 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದ ಕರ್ನಾಟಕ ಎಲೈಟ್‌ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ ಹಂತಕ್ಕೇರಿತ್ತು. ಎಂಟರ ಘಟ್ಟದ ಪಂದ್ಯದಲ್ಲಿ ಕರ್ನಾಟಕ, ಜಮ್ಮು ಕಾಶ್ಮೀರ ವಿರುದ್ಧ 167 ರನ್‌ಗಳ ಗೆಲುವು ಸಾಧಿಸಿ ಸೆಮಿಫೈನಲ್‌ ಹಂತ ಪ್ರವೇಶಿಸಿದೆ. ಜಮ್ಮುವಿನಲ್ಲಿ ನಡೆದಿದ್ದ ಕ್ವಾರ್ಟರ್‌ ಪಂದ್ಯದ ಮೊದಲ 2 ದಿನಗಳ ಆಟ ಬಹುತೇಕ ಮಳೆಗೆ ಬಲಿಯಾಗಿತ್ತು. ಒಂದೊಮ್ಮೆ ಪಂದ್ಯ ನಡೆಯದೇ ಇದ್ದಿದ್ದರೇ ಜಮ್ಮು-ಕಾಶ್ಮೀರ ಸೆಮೀಸ್‌ ಹಂತಕ್ಕೇರುವ ಸಾಧ್ಯತೆ ಇತ್ತು. ಏಕೆಂದರೆ ‘ಸಿ’ ಗುಂಪಿನಲ್ಲಿ ಜಮ್ಮು 39 ಅಂಕಗಳಿಂದ ಅಗ್ರಸ್ಥಾನಕ್ಕೇರಿತ್ತು. ಇದರ ಬಲದಿಂದಾಗಿ ಜಮ್ಮು ಸೆಮೀಸ್‌ಗೇರುವ ಸಾಧ್ಯತೆ ನಿಚ್ಚಳವಾಗಿತ್ತು.

ರಣಜಿ ಟ್ರೋಫಿ: ಸೆಮೀಸ್‌, ಫೈನಲ್‌ಗೆ ಡಿಆರ್‌ಎಸ್‌ ಬಳಕೆ!

ಆದರೆ 3ನೇ ದಿನದ ಆಟಕ್ಕೆ ಮಳೆ ಕೊಂಚ ವಿರಾಮ ನೀಡಿದ್ದರ ಪರಿಣಾಮ ಕರ್ನಾಟಕ ತಂಡ ನಿಟ್ಟುಸಿರು ಬಿಟ್ಟಿತು. 3 ದಿನದ ಆಟದಲ್ಲಿ ರಾಜ್ಯ ತಂಡದ ಆಟಗಾರರ ಮನಮೋಹಕ ಪ್ರದರ್ಶನದಿಂದ ಜಮ್ಮು-ಕಾಶ್ಮೀರವನ್ನು ಬಗ್ಗು ಬಡಿಯಲಾಯಿತು. ಬ್ಯಾಟಿಂಗ್‌, ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಅತ್ಯುತ್ತಮ ಆಟ ತೋರಿದ ಕರ್ನಾಟಕ ತಂಡ ಅರ್ಹ ಗೆಲುವು ದಾಖಲಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿತು.

ರಣಜಿ ಟ್ರೋಫಿ ಸೆಮೀಸ್‌ನಲ್ಲಿ ಕರ್ನಾಟಕ, ಬಂಗಾಳ ತಂಡವನ್ನು ಒಟ್ಟಾರೆ 5ನೇ ಬಾರಿ ಎದುರಿಸುತ್ತಿದೆ. ಈ ಹಿಂದೆ ನಡೆದ 4 ಮುಖಾಮುಖಿಯಲ್ಲಿ ಕರ್ನಾಟಕ ಒಮ್ಮೆ ಮಾತ್ರ ಗೆದ್ದಿದ್ದು, ಉಳಿದ 3 ಬಾರಿಯೂ ಸೋಲುಂಡಿದೆ. ತಾರಾ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌ ತಂಡ ಕೂಡಿಕೊಂಡಿರುವುದು ಬ್ಯಾಟಿಂಗ್‌ ಬಲ ಹೆಚ್ಚಿಸಲಿದೆ. ರಾಹುಲ್‌ ಕಣಕ್ಕಿಳಿಯುತ್ತಿರುವುದು ಇತರೆ ಆಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಶುಕ್ರವಾರ ನಡೆದ ಪೂರ್ವಭಾವಿ ಅಭ್ಯಾಸದಲ್ಲಿ ರಾಹುಲ್‌ ಕೂಡ ಬ್ಯಾಟಿಂಗ್‌ ಅಭ್ಯಾಸ ನಡೆಸಿದ್ದರಿಂತೆ ತಂಡದ ಆಟಗಾರರು ಆತ್ಮವಿಶ್ವಾಸ ಹೆಚ್ಚಾಗಿದೆ.

ರಣಜಿ ಟ್ರೋಫಿ: ಸೆಮೀಸ್ ಕಾದಾಟಕ್ಕೆ ಕೆ.ಎಲ್ ರಾಹುಲ್ ಬಲ

ದೇವದತ್‌ ಪಡಿಕ್ಕಲ್‌ (9 ಪಂದ್ಯ 583 ರನ್‌), ರಾಹುಲ್‌, ಆರ್‌.ಸಮರ್ಥ್ (8 ಪಂದ್ಯ 507 ರನ್‌), ಕೆ.ವಿ. ಸಿದ್ಧಾರ್ಥ್ (5 ಪಂದ್ಯ 317 ರನ್‌), ಕರುಣ್‌ (8 ಪಂದ್ಯ 357 ರನ್‌), ಬ್ಯಾಟಿಂಗ್‌ ಆಧಾರ ಎನಿಸಿದರೆ, ಕೆ.ಗೌತಮ್‌ (5 ಪಂದ್ಯ 231 ರನ್‌, 29 ವಿಕೆಟ್‌)ಆಲ್ರೌಂಡ್‌ ಪ್ರದರ್ಶನ ತಂಡಕ್ಕೆ ಅನಿವಾರ್ಯವೆನಿಸಿದೆ. ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್‌ (7 ಪಂದ್ಯ 27 ವಿಕೆಟ್‌) ವೇಗದ ಬೌಲಿಂಗ್‌ ಹೊಣೆ ಹೊರಲಿದ್ದು, ಸ್ಪಿನ್ನರ್‌ ಶ್ರೇಯಸ್‌ ಗೋಪಾಲ್‌ (8 ಪಂದ್ಯ 243 ರನ್‌) ಬ್ಯಾಟಿಂಗ್‌ನಲ್ಲಿ ತಕ್ಕಮಟ್ಟಿನ ಆಟದಿಂದ ಗಮನಸೆಳೆದಿದ್ದರೇ, ಬೌಲಿಂಗ್‌ ಲಯಕ್ಕೆ ಮರಳಲು ಕಾತರಿಸುತ್ತಿದ್ದಾರೆ.

ಇನ್ನು ಬಂಗಾಳ ತಂಡ ಕೂಡ ಪ್ರಬಲ ಆಟಗಾರರನ್ನು ಹೊಂದಿದೆ. ಅಭಿಮನ್ಯು ಈಶ್ವರನ್‌ ನಾಯಕತ್ವದಲ್ಲಿ ಬಂಗಾಳ ತಂಡ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಅನುಭವಿ ಬ್ಯಾಟ್ಸ್‌ಮನ್‌ ಮನೋಜ್‌ ತಿವಾರಿ (9 ಪಂದ್ಯ 651 ರನ್‌) ಫಾಮ್‌ರ್‍ನಲ್ಲಿದ್ದು ತಂಡದ ಬ್ಯಾಟಿಂಗ್‌ ಬಲ ಹೆಚ್ಚಿಸಿದ್ದಾರೆ. ಉಳಿದಂತೆ ಮಜುಂಮ್ದಾರ್‌, ಶಬಾಜ್‌ ಅಹ್ಮದ್‌ ನಿರ್ಣಾಯಕ ಹಂತದಲ್ಲಿ ತಂಡದ ಬ್ಯಾಟಿಂಗ್‌ಗೆ ನೆರವಾಗುವ ಸಾಮರ್ಥ್ಯ ಹೊಂದಿದ್ದಾರೆ. ಎಡಗೈ ಸ್ಪಿನ್ನರ್‌ ಶಬಾಜ್‌ ನದೀಮ್‌ ಈ ಋುತುವಿನಲ್ಲಿ 30 ವಿಕೆಟ್‌ ಉರುಳಿಸಿದ್ದಾರೆ. ಜೊತೆಯಲ್ಲಿ ಯುವ ವೇಗಿ ಇಶಾನ್‌ ಪೊರೆಲ್‌ ಮಾರಕ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾಗಿದ್ದು ಕರ್ನಾಟಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಉತ್ಸಾಹದಲ್ಲಿದ್ದಾರೆ.

ಮೊದಲ ಬಾರಿಗೆ ಡಿಆರ್‌ಎಸ್‌

ಇದೇ ಮೊದಲ ಬಾರಿಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಡಿಆರ್‌ಎಸ್‌ ವ್ಯವಸ್ಥೆ ಅಳವಡಿಸಲಾಗುತ್ತಿದೆ. ರಣಜಿ ಪಂದ್ಯದಲ್ಲಿ ಡಿಆರ್‌ಎಸ್‌ ಪದ್ಧತಿ ಬಳಕೆ ಮಾಡಲಾಗುತ್ತಿದ್ದು, ಸಹಜವಾಗಿಯೇ ಕುತೂಹಲ ಮೂಡಿಸಿದೆ. ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳಲ್ಲಿ ಡಿಆರ್‌ಎಸ್‌ ಬಳಕೆಗೆ ಬಿಸಿಸಿಐ ಈಗಾಗಲೇ ಗ್ರೀನ್‌ಸಿಗ್ನಲ್‌ ನೀಡಿದೆ. ಕೋಲ್ಕತಾದ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ಕರ್ನಾಟಕ ಮತ್ತು ಪಶ್ವಿಮ ಬಂಗಾಳ ನಡುವಿನ ರಣಜಿ ಸೆಮಿಫೈನಲ್‌ ಹಾಗೂ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಸೌರಾಷ್ಟ್ರ ಮತ್ತು ಗುಜರಾತ್‌ ನಡುವಿನ ಸೆಮಿಫೈನಲ್‌ ಪಂದ್ಯಗಳಲ್ಲಿ ಡಿಆರ್‌ಎಸ್‌ ಬಳಕೆಗೆ ಅವಕಾಶ ಮಾಡಿಕೊಡಲಾಗಿದೆ.

ಸೌರಾಷ್ಟ್ರಗೆ ಗುಜರಾತ್‌ ಸವಾಲು

ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಕಳೆದ ಋುತುವಿನ ರನ್ನರ್‌ ಅಪ್‌ ಸೌರಾಷ್ಟ್ರ ತಂಡ, ಗುಜರಾತ್‌ ತಂಡದ ವಿರುದ್ಧ ಸೆಣಸಲು ಸಜ್ಜಾಗಿದೆ. ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಟೂರ್ನಿಯುದ್ದಕ್ಕೂ ಅತ್ಯದ್ಭುತ ಪ್ರದರ್ಶನ ತೋರಿರುವ ಗುಜರಾತ್‌ ತಂಡ, ಸೌರಾಷ್ಟ್ರ ಎದುರು ಮತ್ತೊಂದು ಗೆಲುವು ಪಡೆದು ಫೈನಲ್‌ಗೇರುವ ಉತ್ಸಾಹದಲ್ಲಿ ಕಣಕ್ಕಿಳಿಯುತ್ತಿದೆ. ಇನ್ನೊಂದೆಡೆ ತವರಿನ ಲಾಭ ಪಡೆದಿರುವ ಸೌರಾಷ್ಟ್ರ ತಂಡ ಕೂಟ ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನದಿಂದ ಗಮನಸೆಳೆದಿದೆ. ನಾಯಕ ಪಾರ್ಥೀವ್‌ ಪಟೇಲ್‌, ಆರಂಭಿಕ ಪ್ರಿಯಾಂಕ್‌ ಪಾಂಚಲ್‌, ಚಿರಾಗ್‌ ಗಾಂಧಿ ಮೇಲೆ ಗುಜರಾತ್‌ ಹೆಚ್ಚು ಅವಲಂಬಿತವಾಗಿದೆ. ಇನ್ನು ಸೌರಾಷ್ಟ್ರ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡರಲ್ಲೂ ಪ್ರಬಲ ಆಟಗಾರರನ್ನು ಹೊಂದಿದೆ. ನಾಯಕ ಜೈದೇವ್‌ ಉನಾದ್ಕತ್‌, ಧರ್ಮೇಂದ್ರ ಜಡೇಜಾ ಬೌಲಿಂಗ್‌ನಲ್ಲಿ ನೆರವಾದರೆ, ಬ್ಯಾಟಿಂಗ್‌ನಲ್ಲಿ ಶೆಲ್ಡನ್‌ ಜಾಕ್ಸನ್‌ (680 ರನ್‌), ಅರ್ಪಿತ್‌ ವಾಸವಾಡ (515 ರನ್‌) ತಂಡದ ಬಲ ಹೆಚ್ಚಿಸಿದ್ದಾರೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್‌ಸ್ಪೋಟ್ಸ್‌ರ್‍ ನೆಟ್‌ವರ್ಕ್