ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ, ಅಕ್ಷರ್ ಪಟೇಲ್ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಿಸಿದರು. ಹ್ಯಾರಿ ಬ್ರೂಕ್ ವಿಕೆಟ್ ಪಡೆಯಲು 24 ಮೀಟರ್ ಓಡಿ ಹಿಡಿದ ಕ್ಯಾಚ್ ಭಾರತದ ಗೆಲುವಿಗೆ ಕಾರಣವಾಯಿತು. ಇದಕ್ಕೂ ಮುನ್ನ ವರ್ಲ್ಡ್ ಕಪ್ ಟರ್ನಿಂಗ್ ಪಾಯಿಂಟ್ ಕ್ಯಾಚ್‌ಗಳು ಇಲ್ಲಿವೆ ನೋಡಿ.

ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಕೆಲವು ಕ್ಯಾಚ್‌ಗಳನ್ನು ಯಾವತ್ತೂ ಮರೆಯೋಕಾಗಲ್ಲ. 1983ರ ವಿಶ್ವಕಪ್ ಫೈನಲ್‌ನಲ್ಲಿ ವಿವ್ ರಿಚರ್ಡ್ಸ್ ವಿಕೆಟ್ ಪಡೆಯಲು ಕಪಿಲ್ ದೇವ್ ಹಿಂದಕ್ಕೆ ಓಡಿ ಹಿಡಿದ ಕ್ಯಾಚ್ ನೆನಪಿದೆಯಾ? ಹಾಗೆಯೇ, 2007ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಶ್ರೀಶಾಂತ್ ಹಿಡಿದ ಆ ಒಂದು ಕ್ಯಾಚ್. ಇತ್ತೀಚೆಗೆ ಕೆನಿಂಗ್ಟನ್ ಓವಲ್‌ನಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಕ್ಯಾಚ್ ಕೂಡ ರೋಹಿತ್ ಶರ್ಮಾಗೆ ಕೈತಪ್ಪಿ ಹೋಗುತ್ತಿದ್ದ ಕಿರೀಟವನ್ನು ವಾಪಸ್ ತಂದುಕೊಟ್ಟಿತ್ತು. ಇವೆಲ್ಲವೂ ಪಂದ್ಯದ ದಿಕ್ಕನ್ನೇ ಬದಲಿಸಿದ ಕ್ಷಣಗಳು. ಈ ಐಕಾನಿಕ್ ಕ್ಯಾಚ್‌ಗಳ ಸಾಲಿಗೆ ಈಗ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ಎರಡು ಕ್ಯಾಚ್‌ಗಳು ಸೇರಿಕೊಂಡಿವೆ.

ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್, ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ಜೊತೆಗೆ ಅಕ್ಷರ್ ಪಟೇಲ್ ಅವರ ಈ ಎರಡು ಕ್ಯಾಚ್‌ಗಳು ಪಂದ್ಯದ ಗತಿಯನ್ನೇ ಬದಲಿಸಿದವು. ಇದು ಅಕ್ಷರ್ ಪಟೇಲ್ ಅವರ 'ಅಬ್ಸಲ್ಯೂಟ್ ಬ್ರಿಲಿಯನ್ಸ್' (Absolute Brilliance).

24 ಮೀಟರ್ ಓಡಿ ಹಿಡಿದ ಅದ್ಭುತ ಕ್ಯಾಚ್:

ಮೊದಲ ಘಟನೆ ನಡೆದಿದ್ದು ಪಂದ್ಯದ ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ. ಇಂಗ್ಲೆಂಡ್ 254 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿತ್ತು. ಫಿಲ್ ಸಾಲ್ಟ್ ಆಗಲೇ ಔಟಾಗಿದ್ದರು. ಕ್ರೀಸ್‌ನಲ್ಲಿದ್ದದ್ದು ಫಾರ್ಮ್‌ನಲ್ಲಿ ಇಲ್ಲದ ಜೋಸ್ ಬಟ್ಲರ್. ಹೀಗಾಗಿ ಇಂಗ್ಲೆಂಡ್‌ಗೆ ಹ್ಯಾರಿ ಬ್ರೂಕ್ ಅವರ ಒಂದು ಸ್ಪೆಷಲ್ ಇನ್ನಿಂಗ್ಸ್ ಬೇಕಿತ್ತು. ಆದರೆ, ಬುಮ್ರಾ ಹಾಕಿದ ಸ್ಲೋ ಬಾಲ್ ಬ್ರೂಕ್ ಅವರ ಲೆಕ್ಕಾಚಾರವನ್ನೆಲ್ಲಾ ತಲೆಕೆಳಗು ಮಾಡಿತು. ಅವರು ಹೊಡೆದ ಚೆಂಡು ಕವರ್ಸ್‌ನತ್ತ ಮೇಲಕ್ಕೆ ಚಿಮ್ಮಿತು.

ಪಾಯಿಂಟ್‌ನಲ್ಲಿದ್ದ ಅಕ್ಷರ್ ಪಟೇಲ್, ಚೆಂಡಿನ ಮೇಲಿಂದ ಕಣ್ಣು ತೆಗೆಯದೆ ಹಿಂದಕ್ಕೆ ಓಡಲು ಶುರುಮಾಡಿದರು. ಒಂದಲ್ಲ, ಎರಡಲ್ಲ, ಬರೋಬ್ಬರಿ 24 ಮೀಟರ್ ಓಡಿದರು! ಇಂಥ ಕ್ಯಾಚ್‌ಗಳನ್ನು ಹಿಡಿಯಬೇಕಾದರೆ ಫೀಲ್ಡರ್‌ನ ಜಡ್ಜ್‌ಮೆಂಟ್ ಮತ್ತು ಬಾಡಿ ಬ್ಯಾಲೆನ್ಸ್ ಎರಡೂ ಪರ್ಫೆಕ್ಟ್ ಆಗಿರಬೇಕು. ಆಕಾಶದಿಂದ ಚೆಂಡು ಕೆಳಗೆ ಬರುವಷ್ಟರಲ್ಲಿ ಅಕ್ಷರ್ ಇವೆರಡನ್ನೂ ಸಾಧಿಸಿದ್ದರು. ಉಸಿರು ಬಿಗಿಹಿಡಿದು ನೋಡುತ್ತಿದ್ದ ಪ್ರೇಕ್ಷಕರ ಮುಂದೆ, ಅಕ್ಷರ್ ಡೈವ್ ಹೊಡೆದು ಕ್ಯಾಚ್ ಅನ್ನು ತಮ್ಮ ಕೈಗಳಲ್ಲಿ ಭದ್ರಪಡಿಸಿಕೊಂಡರು. ಇದನ್ನು ನೋಡಿದ ರವಿ ಶಾಸ್ತ್ರಿ 'ಅಬ್ಸಲ್ಯೂಟ್ ಬ್ಯೂಟಿ' (Absolute Beauty) ಎಂದು ಬಣ್ಣಿಸಿದರು.

ಗೇಮ್ ಅವೇರ್‌ನೆಸ್ ತೋರಿಸಿದ 'ಸ್ಕ್ರೀಮರ್' ಕ್ಯಾಚ್:

ಪಂದ್ಯ ರೋಚಕ ಹಂತ ತಲುಪಿದ್ದಾಗ ಅಕ್ಷರ್ ಎರಡನೇ ಬಾರಿ ಹೀರೋ ಆದರು. ಜೇಕಬ್ ಬೆಥೆಲ್ ಮತ್ತು ವಿಲ್ ಜಾಕ್ಸ್ ಜೋಡಿ ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ಆಸೆ ಚಿಗುರಿಸಿತ್ತು. ಈ ಜೋಡಿ 39 ಎಸೆತಗಳಲ್ಲಿ 77 ರನ್ ಗಳಿಸಿತ್ತು. ಅರ್ಷದೀಪ್ ಸಿಂಗ್, ಜಾಕ್ಸ್‌ಗೆ ವೈಡ್ ಯಾರ್ಕರ್‌ಗಳನ್ನು ಹಾಕಲು ಪ್ರಯತ್ನಿಸುತ್ತಿದ್ದರು. 14ನೇ ಓವರ್‌ನ ಕೊನೆಯ ಎಸೆತ. ಕೊನೆಗೂ ಒಂದು ಲೋ ಫುಲ್ ಟಾಸ್ ಎಸೆತಕ್ಕೆ ಜಾಕ್ಸ್ ಬ್ಯಾಟ್ ಬೀಸಿದರು. ಚೆಂಡು ಕ್ಷಣಮಾತ್ರದಲ್ಲಿ ಡೀಪ್ ಪಾಯಿಂಟ್‌ನತ್ತ ಗಾಳಿಯಲ್ಲಿ ಹಾರಿತು. ಆದರೆ ಬ್ರೂಕ್ ಹೊಡೆತದಂತೆ ಇದು ಹೆಚ್ಚು ಹೊತ್ತು ಗಾಳಿಯಲ್ಲಿರಲಿಲ್ಲ. ಡೀಪ್ ಕವರ್ ಪಾಯಿಂಟ್ ಮತ್ತು ಡೀಪ್ ಬ್ಯಾಕ್‌ವರ್ಡ್ ಪಾಯಿಂಟ್ ನಡುವೆ ಬೌಂಡರಿ ದಾಟುವುದು ಖಚಿತ ಎನಿಸಿತ್ತು. ಆಗಲೇ ನೋಡಿ, 'ಹಿಯರ್ ಕಮ್ಸ್ ಅಕ್ಷರ್ ಪಟೇಲ್ ಎಗೇನ್' (Here comes Axar Patel again). ಡೀಪ್ ಕವರ್‌ನಿಂದ ಫುಲ್ ಸ್ಪ್ರಿಂಟ್‌ನಲ್ಲಿ ಓಡಿಬಂದ ಅಕ್ಷರ್, ಬ್ಯಾಲೆನ್ಸ್ ಕಳೆದುಕೊಂಡರೂ ಚೆಂಡನ್ನು ಹಿಡಿದೇಬಿಟ್ಟರು.

ನಂತರ ಅಕ್ಷರ್ ತಮ್ಮ ಗೇಮ್ ಅವೇರ್‌ನೆಸ್ ಪ್ರದರ್ಶಿಸಿದರು. ಚೆಂಡು ಕೈಯಿಂದ ಜಾರಬಹುದು ಅಥವಾ ತಾನು ಬೌಂಡರಿ ಲೈನ್ ದಾಟಬಹುದು ಎಂದು ಅರಿತ ಅವರು, ಹತ್ತಿರದಲ್ಲೇ ಇದ್ದ ಶಿವಂ ದುಬೆ ಅವರ ಕೈಗೆ ಚೆಂಡನ್ನು ಸುರಕ್ಷಿತವಾಗಿ ಎಸೆದರು. ಇದೊಂದು 'ಸ್ಕ್ರೀಮರ್' ಕ್ಯಾಚ್ ಆಗಿತ್ತು. ಇಡೀ ಭಾರತ ತಂಡ ಅಕ್ಷರ್ ಬಳಿ ಓಡಿಬಂತು, ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಅಪ್ಪಿಕೊಂಡರು. ವಾಂಖೆಡೆ ಸ್ಟೇಡಿಯಂನ ಪ್ರೇಕ್ಷಕರು ಎದ್ದುನಿಂತು ಚಪ್ಪಾಳೆ ತಟ್ಟಿದರು. ಇದೇ ಪಂದ್ಯದ 'ಮೊಮೆಂಟ್ ಆಫ್ ದ ಮ್ಯಾಚ್'.

ಫೀಲ್ಡಿಂಗ್ ವೈಫಲ್ಯಕ್ಕೆ ಸಿಕ್ಕಿತು ಉತ್ತರ:

ಬೆಥೆಲ್-ಜಾಕ್ಸ್ ಜೊತೆಯಾಟ ಮುರಿದ ಆ ಕ್ಷಣವೇ ಭಾರತದ ಗೆಲುವಿನ ಸಾಧ್ಯತೆಗಳನ್ನು ಮತ್ತೆ ಹೆಚ್ಚಿಸಿತು. ಇಂಗ್ಲೆಂಡ್‌ಗೆ ಹ್ಯಾರಿ ಬ್ರೂಕ್ ಕೈಬಿಟ್ಟ ಸಂಜು ಅವರ ಕ್ಯಾಚ್ ಮುಳುವಾದರೆ, ಭಾರತದ ಗೆಲುವಿಗೆ ಅಕ್ಷರ್ ಹಿಡಿದ ಈ ಎರಡು ಅಸಾಮಾನ್ಯ ಕ್ಯಾಚ್‌ಗಳು ಕಾರಣವಾದವು. ಈ ಟೂರ್ನಿಯಲ್ಲಿ ಈ ಹಿಂದೆ 13 ಕ್ಯಾಚ್‌ಗಳನ್ನು ಕೈಬಿಟ್ಟು ಟೀಕೆಗೆ ಗುರಿಯಾಗಿದ್ದ ಭಾರತ ತಂಡ, ವಾಂಖೆಡೆಯಲ್ಲಿ ತನ್ನ ಫೀಲ್ಡಿಂಗ್‌ ವೈಫಲ್ಯವನ್ನು ಅದ್ಭುತವಾಗಿ ಸರಿಪಡಿಸಿಕೊಂಡಿತು. ಅಕ್ಷರ್ ಪಟೇಲ್ ಅವರ ಈ ಸಾಹಸ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ದೀರ್ಘಕಾಲ ಉಳಿಯಲಿದೆ.