ರಣಜಿ ಟ್ರೋಫಿ: ಕರ್ನಾಟಕಕ್ಕೆ ಪೂಜಾರ ಪಂಚ್!
ಕರ್ನಾಟಕ-ಸೌರಾಷ್ಟ್ರ ನಡುವಿನ ರಣಜಿ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಭರ್ಜರಿ ಶತಕದ ನೆರವಿನಿಂದ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಮೊದಲ ದಿನದಂತ್ಯಕ್ಕೆ ಸೌರಾಷ್ಟ್ರ 2 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ.
ರಾಜ್‌ಕೋಟ್(ಜ.12): ಭಾರತ ಟೆಸ್ಟ್ ತಂಡದ ಭರವಸೆಯ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ, ಕರ್ನಾಟಕ ವಿರುದ್ಧದ ‘ಬಿ’ ಗುಂಪಿನ ರಣಜಿ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ, ಪಂದ್ಯದ ಮೊದಲ ದಿನವೇ ಸೌರಾಷ್ಟ್ರ ಮೇಲುಗೈ ಸಾಧಿಸುವಂತೆ ಮಾಡಿದ್ದಾರೆ. ಶನಿವಾರ ಇಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌರಾಷ್ಟ್ರ, ಮೊದಲ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 296 ರನ್ ಗಳಿಸಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ದಾಖಲಿಸುವತ್ತ ಸಾಗಿದೆ.
ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ಟಾಸ್ ಗೆದ್ದ ಸೌರಾಷ್ಟ್ರ ಬ್ಯಾಟಿಂಗ್
ಆರಂಭಿಕರಾದ ಸ್ನೆಲ್ ಪಟೇಲ್ (16) ಹಾಗೂ ಹಾರ್ವಿಕ್ ದೇಸಾಯಿ (13) ಬೇಗನೆ ಔಟಾದರು. ಇವರಿಬ್ಬರಿಗೂ ಸ್ಪಿನ್ನರ್ ಜೆ.ಸುಚಿತ್ ಪೆವಿಲಿಯನ್ ದಾರಿ ತೋರಿಸಿದರು. ಅಭಿಮನ್ಯು ಮಿಥುನ್ ಹಾಗೂ ವಿ.ಕೌಶಿಕ್‌ರನ್ನು ಕೈಬಿಟ್ಟಿರುವ ಕಾರಣ, ನಾಯಕ ಶ್ರೇಯಸ್ ಗೋಪಾಲ್, ವೇಗಿ ರೋನಿತ್ ಮೋರೆ ಹೆಗಲ ಮೇಲೆ ಹೆಚ್ಚಿನ ಜವಾಬ್ದಾರಿ ಬಿತ್ತು. ಆದರೆ 3ನೇ ವಿಕೆಟ್‌ಗೆ ಜತೆಯಾದ ಚೇತೇಶ್ವರ್ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್, ಕರ್ನಾಟಕ ಬೌಲರ್‌ಗಳ ಬೆವರಿಳಿಸಿದರು.
ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಪೂಜಾರ, 238 ಎಸೆತಗಳಲ್ಲಿ 17 ಬೌಂಡರಿ, 1 ಸಿಕ್ಸರ್‌ನೊಂದಿಗೆ 162 ರನ್ ಗಳಿಸಿ ಅಜೇಯರಾಗಿ ಉಳಿದರೆ, 191 ಎಸೆತಗಳಲ್ಲಿ 99 ರನ್ ಗಳಿಸಿರುವ ಶೆಲ್ಡನ್ ಜಾಕ್ಸನ್ ಶತಕದ ಹೊಸ್ತಿಲಲ್ಲಿದ್ದಾರೆ.
ಪ್ರಥಮ ದರ್ಜೆಯಲ್ಲಿ ಪೂಜಾರ 50 ಶತಕ!
ಚೇತೇಶ್ವರ್ ಪೂಜಾರ ಶುಕ್ರವಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಭಾರತದ 9ನೇ ಬ್ಯಾಟ್ಸ್‌ಮನ್ ಎನ್ನುವ ಹಿರಿಮೆಗೆ ಪಾತ್ರರಾದರು. ಸುನಿಲ್ ಗವಾಸ್ಕರ್ (81), ಸಚಿನ್ ತೆಂಡುಲ್ಕರ್ (81), ರಾಹುಲ್ ದ್ರಾವಿಡ್ (68), ವಿಜಯ್ ಹಜಾರೆ (60), ವಾಸಿಂ ಜಾಫರ್ (57), ದಿಲೀವ್ ವೆಂಗ್‌ಸರ್ಕಾರ್ (55), ವಿವಿಎಸ್ ಲಕ್ಷ್ಮಣ್ (55), ಮೊಹಮದ್ ಅಜರುದ್ದೀನ್ (54) ಹಾಗೂ ಚೇತೇಶ್ವರ್ ಪೂಜಾರ (50) ಶತಕಗಳನ್ನು ಪೂರೈಸಿದ್ದಾರೆ.
ಪೂಜಾರ ಹಾಗೂ ಶೆಲ್ಡನ್ ನಡುವೆ ಮುರಿದ 3ನೇ ವಿಕೆಟ್‌ಗೆ 266 ರನ್ ಜೊತೆಯಾಟ ಮೂಡಿಬಂದಿದ್ದು, ಈ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿದ್ದರೆ ಕರ್ನಾಟಕ ಪಂದ್ಯ ಗೆಲ್ಲುವ ಆಸೆಯನ್ನು ಕೈಬಿಡಬೇಕಾಗುತ್ತದೆ.
ಸ್ಕೋರ್:
ಸೌರಾಷ್ಟ್ರ ಮೊದಲ ದಿನದಂತ್ಯಕ್ಕೆ 296/2
(ಪೂಜಾರ 162*, ಶೆಲ್ಡನ 99*, ಸುಚಿತ್ 2-85)