ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಜತೆ ಕಾಣಿಸಿಕೊಂಡ ಸಿನಿ ದಂತಕಥೆ ರಜನಿಕಾಂತ್..! ಏನ್ ಸಮಾಚಾರ?
ಜತೆಯಾಗಿ ಕಾಣಿಸಿಕೊಂಡ ರಜನಿಕಾಂತ್, ಕಪಿಲ್ ದೇವ್
ಲಾಲ್ ಸಲಾಂ ಸಿನಿಮಾದಲ್ಲಿ ದಿಗ್ಗಜರು ಒಟ್ಟಾಗಿ ನಟನೆ?
ಐಶ್ವರ್ಯ ರಜನಿಕಾಂತ್ ನಿರ್ದೇಶನದ ಸಿನಿಮಾ ಲಾಲ್ ಸಲಾಂ
ಬೆಂಗಳೂರು(ಮೇ.05): ಭಾರತಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಜತೆ ಭಾರತದ ಸಿನಿಮಾ ದಂತಕಥೆ ರಜನಿಕಾಂತ್ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂಬರುವ ತಮಿಳು ಸಿನಿಮಾ 'ಲಾಲ್ ಸಲಾಂ' ಚಿತ್ರೀಕರಣದ ಸಂದರ್ಭದಲ್ಲಿ ಕಪಿಲ್ ದೇವ್ ಅವರನ್ನು ಭೇಟಿಯಾಗಿರುವುದಾಗಿ ರಜನಿಕಾಂತ್ ಟ್ವೀಟ್ ಮಾಡಿ ಈ ವಿಚಾರವನ್ನು ತಿಳಿಸಿದ್ದಾರೆ.
ರಜನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾದಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಕಪಿಲ್ ದೇವ್ ಜತೆಗಿರುವ ಫೋಟೋವನ್ನು ಹಂಚಿಕೊಂಡಿರುವ ರಜನಿಕಾಂತ್, "ಒಳ್ಳೆಯ ಮಾನವೀಯ ಗುಣಗಳನ್ನು ಹೊಂದಿರುವ, ಎಲ್ಲರಿಂದಲೂ ಗೌರವಿಸಲ್ಪಡುವ ದಿಗ್ಗಜ ವ್ಯಕ್ತಿಯಾದ ಕಪಿಲ್ ದೇವ್ ಅವರನ್ನು ಭೇಟಿ ಮಾಡಲು ಸಿಕ್ಕಿದ್ದು ನನ್ನ ಪಾಲಿಗೆ ಗೌರವ ಹಾಗೂ ಸೌಭಾಗ್ಯವಾದ ಕ್ಷಣ. ಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಡುವ ಮೂಲಕ ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ ವ್ಯಕ್ತಿಯ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಭಾಗ್ಯ" ಎಂದು ರಜನಿಕಾಂತ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ರಜನಿಕಾಂತ್ ಹಂಚಿಕೊಂಡ ಈ ಫೋಟೋದಲ್ಲಿ, ದೇಶದ ಇಬ್ಬರು ದಿಗ್ಗಜರು ಸುದೀರ್ಘವಾಗಿ ಮಾತನಾಡುತ್ತಿರುವಂತೆ ಕಂಡು ಬಂದಿದೆ. ಈ ಫೋಟೋದಲ್ಲಿ ಕಪಿಲ್ ದೇವ್ ಬಿಳಿ ಬಣ್ಣದ ಪೋಲೋ ಟಿ ಶರ್ಟ್ ಧರಿಸಿದ್ದರೆ, ರಜನಿಕಾಂತ್ ನಟನೆಗೆ ಸಂಬಂಧಿಸಿದಂತೆ ಬಿಳಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
'ನನ್ನ ತಂದೆ ಕೊನೆಯುಸಿರೆಳೆದದ್ದು 18ಕ್ಕೆ': ಜೆರ್ಸಿ ನಂಬರ್ ಬಗ್ಗೆ ಮೊದಲ ಬಾರಿಗೆ ತುಟಿಬಿಚ್ಚಿದ ವಿರಾಟ್ ಕೊಹ್ಲಿ..!
ಇನ್ನು ಸಿನಿಮಾ ಬಗ್ಗೆ ಹೇಳುವುದಾದರೇ, ಲಾಲ್ ಸಲಾಂ ಸಿನಿಮಾದ ಮೂಲಕ ಐಶ್ವರ್ಯ ರಜನಿಕಾಂತ್ ಬರೋಬ್ಬರಿ 7 ವರ್ಷಗಳ ಬಳಿಕ ನಿರ್ದೇಶನಕ್ಕೆ ವಾಪಾಸ್ಸಾಗಿದ್ದಾರೆ. ಈ ಸಿನಿಮಾವು ಕ್ರಿಕೆಟ್ ಹಾಗೂ ಕಮ್ಯುನಿಸಂ ಕುರಿತಂತದ್ದಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ಈ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ. ಈ ಸಿನಿಮಾಗೆ ಸಂಗೀತ ದಿಗ್ಗಜ ಎ ಆರ್ ರೆಹಮಾನ್ ಮ್ಯೂಸಿಕ್ ನೀಡಿದ್ದಾರೆ.
ಕಪಿಲ್ ದೇವ್ ಭಾರತ ಕ್ರಿಕೆಟ್ ಕಂಡ ದಿಗ್ಗಜ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು 1983ರಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇದು ಭಾರತದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಹೊಸ ಟಾನಿಕ್ ಆಗಿ ಪರಿಣಮಿಸಿತ್ತು.