ಐಪಿಎಲ್ 2026ರ ಪ್ಲೇ ಆಫ್‌ಗೆ ಆರ್‌ಸಿಬಿ, ಗುಜರಾತ್, ಹೈದರಾಬಾದ್ ಮತ್ತು ರಾಜಸ್ಥಾನ ತಂಡಗಳು ಲಗ್ಗೆಯಿಟ್ಟಿವೆ. ಈ ಹಂತ ಪ್ರವೇಶಿಸಿದ ತಂಡಗಳಿಗೆ ಸಿಗುವ ನಗದು ಬಹುಮಾನದ ಮೊತ್ತ, ಹಾಗೂ 2008ರಿಂದ ಪ್ರೈಜ್ ಮನಿ ಹೇಗೆ ಹೆಚ್ಚಾಗಿದೆ ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನೀಡಲಾಗಿದೆ.

ಬೆಂಗಳೂರು: IPL 2026 ಟೂರ್ನಿಯು ಲೀಗ್ ಹಂತ ಮುಕ್ತಾಯವಾಗಿದ್ದು, ಇಂದಿನಿಂದ ಪ್ಲೇ ಆಫ್‌ ಪಂದ್ಯಗಳಿಗೆ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಟೈಟಾನ್ಸ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪ್ಲೇ ಆಫ್‌ಗೆ ಅಧಿಕೃತವಾಗಿ ಲಗ್ಗೆಯಿಟ್ಟಿವೆ. ಅಂದಹಾಗೆ ಐಪಿಎಲ್ ಪ್ಲೇ ಆಫ್‌ ಪ್ರವೇಶಿಸಿರುವ ತಂಡಗಳಿಗೆ ಬಿಸಿಸಿಐನಿಂದ ಎಷ್ಟು ನಗದು ಬಹುಮಾನ ಸಿಗಲಿದೆ ಎನ್ನುವ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿದೆ. ಬನ್ನಿ ನಾವಿಂದು ಆ ಇಂಟ್ರೆಸ್ಟಿಂಗ್ ಡೀಟೈಲ್ಸ್ ತಿಳಿಯೋಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಐಪಿಎಲ್ ಪ್ಲೇ ಆಫ್‌ ಪ್ರವೇಶಿಸಿರುವ ನಾಲ್ಕು ತಂಡಗಳಿಗೆ ಎಷ್ಟು ಸಿಗುತ್ತೆ?

ಐಪಿಎಲ್‌ನಲ್ಲಿ ಬಹುಮಾನ ಮೊತ್ತವನ್ನು ಟೂರ್ನಿಯ ಕೊನೆಯ ಭಾಗದಲ್ಲಿ ಘೋಷಣೆ ಮಾಡಲಾಗುತ್ತದೆ. 2025ರಲ್ಲಿ ನಡೆದ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆದ ತಂಡಕ್ಕೆ 20 ಕೋಟಿ ರುಪಾಯಿ ನಗದು ಬಹುಮಾನ ಸಿಕ್ಕಿತ್ತು. ಇನ್ನು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ 12.5 ಕೋಟಿ ರುಪಾಯಿ ನಗದು ಬಹುಮಾನ ಸಿಕ್ಕಿತ್ತು. ಇನ್ನು ಮೂರನೇ ಸ್ಥಾನ ಪಡೆದುಕೊಂಡ ತಂಡಕ್ಕೆ 7 ಕೋಟಿ ರುಪಾಯಿ ಹಾಗೂ ನಾಲ್ಕನೇ ಸ್ಥಾನ ಪಡೆದುಕೊಂಡ ತಂಡಕ್ಕೆ 6.5 ಕೋಟಿ ರುಪಾಯಿ ನಗದು ಬಹುಮಾನ ಸಿಕ್ಕಿತ್ತು. ಒಟ್ಟಾರೆ ಕಳೆದ ಬಾರಿ ಪ್ಲೇ ಆಫ್‌ ಪ್ರವೇಶಿಸಿದ ನಾಲ್ಕು ತಂಡಗಳು ಸುಮಾರು 47 ಕೋಟಿ ರುಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದವು. ಈ ಬಾರಿ ಕೂಡಾ ಬಹುತೇಕ ಇಷ್ಟೇ ಹಣವನ್ನು ಆರ್‌ಸಿಬಿ, ಗುಜರಾತ್, ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಪಡೆದುಕೊಳ್ಳಲಿವೆ.

ಮೊದಲ ಆವೃತ್ತಿಯ ಐಪಿಎಲ್‌ನಲ್ಲಿ ನಗದು ಬಹುಮಾನ ಎಷ್ಟಿತ್ತು?:

2008ರಲ್ಲಿ ಆರಂಭವಾದ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ರೈಜ್ ಮನಿ 4.8 ಕೋಟಿ ರುಪಾಯಿ ಇತ್ತು. ಇದಾದ ಮುಂದಿನ ಎರಡು ವರ್ಷಗಳ ಕಾಲ ಇದೇ ನಗದು ಬಹುಮಾನ ಚಾಲ್ತಿಯಲ್ಲಿತ್ತು. ಇದಾದ ಬಳಿಕ 2010ರಲ್ಲಿ ಈ ನಗದು ಬಹುಮಾನವನ್ನು 10 ಕೋಟಿ ರುಪಾಯಿಗೆ ಹೆಚ್ಚಿಸಲಾಯಿತು. ಇದಾದ ನಂತರ 2015ರಲ್ಲಿ ಮತ್ತೆ ನಗದು ಬಹುಮಾನ ಮೊತ್ತವನ್ನು ಹೆಚ್ಚಿಸಲಾಯಿತು. ಹೀಗೆ ಹಂತ ಹಂತವಾಗಿ ನಗದು ಬಹುಮಾನ ಮೊತ್ತವನ್ನು ಹೆಚ್ಚಿಸಿ ಇದೀಗ 20 ಕೋಟಿ ರುಪಾಯಿ ಸಮೀಪ ಬಂದು ನಿಂತಿದೆ.

2026ರ ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ:

ಮೇ 26 ಕ್ವಾಲಿಫೈಯರ್‌-1 ಆರ್‌ಸಿಬಿ-ಗುಜರಾತ್‌ ಧರ್ಮಶಾಲಾ

ಮೇ 27 ಎಲಿಮಿನೇಟರ್‌ ಸನ್‌ರೈಸರ್ಸ್‌-ರಾಯಲ್ಸ್‌ ಚಂಡೀಗಢ

ಮೇ 29 ಕ್ವಾಲಿಫೈಯರ್‌-2 ಕ್ವಾ.-1 ಸೋತ ತಂಡ-ಎಲಿಮಿನೇಟರ್‌ ಗೆದ್ದ ತಂಡ ಚಂಡೀಗಢ

ಮೇ 31 ಫೈನಲ್‌ ಕ್ವಾ-1 ಗೆದ್ದ ತಂಡ vs ಕ್ವಾ-2 ಗೆದ್ದ ತಂಡ ಅಹಮದಾಬಾದ್‌