18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಇಂದು ಗುಜರಾತ್ ಟೈಟನ್ಸ್ ವಿರುದ್ಧ ಆಡಲಿದ್ದಾರೆ. ಇದು ಅವರ 300ನೇ ಟಿ20 ಪಂದ್ಯ. ಈ ಪಂದ್ಯದಲ್ಲಿ ಅವರು ಹಲವು ದಾಖಲೆ ಬರೆಯುವ ನಿರೀಕ್ಷೆಯಿದೆ. ರಾಜಸ್ಥಾನ ರಾಯಲ್ಸ್ ಆಡಿದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿದೆ. ಗುಜರಾತ್ ಟೈಟನ್ಸ್ ಮೂರು ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಅಹಮದಾಬಾದ್: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್‌ಗೆ ಆರಂಭಿಕ ಪಂದ್ಯಗಳಲ್ಲಿ ಮಿಶ್ರ ಪ್ರದರ್ಶನ ತೋರಿದ್ದಾರೆ. ಸೀಸನ್‌ನ ರಾಯಲ್ಸ್ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 37 ಎಸೆತಗಳಲ್ಲಿ 66 ರನ್ ಗಳಿಸಿ ಸಂಜು ಉತ್ತಮ ಆರಂಭ ಪಡೆದರು. ಆದರೆ ಇದರ ನಂತರ ಕೇರಳ ಮೂಲದ ಬ್ಯಾಟರ್ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ. ಸೀಸನ್‌ನ ಐದನೇ ಪಂದ್ಯದಲ್ಲಿ ಇಂದು ಗುಜರಾತ್ ಟೈಟನ್ಸ್ ವಿರುದ್ಧ ಸಂಜು ಕಣಕ್ಕಿಳಿಯಲಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ.

ಇಂದು ಗುಜರಾತ್ ಟೈಟನ್ಸ್ ವಿರುದ್ಧ ಆಡುವ ಮೂಲಕ ಸಂಜು ಸ್ಯಾಮ್ಸನ್ ತಮ್ಮ ವೃತ್ತಿ ಜೀವನದಲ್ಲಿ 300 ಟಿ20 ಪಂದ್ಯಗಳನ್ನು ಪೂರ್ಣಗೊಳಿಸಲಿದ್ದಾರೆ. ಟಿ20ಯಲ್ಲಿ 350 ಸಿಕ್ಸರ್‌ಗಳ ಮೈಲಿಗಲ್ಲನ್ನು ತಲುಪಲು ಸಂಜುಗೆ ಕೇವಲ ಎಂಟು ಬಿಗ್ ಶಾಟ್‌ಗಳ ದೂರವಿದೆ. ಇನ್ನೂ 121 ರನ್ ಗಳಿಸಿದರೆ, ಸಂಜು ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರವಾಗಿ 4,000 ರನ್ ಗಳಿಸಿದಂತಾಗುತ್ತದೆ. ಹೀಗೆ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ಹಲವು ಅಪರೂಪದ ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ. 

ಇದನ್ನೂ ಓದಿ: ಮುಂಬೈ ಎದುರು ಪಂದ್ಯ ಗೆದ್ದ ಆರ್‌ಸಿಬಿ ಸಂಭ್ರಮಕ್ಕೆ ಬ್ರೇಕ್; ನಾಯಕ ರಜತ್ ಪಾಟೀದಾರ್‌ಗೆ ಶಾಕ್!

ಹದಿನೆಂಟನೇ ಸೀಸನ್‌ ಐಪಿಎಲ್‌ನಲ್ಲಿ ಸಂಜು ಸ್ಯಾಮ್ಸನ್ ಅವರ ರಾಜಸ್ಥಾನ ರಾಯಲ್ಸ್ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ರಾಯಲ್ಸ್ ಮೊದಲ ಎರಡು ಪಂದ್ಯಗಳಲ್ಲಿ ಸೋತರೆ, ಮುಂದಿನ ಎರಡರಲ್ಲಿ ಗೆಲುವು ಸಾಧಿಸಿದೆ. ಹ್ಯಾಟ್ರಿಕ್ ಗೆಲುವಿನ ಗುರಿಯೊಂದಿಗೆ ಸಂಜು ಪಡೆ ಗುಜರಾತ್ ಟೈಟನ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಸಂಜು ನಾಯಕನ ಸ್ಥಾನಕ್ಕೆ ಮರಳಿದ ನಂತರ ತಂಡವು ಚೈತನ್ಯಗೊಂಡಿದೆ. 

ಸಂಜುಗೆ ಗುಜರಾತ್ ವಿರುದ್ಧದ ಪಂದ್ಯ ಬಹಳ ಮುಖ್ಯ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 11 ಎಸೆತಗಳಲ್ಲಿ 13 ರನ್, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ 20, ಪಂಜಾಬ್ ಕಿಂಗ್ಸ್ ವಿರುದ್ಧ 26 ಎಸೆತಗಳಲ್ಲಿ 28 ಹೀಗೆ ಕಳೆದ ಮೂರು ಪಂದ್ಯಗಳಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಸಂಜು ವಿಫಲವಾಗಿದ್ದಾರೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ನ ವೇಗದ ಬೌಲರ್ ಲಾಕಿ ಫರ್ಗುಸನ್ ಅವರ ಎಸೆತವನ್ನು ಮಿಡ್ ಆಫ್‌ಗೆ ಆಡಲು ಪ್ರಯತ್ನಿಸಿ ಸಂಜು ಔಟಾದರು. 

ಇದನ್ನೂ ಓದಿ: ಚೆನ್ನೈ ಧೂಳೀಪಟ ಮಾಡಿದ ಈ ಪ್ರಿಯಾನ್ಶ್‌ ಆರ್ಯಾ ಯಾರು? ಈತನ ಹಿನ್ನೆಲೆ ಏನು?

ಇದೀಗ ಬಲಿಷ್ಠ ಗುಜರಾತ್ ಟೈಟಾನ್ಸ್ ಎದುರು ಸಂಜು ಸ್ಯಾಮ್ಸನ್ ದೊಡ್ಡ ಇನ್ನಿಂಗ್ಸ್ ಆಡುವ ಮೂಲಕ ಫಾರ್ಮ್‌ಗೆ ಮರಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಸದ್ಯ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಆಡಿದ 4 ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ರಾಜಸ್ಥಾನ ರಾಯಲ್ಸ್ ತಲಾ 2 ಗೆಲುವು ಹಾಗೂ ಸೋಲುಗಳೊಂದಿಗೆ 7ನೇ ಸ್ಥಾನದಲ್ಲಿದೆ.

ಸಂಭಾವ್ಯ ಆಟಗಾರರ ಪಟ್ಟಿ:

ರಾಜಸ್ಥಾನ ರಾಯಲ್ಸ್: ಸಂಜು ಸ್ಯಾಮ್ಸನ್(ನಾಯಕ& ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ನಿತೀಶ್ ರಾಣಾ, ರಿಯಾನ್ ಪರಾಗ್, ಧೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ಕುಮಾರ್ ಕಾರ್ತಿಕೇಯ, ತುಷಾರ್ ದೇಶಪಾಂಡೆ.

ಗುಜರಾತ್ ಟೈಟಾನ್ಸ್: ಸಾಯಿ ಸುದರ್ಶನ್, ಶುಭ್‌ಮನ್ ಗಿಲ್(ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶೆರ್ಫಾನೆ ರುದರ್‌ಫೋರ್ಡ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ರಶೀದ್ ಖಾನ್, ಆರ್‌ ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ/ಅರ್ಶದ್ ಖಾನ್

ಪಂದ್ಯ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌