ಇಂಗ್ಲೆಂಡ್ ಫುಟ್ಬಾಲ್ ನಾಯಕ ಹ್ಯಾರಿ ಕೇನ್, ವಿಶ್ವಕಪ್ ತಯಾರಿಯ ನಡುವೆ ಕ್ರಿಕೆಟ್ ಆಡಿ, ತಮಾಷೆಯಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ ಮತ್ತು ಆರ್‌ಸಿಬಿಗೆ ಆಡಲು ಸಿದ್ಧ ಎಂದು ಟ್ವೀಟ್ ಮಾಡಿದ್ದಾರೆ. ಕೊಹ್ಲಿ ಜತೆಯೂ ಕೇನ್‌ ಉತ್ತಮ ಸ್ನೇಹ ಹೊಂದಿದ್ದಾರೆ.

ಬೆಂಗಳೂರು (ಜೂ.12): ವಿಶ್ವದ ಶ್ರೇಷ್ಠ ಫುಟ್‌ಬಾಲ್ ಆಟಗಾರರಲ್ಲಿ ಒಬ್ಬರಾದ ಇಂಗ್ಲೆಂಡ್ ತಂಡದ ನಾಯಕ ಹಾಗೂ ಸ್ಟಾರ್‌ ಸ್ಟ್ರೈಕರ್‌ ಹ್ಯಾರಿ ಕೇನ್, ಫಿಫಾ ವಿಶ್ವಕಪ್ ಮಹಾಸಮರಕ್ಕೆ ತಯಾರಿ ನಡೆಸುತ್ತಿರುವ ನಡುವೆಯೇ ತಮ್ಮೊಳಗಿನ ಕ್ರಿಕೆಟ್ ಪ್ರೇಮ ಹಾಗೂ ಹಾಸ್ಯಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ. ಸ್ಟಾರ್ ಸ್ಟ್ರೈಕರ್ ಹ್ಯಾರಿ ಕೇನ್ ತಮಾಷೆಯಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ ಹಾಗೂ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ತಮ್ಮ ಕ್ರಿಕೆಟ್ ಸೇವೆ ಒದಗಿಸಲು ಸಿದ್ದ ಎಂದು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫಿಫಾ ವಿಶ್ವಕಪ್ ಟೂರ್ನಿಗೂ ಮುನ್ನ ತಂಡದ ಆಟಗಾರರ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸಲು (Team Bonding Session) ಮಂಗಳವಾರ ಇಂಗ್ಲೆಂಡ್ ಫುಟ್‌ಬಾಲ್ ಆಟಗಾರರು ಫುಟ್‌ಬಾಲ್ ಮೈದಾನ ಬಿಟ್ಟು ಕ್ರಿಕೆಟ್ ಪಿಚ್‌ಗೆ ಇಳಿದಿದ್ದರು. ಈ ವೇಳೆ ಕ್ರಿಕೆಟ್ ಆಟವನ್ನು ಬಹುವಾಗಿ ಆನಂದಿಸಿದ ಹ್ಯಾರಿ ಕೇನ್, ತಾವು ಬ್ಯಾಟಿಂಗ್ ಮಾಡುತ್ತಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

"ಯಾವಾಗ ಬೇಕಿದ್ದರೂ ಮತ್ತು ಅಗತ್ಯವಿದ್ದರೆ ನಾನು ಸಿದ್ಧ, @englandcricket ಮತ್ತು @RCBTweets!" ಎಂದು ಹ್ಯಾರಿ ಕೇನ್ ತಮ್ಮ 'X' (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿದ್ದು, ಇದು ಫುಟ್‌ಬಾಲ್ ಹಾಗೂ ಕ್ರಿಕೆಟ್ ಪ್ರೇಮಿಗಳ ಕ್ರಾಸ್‌ಓವರ್‌ ಸಂಭ್ರಮಕ್ಕೆ ಕಾರಣವಾಗಿದೆ.

ಆರ್‌ಸಿಬಿ ಬ್ಯಾಕ್ ಟು ಬ್ಯಾಕ್ ಟ್ರೋಫಿ ಗೆದ್ದಾಗ ಕೊಹ್ಲಿಗೆ ಶುಭ ಕೋರಿದ್ದ ಕೇನ್!

ಟೂರ್ನಮೆಂಟ್‌ನಲ್ಲಿ ಆರ್‌ಸಿಬಿ ತಂಡವು ಸತತ ಎರಡನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಗೆದ್ದ ಬೆನ್ನಲ್ಲೇ ಹ್ಯಾರಿ ಕೇನ್ ಈ ಪೋಸ್ಟ್ ಹಾಕಿದ್ದಾರೆ. ಜರ್ಮನಿಯ ಬೇಯರ್ನ್ ಮ್ಯೂನಿಚ್ ಕ್ಲಬ್ ಪರ ಆಡುವ ಕೇನ್, ಭಾರತದ ರನ್‌ಮೆಷಿನ್ ವಿರಾಟ್ ಕೊಹ್ಲಿ ಅವರೊಂದಿಗೆ ಉತ್ತಮ ಸ್ನೇಹ ಹೊಂದಿದ್ದಾರೆ. ಐಪಿಎಲ್ 2026ರ ಭರ್ಜರಿ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್‌ಸಿಬಿ 5 ವಿಕೆಟ್‌ಗಳ ಜಯ ಸಾಧಿಸಿ ಚಾಂಪಿಯನ್ ಆದಾಗ, ಕೊಹ್ಲಿಯನ್ನು ಕೇನ್ ಮುಕ್ತಕಂಠದಿಂದ ಶ್ಲಾಘಿಸಿದ್ದರು.

"ಎಂಥಾ ಅದ್ಭುತ ಆಟಗಾರ ಮತ್ತು ಎಂತಹ ಅದ್ಭುತ ಇನ್ನಿಂಗ್ಸ್ ವಿರಾಟ್ ಕೊಹ್ಲಿ! ಸತತವಾಗಿ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆಗಳು," ಎಂದು ಕೇನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

ಆರ್‌ಸಿಬಿ ಕೂಡ ಈಗ ಐಪಿಎಲ್‌ನ ಗಣ್ಯ ಫ್ರಾಂಚೈಸಿಗಳ ಪಟ್ಟಿಗೆ ಸೇರಿದೆ. ಬರೋಬ್ಬರಿ 18 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ 2025 ರಲ್ಲಿ ತನ್ನ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದಿದ್ದ ಬೆಂಗಳೂರು ತಂಡ, ಈಗ 2026 ರಲ್ಲೂ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಮುಂಬೈ ಇಂಡಿಯನ್ಸ್ (MI) ನಂತರ ಸತತ ಎರಡು ಬಾರಿ ಐಪಿಎಲ್ ಗೆದ್ದ ಮೂರನೇ ತಂಡ ಎಂಬ ಕೀರ್ತಿಗೆ ಆರ್‌ಸಿಬಿ ಪಾತ್ರವಾಗಿದೆ.

ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಕೇನ್ ಸಾರಥ್ಯ; ಟುಚೆಲ್ ವಿಶೇಷ ತಂತ್ರ

ಮತ್ತೊಂದೆಡೆ, ಇಂಗ್ಲೆಂಡ್ ತಂಡದ ವಿಶ್ವಕಪ್ ಕನಸಿಗೆ 32 ವರ್ಷದ ಹ್ಯಾರಿ ಕೇನ್ ಅತ್ಯಂತ ಪ್ರಮುಖ ಆಟಗಾರನಾಗಿದ್ದಾರೆ. ಆದರೆ, ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾದಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳ ಸ್ಥಳಗಳಲ್ಲಿ ತೀವ್ರತರವಾದ ಹವಾಮಾನ ವೈಪರೀತ್ಯ (ಬಿಸಿಲು/ಸೆಖೆ) ಇರುವ ಕಾರಣ, ಇಂಗ್ಲೆಂಡ್ ತಂಡದ ಮ್ಯಾನೇಜರ್ ಥಾಮಸ್ ಟುಚೆಲ್ ಅವರು ಗ್ರೂಪ್ ಹಂತದ ಪಂದ್ಯಗಳಲ್ಲಿ ಕೇನ್ ಅವರ ಮೇಲಿನ ಕೆಲಸದ ಒತ್ತಡವನ್ನು (Workload) ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲು ನಿರ್ಧರಿಸಿದ್ದಾರೆ.

ಹ್ಯಾರಿ ಕೇನ್ ಇತ್ತೀಚೆಗೆ ಬೇಯರ್ನ್ ಮ್ಯೂನಿಚ್ ಪರ ಆಡಿದ 51 ಪಂದ್ಯಗಳಲ್ಲಿ ಬರೋಬ್ಬರಿ 61 ಗೋಲುಗಳನ್ನು ಗಳಿಸುವ ಮೂಲಕ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅಷ್ಟೇ ಅಲ್ಲದೆ, ಸೆಪ್ಟೆಂಬರ್ 2025 ರಿಂದ ಇಂಗ್ಲೆಂಡ್ ರಾಷ್ಟ್ರೀಯ ತಂಡದ ಪರ ಆಡಿದ 5 ಪಂದ್ಯಗಳಲ್ಲಿ 5 ಗೋಲು ಬಾರಿಸಿ ಅಬ್ಬರಿಸಿದ್ದಾರೆ. ಇಂಗ್ಲೆಂಡ್ ತಂಡವು ಕ್ರೊಯೇಷಿಯಾ ವಿರುದ್ಧ ಆಡುವ ಮೂಲಕ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ನಾಯಕ ಕೇನ್ ಅವರನ್ನು ಟೂರ್ನಿಯ ನಾಕೌಟ್ ಹಂತದ ಪಂದ್ಯಗಳಿಗೆ ಫ್ರೆಶ್ ಆಗಿ ಇಡಲು ಮ್ಯಾನೇಜರ್ ಬಯಸಿದ್ದು, ಆರಂಭಿಕ ಪಂದ್ಯಗಳಲ್ಲಿ ಓಲಿ ವಾಟ್ಕಿನ್ಸ್ ಮತ್ತು ಇವಾನ್ ಟೋನಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.