ಚೆನ್ನೈ ತಂಡದ ನಾಯಕನಾಗಿ 200ನೇ ಪಂದ್ಯವಾಡಿದ ಎಂಎಸ್‌ ಧೋನಿ ಗೆಲುವಿನ ಖುಷಿ ಪಡೆಯಲು ವಿಫಲವಾಗಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ 3 ರನ್‌ಗಳಿಂದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೋಲು ಕಂಡಿದೆ.

ಚೆನ್ನೈ (ಏ.12): ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕನಾಗಿ 200ನೇ ಪಂದ್ಯವಾಡಿದ ದಿಗ್ಗಜ ನಾಯಕ ಎಂಎಸ್‌ ಧೋನಿ ಗೆಲುವಿನ ಸಂಭ್ರಮ ಪಡೆಯುವಲ್ಲಿ ವಿಫಲರಾಗಿದ್ದಾರೆ. ಬುಧವಾರ ಎಂಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರಾಜಸ್ಥಾನ ರಾಯಲ್ಸ್ ವಿರುದ್ಧ 3 ರನ್‌ಗಳ ಸೋಲು ಕಂಡಿದೆ. ಇದು ಚೆಪಾಕ್‌ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್‌ ತಂಡಕ್ಕೆ 15 ವರ್ಷಗಳ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಬಂದ ಮೊದಲ ಗೆಲುವಾಗಿದೆ. 2008ರಲ್ಲಿ ಚೆನ್ನೈ ವಿರುದ್ಧ ಈ ಮೈದಾನದಲ್ಲಿ ಆಡಿದ್ದ ಪಂದ್ಯದಲ್ಲಿ 10 ರನ್‌ಗಳ ಗೆಲುವು ಸಾಧಿಸಿದ್ದ ರಾಜಸ್ಥಾನ ರಾಯಲ್ಸ್‌ ತಂಡ ನಂತರ ಇಲ್ಲಿ ಆಡಿದ ಎಲ್ಲಾ ಆರೂ ಪಂದ್ಯಗಳಲ್ಲಿ ಸೋಲು ಕಂಡಿತ್ತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ ರಾಯಲ್ಸ್‌ ತಂಡ ಜೋಸ್‌ ಬಟ್ಲರ್‌ ಅವರ ಆಕರ್ಷಕ ಅರ್ಧಶತಕ ಹಾಗೂ ಕೆಳಹಂತದಲ್ಲಿ ಶಿಮ್ರೋನ್‌ ಹೆಟ್ಮೆಯರ್‌ ಸ್ಪೋಟಕ ಇನ್ನಿಂಗ್ಸ್‌ನ ನೆರವಿನಿಂದ 8 ವಿಕೆಟ್‌ಗೆ 175 ರನ್‌ ಪೇರಿಸಿತ್ತು. ಪ್ರತಿಯಾಗಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡ 6 ವಿಕೆಟ್‌ಗೆ 172 ರನ್‌ ಬಾರಿಸಲಷ್ಟೇ ಶಕ್ತವಾಯಿತು.

ಚೇಸಿಂಗ್‌ ಆರಂಭಿಸಿದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ರುತುರಾಜ್‌ ಗಾಯಕ್ವಾಡ್‌ ವಿಕೆಟ್‌ಅನ್ನು ಆರಂಭದಲ್ಲಿಯೇ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ಡೆವೋನ್‌ ಕಾನ್ವೇ (50ರನ್,‌ 38 ಎಸೆತ, 6 ಬೌಂಡರಿ) ಹಾಗೂ ಅಜಿಂಕ್ಯ ರಹಾನೆ (31 ರನ್,19 ಎಸೆತ, 2 ಬೌಂಡರಿ, 1 ಸಿಕ್ಸರ್‌) 2ನೇ ವಿಕೆಟ್‌ಗೆ 68 ರನ್‌ ಜೊತೆಯಾಟವಾಡಿದರು. ರಾಜಸ್ಥಾನ ತಂಡದ ಗೆಲುವಿಗೆ ಅಡ್ಡಿಯಾಗುವಂತಿದ್ದ ಈ ಜೊತೆಯಾಟವನ್ನು ಅಶ್ವಿನ್‌ 10ನೇ ಓವರ್‌ನಲ್ಲಿ ಬೇರ್ಪಡಿಸಿದರು. ಆ ಬಳಿಕ ರಾಜಸ್ಥಾನ ತಂಡದ ಸ್ಪಿನ್ನರ್‌ಗಳು ಪ್ರಾಬಲ್ಯ ಸಾಧಿಸಲು ಆರಂಭಿಸಿದರು. ಶಿವಂ ದುಬೆ 8 ರನ್‌ ಬಾರಿಸಿ ಔಟಾದರೆ, ಮೊಯಿನ್‌ ಅಲಿ 7 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರು. ಅಂಬಟಿ ರಾಯುಡು 2 ಎಸೆತಗಳಲ್ಲಿ 1 ರನ್‌ ಬಾರಿಸಿ ಔಟಾದಾಗ ಚೆನ್ನೈ 103 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸೋಲುವ ಭೀತಿಯಲ್ಲಿತ್ತು. 

IPL 2023: ಬಟ್ಲರ್‌ ಅರ್ಧಶತಕ, ಚೆನ್ನೈಗೆ ಸವಾಲಿನ ಗುರಿ ನೀಡಿದ ರಾಜಸ್ಥಾನ!

113 ರನ್‌ ಬಾರಿಸುವ ವೇಳೆಗೆ ಕಾನ್ವೆ ಕೂಡ ಔಟಾದಾಗ ಚೆನ್ನೈ ತಂಡಕ್ಕೆ ಕೊನೆಯ 30 ಎಸೆತಗಳಲ್ಲಿ 63 ರನ್‌ ಬಾರಿಸಬೇಕಾದ ಸವಾಲಿತ್ತು. ರವೀಂದ್ರ ಜಡೇಜಾ (25ರನ್‌, 15 ಎಸೆತ, 1 ಬೌಂಡರಿ, 2 ಸಿಕ್ಸರ್‌), ಎಂಎಸ್‌ ಧೋನಿ (32 ರನ್‌, 17 ಎಸೆತ, 1 ಬೌಂಡರಿ, 3 ಸಿಕ್ಸರ್‌) ಗೆಲುವಿಗೆ ದೊಡ್ಡ ಮಟ್ಟದಲ್ಲಿ ಶ್ರಮಿಸಿದರೂ ಕೊನೇ ಹಂತದಲ್ಲಿ ರಾಜಸ್ಥಾನ ತಂಡ ಎಚ್ಚರಿಕೆ ಬೌಲಿಂಗ್‌ ಮಾಡಿದ್ದರಿಂದ ಗೆಲುವು ಕಂಡಿತು. 

IPL 2023 ಹೊಸ ಮೈಲಿಗಲ್ಲು ನಿರ್ಮಿಸಲು ಸಜ್ಜಾದ ಎಂಎಸ್ ಧೋನಿ, ಕ್ರೀಡಾಂಗಣದತ್ತ ಅಭಿಮಾನಿಗಳ ಆಗಮನ!

ಸಂದೀಪ್‌ ಶರ್ಮ ಎಸೆದ ಕೊನೇ ಓವರ್‌ನಲ್ಲಿ ಚೆನ್ನೈ ತಂಡದ ಗೆಲುವಿಗೆ 21 ರನ್‌ ಬೇಕಿದ್ದವು. ಆದರೆ, ಚೆನ್ನೈ 17 ರನ್‌ ಬಾರಿಸಲಷ್ಟೇ ಯಶ ಕಂಡಿತು.ಮೊದಲ ಎರಡು ಎಸೆತವನ್ನು ವೈಡ್‌ ಮಾಡಿದ್ದ ಸಂದೀಪ್‌ ಶರ್ಮ, ನಂತರದ ಎಸೆತದಲ್ಲಿ ರನ್‌ ನೀಡಿರಲಿಲ್ಲ. 2 ಹಾಗೂ ಮೂರನೇ ಎಸೆತವನ್ನು ಧೋನಿ ಸಿಕ್ಸರ್‌ಗಟ್ಟುವ ಮೂಲಕ ಚೆನ್ನೈಗೆ ಗೆಲುವಿನ ಲಕ್ಷಣ ನೀಡಿದ್ದರು. ಕೊನೇ ಮೂರು ಎಸೆತದಲ್ಲಿ 7 ರನ್‌ ಬೇಕಿದ್ದಾಗ ಎಲ್ಲರೂ ಚೆನ್ನೂ ಗೆಲುವು ಕಾಣಲಿದೆ ಎಂದೇ ಭಾವಿಸಿದ್ದರು. ಆದರೆ, 4 ಹಾಗೂ 5ನೇ ಎಸೆತದಲ್ಲಿ ಸಂದೀಪ್‌ ಶರ್ಮ ಒಂದೊಂದು ರನ್‌ ನೀಡಿದರು. ಕೊನೇ ಎಸೆತದಲ್ಲಿ ಗೆಲುವಿಗೆ 5 ರನ್‌ ಬೇಕಿದ್ದಾಗ ಧೋನಿ 1 ರನ್‌ ಬಾರಿಸಲಷ್ಟೇ ಯಶ ಕಂಡಿದ್ದರಿಂದ ರಾಜಸ್ಥಾನ ಭರ್ಜರಿ ಗೆಲುವು ಕಂಡಿತು.